
ಹಾನಗಲ್ ತಾಲ್ಲೂಕಿನ ಕೂಸನೂರ ಗ್ರಾಮದಲ್ಲಿ ಮಲಗುಂಡಿ ಸ್ವಚ್ಚಗೊಳಿಸುವ ಕೆಲಸದಲ್ಲಿ ನಿರತರಾದವರನ್ನು ಅಧಿಕಾರಿಗಳು ಮಂಗಳವಾರ ತಡೆದರು
ಹಾನಗಲ್: ತಾಲ್ಲೂಕಿನ ಕೂಸನೂರ ಗ್ರಾಮದಲ್ಲಿ ಖಾಸಗಿ ಶೌಚಾಲಯ ಮಲಗುಂಡಿ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದವರನ್ನು ಅಧಿಕಾರಿಗಳು ತಡೆದ ಘಟನೆ ಮಂಗಳವಾರ ನಡೆದಿದೆ.
ಗ್ರಾಮದ ಸುರೇಶ ಪೂಜಾರ ಮತ್ತು ಬಸವರಾಜ ಪೂಜಾರ ಅವರಿಗೆ ಸೇರಿದ ಶೌಚಾಲಯ ಮಲಗುಂಡಿಯನ್ನು ಇಬ್ಬರು ಕೆಲಸಗಾರರು ಯಾವುದೇ ಸುರಕ್ಷತಾ ಸಲಕರಣೆ ಬಳಸದೆ ಪಕ್ಕದ ತಿಪ್ಪೆಯಲ್ಲಿ ಸಂಗ್ರಹಿಸುವ ಕಾರ್ಯ ಮಾಡುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದರು.
ಮಲ ತೆಗೆಯುವ ಕೆಲಸ ತೊಡಗಿದ ಇಬ್ಬರೂ ಕಾರ್ಮಿಕರನ್ನು ಆಡೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿದು ಬಂದಿದೆ ಎಂದು ತಹಶೀಲ್ದಾರ್ ರೇಣುಕಾ ಎಸ್ ತಿಳಿಸಿದ್ದಾರೆ.
ಮಲಗುಂಡಿ ಸ್ವಚ್ಚಗೊಳಿಸುವ ಅನಿಷ್ಟ ಪದ್ಧತಿ ನಿಷೇಧವಿದೆ. ಘಟನೆ ಕುರಿತು ಆಡೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರೇಣುಕಾ ಎಸ್ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ, ಆಡೂರ ಪೊಲೀಸ್ ಠಾಣೆ ಪಿಎಸ್ಐ ಶರಣಪ್ಪ ಹಂಡ್ರಗಲ್, ಪಿಡಿಒ ಎಸ್.ಸಿ. ಮದ್ಲೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.