ಹಾನಗಲ್: ಹೊರ ರಾಜ್ಯ ಮತ್ತು ವಿದೇಶಗಳಿಗೆ ರಫ್ತಾಗುವ ಈ ಭಾಗದ ಉತ್ಕೃಷ್ಟ ರುಚಿಯ ಮಾವು ಬೆಳೆಯ ಇಳುವರಿ ಇಳಿಮುಖವಾಗಿದೆ. ಬಹುತೇಕ ಬೆಳೆಗಾರರು ಮಾವು ಬೆಳೆಯಿಂದ ವಿಮುಖರಾಗುತ್ತಿದ್ದಾರೆ.
ಎಕರೆಗೆ ಸರಾಸರಿ 3ರಿಂದ 4 ಟನ್‌ನಷ್ಟು ಮಾವು ಇಳುವರಿ ಸಿಗುತ್ತಿತ್ತು. ಆದರೆ ಈಗೀಗ ನಿರೀಕ್ಷೆಯಷ್ಟು ಫಸಲು ಸಿಗುತ್ತಿಲ್ಲ ಎಂಬುದು ರೈತರ ಕೊರಗು. ಎರಡು ವರ್ಷದಲ್ಲಿ ಸುಮಾರು 300 ಹೆಕ್ಟೇರ್ ಮಾವು ಕ್ಷೇತ್ರ ತೆರವುಗೊಂಡಿದೆ.
ಮಾವಿಗಿಂತ ಅಡಿಕೆ ಬೆಳೆ ಹೆಚ್ಚು ಲಾಭದಾಯಕವೆಂದು ರೈತರು ಸಾಕಷ್ಟು ಪ್ರಮಾಣದಲ್ಲಿ ಮಾವಿನ ಗಿಡಗಳನ್ನು ತೆರವು ಮಾಡಿದ್ದಾರೆ. ಸದ್ಯ ತಾಲ್ಲೂಕಿನಲ್ಲಿ 3,200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆಪೂಸ್, ತೋತಾಪುರಿ, ಮಲ್ಲಿಕಾ, ಕೆಎಸ್‌ಆರ್ ತಳಿಯ ಮಾವು ಬೆಳೆಯಲಾಗುತ್ತದೆ. ಅಡಿಕೆ ಬೆಳೆ 11,440 ಹೆಕ್ಟೇರ್ ಇದೆ.
ಮಾವು ಬೆಳೆಯನ್ನು ಬಹುತೇಕ ಕಟಾವು ಮಾಡಲಾಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಎರಡು ದಿನಗಳಿಂದ ಮಂಡಿಗಳಿಗೆ ಮಾವಿನಕಾಯಿಗಳ ಪೂರೈಕೆ ನಿಂತಿದೆ. ಮಳೆ ಬಿಡುವು ನೀಡಿದ ಬಳಿಕ ಅಳಿದುಳಿದ ಮಾವು ಮಂಡಿ ಸೇರಲಿದೆ. ಈ ನಡುವೆ, ಮುಂಗಡವಾಗಿ ಗುತ್ತಿಗೆ ಪಡೆದ ಹಣ್ಣಿನ ವ್ಯಾಪಾರಿಗಳು ಕಾಯಿಗಳನ್ನು ಮಾಗಿಸಿ ಮಾರಾಟಕ್ಕೆ ಸಿದ್ಧಗೊಳಿಸಿದ್ದಾರೆ.
ಸದ್ಯ ಈ ಭಾಗದಲ್ಲಿ ಮಾವು ವಹಿವಾಟು ಜೋರಾಗಿ ನಡೆದಿದೆ. ಮಂಡಿಗಳಲ್ಲಿ ಹಸಿ ಕಾಯಿಗಳನ್ನು ಪ್ರತ್ಯೇಕಗೊಳಿಸಿ ಉತ್ತಮ ಗುಣಮಟ್ಟದ ಮಾವಿನ ಹಣ್ಣು ಮಾಡಲು ಮತ್ತು ಇನ್ನುಳಿದ ಕಾಯಿಗಳನ್ನು ಜ್ಯೂಸ್ ಕಾರ್ಖಾನೆಗೆ ಕಳಿಸುವ ವ್ಯವಸ್ಥೆ ನಡೆದಿದೆ.
‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ದರ ಕುಸಿದಿದೆ. ಜ್ಯೂಸ್ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದ ಟನ್ ಮಾವಿಗೆ ಕಳೆದ ವರ್ಷ ₹50,000ದವರೆಗೆ ದರ ಸಿಕ್ಕಿತ್ತು. ಮಾವು ಹೂವು ಬಿಡುವ ವೇಳೆಯಿಂದ ಹಿಡಿದು ಕಟಾವ್ವು ತನಕ ಹವಾಮಾನ ವೈಪರೀತ್ಯ ಎದುರಿಸುತ್ತದೆ’ ಎಂದು ಇಲ್ಲಿನ ಎಚ್‌ಕೆಎಚ್ ಮಾವಿನಮಂಡಿಯ ಮಾಲೀಕ ಮುನೀರ್‌ಅಹ್ಮದ್ ಹೇಳಿದರು.
‘ಮಾವು ನಿರೀಕ್ಷಿತ ಫಸಲು ನೀಡುತ್ತಿಲ್ಲ. ಇದಕ್ಕೆ ಹವಾಮಾನ ವೈಪರೀತ್ಯ ಕಾರಣ. ಐದು ಎಕರೆ ಜಮೀನಿನಲ್ಲಿ 25 ವರ್ಷದಿಂದ ಬೆಳೆಸಿದ್ದ 250 ಮಾವಿನ ಗಿಡಗಳನ್ನು ಕಳೆದ ವರ್ಷ ತೆರವು ಮಾಡಿದೆ. ಅಡಿಕೆ ಬೆಳೆಗೆ ಸಿದ್ಧತೆ ನಡೆಸಿದ್ದೇನೆ’ ಎಂದು ತಾಲ್ಲೂಕಿನ ಸಾವಸಗಿ ಗ್ರಾಮದ ಮಾವು ಬೆಳೆಗಾರ ಮಾರುತಿ ಶಿಡ್ಲಾಪುರ್ ಹೇಳಿದರು.
ನಮ್ಮಂತಹ ರೈತರಿಗೆ ಮಾವು ಬೆಳೆ ನಿರ್ವಹಣೆ ಮತ್ತು ಮಾರುಕಟ್ಟೆ ಜ್ಞಾನ ಅಷ್ಟಾಗಿ ಇರದು. ಸಾಂಪ್ರದಾಯಿಕ ಪದ್ಧತಿಗಳು ಲಾಭದಾಯಕ ಆಗುತ್ತಿಲ್ಲ.ಈ ಭಾಗದಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣಗೊಂಡಿದ್ದರೆ, ಮಾರುಕಟ್ಟೆ ವ್ಯವಸ್ಥೆ ಉತ್ತಮಗೊಳುತ್ತಿತ್ತು’ ಎಂದರು.
‘ಮಾವು ಗಿಡಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ 10 ಟನ್‌ವರೆಗೆ ಇಳುವರಿ ಪಡೆಯಬಹುದು. ಈ ಬಾರಿ ಇಳುವರಿ ಕಡಿಮೆಯಾದರೂ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿದೆ. ಜ್ಯೂಸ್‌ಗೆ ಬಳಕೆಯಾಗುವ ಮಾವು ಟನ್‌ಗೆ ₹30000ದವರೆಗೆ ದರವಿದೆ. ಉತ್ತಮ ಗುಣಮಟ್ಟದ ಹಣ್ಣು ಮಾಡುವ ಮಾವಿನಕಾಯಿ ಟನ್‌ಗೆ ₹70000 ಇದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಮಾವು ಗುಣಮಟ್ಟ ಮತ್ತು ಅಧಿಕ ಇಳುವರಿಗೆ ಹಾನಗಲ್ ವಾತಾವರಣ ಸೂಕ್ತವಾಗಿದೆ. ಹೂ ಬಿಡುವ ಹಂತದಿಂದಲೇ ಮಾವಿನಗಿಡದ ನಿರ್ವಹಣೆ ಮಾಡಬೇಕು. ತೋಟವನ್ನು ವ್ಯಾಪಾರಸ್ಥರಿಗೆ ಗುತ್ತಿಗೆ ನೀಡುವ ಪದ್ಧತಿ ಮಾವು ಇಳುವರಿಗೆ ಮಾರಕವಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.