ADVERTISEMENT

ಯಳ್ಳೂರ | ಹದಗೆಟ್ಟ ಸಂಪರ್ಕ ರಸ್ತೆ: ಕೆರೆಯ ಕಾಲುವೆಯಿಂದ ತೊಂದರೆ

ಮಾರುತಿ ಪೇಟಕರ
Published 3 ಸೆಪ್ಟೆಂಬರ್ 2025, 3:57 IST
Last Updated 3 ಸೆಪ್ಟೆಂಬರ್ 2025, 3:57 IST
   

ಹಾನಗಲ್: ಮೂಲ ಸೌಲಭ್ಯ ವಂಚಿತ ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಯ ಲೋಪದಿಂದಾಗಿ ಜಲಮೂಲ ಕೂಡ ಕಲುಶಿತಗೊಳ್ಳುತ್ತಿದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳು ಕೆಸರುಗದ್ದೆಯಾಗುತ್ತಿವೆ.

ಕೃಷಿ ಕಾರ್ಮಿಕರೇ ಹೆಚ್ಚಿರುವ ಯಳ್ಳೂರ ಗ್ರಾಮದಲ್ಲಿ ಕೋರಂಕಟ್ಟಿ, ಮಟ್ಲಕಟ್ಟಿ ಎಂಬ ಜೋಡು ಕೆರೆ ಇದೆ. ಯಳ್ಳೂರ ಗ್ರಾಮ ಮತ್ತು ಗ್ರಾಮದ ಪ್ಲಾಟ್‌ ಭಾಗವನ್ನು ಈ ಕೆರೆ ವಿಭಜಿಸುತ್ತದೆ. ಗ್ರಾಮ ಮತ್ತು ಪ್ಲಾಟ್‌ ಸೇರಿ ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ.

ಪ್ಲಾಟ್‌ ಭಾಗದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡು ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಯಳ್ಳೂರ ಗ್ರಾಮದಲ್ಲಿ ಈತನಕ ಜಲಜೀವನ್‌ ಮಿಷನ್‌ ಮುಕ್ತಾಗೊಂಡಿಲ್ಲ. ಕಾಮಗಾರಿ ನೆಪದಲ್ಲಿ ಗ್ರಾಮದ ಓಣಿಗಳ ಸಿಸಿ ರಸ್ತೆಯಲ್ಲಿ ಬಗೆದು ಹಾಕಲಾಗಿದೆ. ಗ್ರಾಮಸ್ಥರು ಮನೆ ಮುಂದೆ ಓಡಾಡಲು ಫಜೀತಿ ಪಡುತ್ತಿದ್ದಾರೆ.

ADVERTISEMENT

ಇಲ್ಲಿ ನರೇಗಾ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಮರಿಚಿಕೆಯಾಗಿವೆ.

ಕಸ ಸಂಗ್ರಹಣೆಗೆ ಪಂಚಾಯ್ತಿ ವಾಹನ ಬರುತ್ತಿಲ್ಲ. ಮನೆ ತ್ಯಾಜ್ಯ ಕೆರೆ ಅಂಗಳ ಸೇರುತ್ತಿದೆ. ಈಗ ಉತ್ತಮ ಮಳೆಯಿಂದ ಕೆರೆ ತುಂಬಿ ಹರಿಯುತ್ತಿದೆ. ಕೆರೆಯ ಕೋಡಿ ಕಾಲುವೆ ಭಾಗ ಅಲ್ಲಲ್ಲಿ ಅತಿಕ್ರಮಣಗೊಂಡಿದೆ. ಹೆಚ್ಚು ಮಳೆಯಾದಾಗ ಕೋಡಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ.

ಕೆರೆಯ ಕೋಡಿ ಕಾಲುವೆ ವ್ಯವಸ್ಥೆ ಸುಧಾರಣೆಗೊಳ್ಳಬೇಕು. ಕೆರೆ ತುಂಬಿದರೆ ಪ್ಲಾಟ್‌ ಭಾಗದ ನಿವಾಸಿಗಳಿಗೆ ಗೋಳು ಎಂದು ಮುನೀರ್‌ಸಾಬ ಕಳಸದ, ಅಬ್ದುಲ್‌ರಷೀದ್‌ ಬಸರಿಟ್ಟಿ ಹೇಳಿದರು.

ಯಳವಟ್ಟಿ ಗ್ರಾಮ ಪಂಚಾಯ್ತಿಗೆ ಸೇರುವ ನಮ್ಮ ಗ್ರಾಮದಲ್ಲಿ ನಾಲ್ಕು ಜನ ಗ್ರಾಮ ಪಂಚಾಯ್ತಿ ಸದಸ್ಯರಿದ್ದಾರೆ. ನಮ್ಮೂರಿನವರೇ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದಾರೆ. ಆದರೆ ಅಭಿವೃದ್ಧಿ ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ತಡಸ–ಶಿಕಾರಿಪೂರ ರಸ್ತೆಯಿಂದ ನಮ್ಮ ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟಿದೆ ಎಂದು ಗ್ರಾಮಸ್ಥ ಶಿವಕುಮಾರ ದೇವಿಹೊಸೂರ ಹೇಳಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಒಂದು ಬದಿಯಲ್ಲಿ ನೀರಿನ ಹೊಂಡ ಇದೆ. ಮತ್ತೊಂದು ಬದಿಗೆ ಕೆರೆ ಇದೆ. ಹೀಗಾಗಿ ಶಾಲೆಗೆ ಸದೃಢ ಆವರಣ ಗೋಡೆ ನಿರ್ಮಾಣ ಮಾಡಬೇಕು ಎಂದು ಗ್ರಾಮದ ಮಂಜುನಾಥ ಪಾಟೀಲ ಆಗ್ರಹಿಸಿದರು. ಯಳ್ಳೂರ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ನಲ್ಲಿಗೆ ನೀರು ಹರಿಸಿದ ಬಳಿಕ ಕಾಮಗಾರಿ ಸಮಯದಲ್ಲಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದ್ದಾರೆ.

‘ಮುಖ್ಯರಸ್ತೆಯಿಂದ ಯಳ್ಳೂರ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ರಸ್ತೆಯ ಕೆಲಭಾಗ ಜಮೀನು ಜಾಗೆ ನಮ್ಮದು ಎಂದು ರೈತರೊಬ್ಬರು ರೈತ ನ್ಯಾಯಾಲಯದಿಂದ ತಡೆ ತಂದಿರುವ ಕಾರಣಕ್ಕೆ ಕಾಮಗಾರಿ ನಿಂತಿದೆ. ಸಮಸ್ಯೆಯನ್ನು ಸರಿಪಡಿಸಿ ಕೊಂಡು ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿ ಮುಂದುವರೆಸುತ್ತೇವೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‌ ಹೇಳುತ್ತಾರೆ.

ಮುಖ್ಯರಸ್ತೆಯಿಂದ ಯಳ್ಳೂರ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಒಬ್ಬ ರೈತರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ವಿಳಂಬವಾಗಿದೆ.
– ದೇವರಾಜ, ಎಇಇ, ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.