ADVERTISEMENT

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ: ಕುಟುಂಬಸ್ಥರೊಂದಿಗೆ ‘ಅರುಣಾನಂದ’

‘ಜಿಮ್ಮಿ’, ‘ಭೀಮಾ’ ಮುದ್ದಿನ ನಾಯಿಗಳೊಂದಿಗೆ ಕಾಲ ಕಳೆದ ಪೂಜಾರ

ಎಸ್.ಎಸ್.ನಾಯಕ
Published 6 ಡಿಸೆಂಬರ್ 2019, 19:31 IST
Last Updated 6 ಡಿಸೆಂಬರ್ 2019, 19:31 IST
ತನ್ನ ಪ್ರೀತಿಯ ಶ್ವಾನ ಜಿಮ್ಮಿಯೊಂದಿಗೆ ಅರುಣಕುಮಾರ್
ತನ್ನ ಪ್ರೀತಿಯ ಶ್ವಾನ ಜಿಮ್ಮಿಯೊಂದಿಗೆ ಅರುಣಕುಮಾರ್   

ಕುಮಾರಪಟ್ಟಣ: ಸಾಲು ಸಾಲು ನಾಯಕರನ್ನು ಹಿಂದಿಕ್ಕಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅರುಣಕುಮಾರ್ ಪೂಜಾರ್ (ಎಂ.ಎಂ.ಪಿ) ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಟಿಕೆಟ್ ಪಡೆದ ದಿನದಿಂದ ಕಾಲಿಗೆ ಚಕ್ರ ಕಟ್ಟಿದವರಂತೆ ಕ್ಷೇತ್ರದಲ್ಲಿ ಸುತ್ತಾಡಿ ಸಂಚಲನ ಮೂಡಿಸಿದ್ದರು.

ಕೊನೇ ಕ್ಷಣದವರೆಗೂ ಕ್ಷೇತ್ರದ ಮತದಾರ ಪ್ರಭುವಿನ ಕಾಲಿಗೆರಗಿದ ಅರುಣಕುಮಾರ್ ಶುಕ್ರವಾರ ತನ್ನ ಶೇವಿಂಗ್ ಹಾಗೂ ಸ್ನಾನ ಮುಗಿಸಿ ಮನೆಯಲ್ಲೇ ಉಳಿದು ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಉಪಾಹಾರ ಸೇವಿಸಿದರು. ಎಂದಿನಂತೆ ಗಿಡಗಳಿಗೆ ನೀರು ಹಾಯಿಸುವುದು, ಪತ್ರಿಕೆ, ಟಿವಿ ಕಡೆಗೆ ಕಣ್ಣಾಡಿಸುತ್ತಲೇ ತಾವೇ ಸಾಕಿದ ‘ಜಿಮ್ಮಿ’ ಮತ್ತು ‘ಭೀಮಾ’ ಎಂಬ ಶ್ವಾನಗಳನ್ನು ಮುದ್ದಿಸಿ ಗಮನ ಸೆಳೆದರು.

ಬಳಿಕ ಬೆಳಿಗ್ಗೆಯಿಂದಲೇ ಮನೆಗೆ ಬಂದ ಮುಖಂಡರು, ಹಿತೈಷಿಗಳು ಹಾಗೂ ಸ್ನೇಹಿತರಿಂದ ಮತಗಟ್ಟೆವಾರು ಮಾಹಿತಿ ಸಂಗ್ರಹಿಸಿ ಗೆಲುವಿನ ಗಣಿತ ಲೆಕ್ಕಾಚಾರ ಹಾಕುತ್ತಲೇ ಗೆಲುವು ನನ್ನದೆ ಎಂದು ಮದುವೆ ಹಾಗೂ ಇತರೆ ಶುಭ ಕಾರ್ಯಗಳಿಗೆ ತೆರಳಿದರು.

ಕೈ ಹಿಡಿದಿರುವ ಭರವಸೆ:ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಮಾಜಿ ಶಾಸಕ ಜಿ. ಶಿವಣ್ಣನವರ ಸಾಧನೆಗಳೇ ಗೆಲುವಿನ ಶ್ರೀರಕ್ಷೆಯಾಗಲಿದೆ. ಎಲ್ಲ ಗ್ರಾಮಗಳಲ್ಲಿ ತಾಯಂದಿರು, ಯುವಕರು, ಹಿರಿಯರು ಆದರದ ಸ್ವಾಗತ ನೀಡಿ ಮನೆಯ ಮಗನಂತೆ ಸತ್ಕರಿಸಿದರು. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಆಶೀರ್ವದಿಸಿದ್ದಾರೆ. ಹಾಗಾಗಿ ಬಿಜೆಪಿಗೆ ಅಂತರದ ಗೆಲುವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ನಾಯಕರ ಸಾಥ್:ಪಕ್ಷದ ವರಿಷ್ಠರು ಪಕ್ಷ ನಿಷ್ಠೆ ಗುರುತಿಸಿ ಸ್ಪರ್ಧೆಗೆ ಅವಕಾಶ ಕಲ್ಪಿಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಗಲು ರಾತ್ರಿ ಶ್ರಮಿಸಿದರು. ಉಳಿದಂತೆ ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಹಾಲಿ ಹಾಗೂ ಮಾಜಿ ಶಾಸಕರು, ಮಹಿಳಾ ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ. ಹಾಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಅಕ್ರಮ ತಡೆ ಸವಾಲು:ಕ್ಷೇತ್ರದಲ್ಲಿ ಅಕ್ರಮ ಮರಳು ಮಾಫಿಯಾ ಬಹು ದಿನಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಬಡವರು ಮನೆ ಕಟ್ಟಲು ಮರಳಿಗಾಗಿ ಪರದಾಡುವಂತಾಗಿದೆ. ಕಾನೂನು ಬಾಹಿರ ಇತರೆ ಯಾವುದೇ ದಂಧೆಗಳಿದ್ದರೂ ಮಟ್ಟ ಹಾಕುವುದೇ ನನ್ನ ಮುಂದಿನ ಸವಾಲು. ಅವಕಾಶ ಸಿಕ್ಕರೆ ಇಡೀ ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಅರುಣಕುಮಾರ್ 'ಪ್ರಜಾವಾಣಿ'ಯೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.