ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ಹಾದು ಹೋಗಿರುವ ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣ ಕೆಲಸ ತರಾತುರಿಯಲ್ಲಿ ನಡೆಯುತ್ತಿದ್ದು, ‘ಇದೊಂದು ಅನಧಿಕೃತ ಟೋಲ್ ಗೇಟ್’ ಎಂಬ ಆರೋಪ ಕೇಳಿಬಂದಿದೆ.
ಹಾನಗಲ್ ತಾಲ್ಲೂಕಿನ ಕರಗುದರಿ ಗ್ರಾಮದ ಹೊರವಲಯದಲ್ಲಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ ದ್ವಾರಬಾಗಿಲು ಹಾಗೂ ಕೌಂಟರ್ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಟೋಲ್ ಗೇಟ್ ಆರಂಭವಾಗುವ ಸೂಚನೆಯೂ ಸಿಕ್ಕಿದ್ದು, ಈ ಟೋಲ್‌ಗೇಟ್ ಆರಂಭವಾದರೆ ಸ್ಥಳೀಯರ ಜೇಬಿಗೂ ಕತ್ತರಿ ಬೀಳಲಿದೆ.
ಟೋಲ್ ಗೇಟ್ ನಿರ್ಮಾಣದ ಸುಳಿವು ಸಿಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಹಾಗೂ ಇತರೆ ಸಂಘಟನೆಗಳ ಮುಖಂಡರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಟೋಲ್ ಗೇಟ್ ನಿರ್ಮಾಣಕ್ಕೆ ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳೀಯರು ಸಹ ಟೋಲ್ ಗೇಟ್ ನಿರ್ಮಾಣ ಮಾಡದಂತೆ ಆಗ್ರಹಿಸಿದ್ದರು.
ವಿರೋಧದ ನಡುವೆಯೂ ಟೋಲ್ ಗೇಟ್ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಟೋಲ್ ಗೇಟ್ ನಿರ್ವಹಣೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು, ಬಹುಬೇಗನೇ ಟೋಲ್ ಗೇಟ್ ಆರಂಭಿಸಲು ತಯಾರಿ ನಡೆಸಿದ್ದಾರೆ. ‘ಅಕ್ರಮ ಟೋಲ್‌ಗೇಟ್’ ಎಂಬುದಾಗಿ ಸ್ಥಳೀಯರು ದೂರು ನೀಡಿದರೂ ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ಅಧಿಕಾರಿಗಳು, ಟೋಲ್ ಗೇಟ್ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾನಗಲ್ ಪಟ್ಟಣದ ಹೊರವಲಯದಲ್ಲಿರುವ ಮಲ್ಲಿಗಾರ ಗ್ರಾಮದಿಂದ ಕರಗುದರಿ ಗ್ರಾಮದ ನಡುವಿನ ಜಾಗದಲ್ಲಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ. ನಿರ್ಮಾಣ ಕೆಲಸ ಪೂರ್ಣಗೊಂಡು ಟೋಲ್‌ಗೇಟ್ ಆರಂಭವಾದರೆ, ಮಲ್ಲಿಗಾರದಿಂದ ಕರಗುದರಿ ಗ್ರಾಮಕ್ಕೆ ಹೋಗುವವರು ಸಹ ಟೋಲ್ ಪಾವತಿಸಬೇಕಾದ ಅನಿವಾರ್ಯ ಎದುರಾಗಲಿದೆ.
ಹಾನಗಲ್ ತಾಲ್ಲೂಕು ಕೇಂದ್ರವಾಗಿರುವುದರಿಂದ ಹಲವು ಗ್ರಾಮಗಳ ಜನರು, ನಿತ್ಯವೂ ಹಾನಗಲ್‌ಗೆ ಬಂದು ಹೋಗುತ್ತಾರೆ. ಇವರೆಲ್ಲರೂ ಟೋಲ್‌ಗೇಟ್ ದಾಟಿಯೇ ಹೋಗಬೇಕು. ಈ ಸಂದರ್ಭದಲ್ಲಿ ಟೋಲ್ ಪಾವತಿಸುವುದು ಕಡ್ಡಾಯವಾಗಲಿದೆ. ಇದೇ ಕಾರಣಕ್ಕೆ ಸ್ಥಳೀಯರು, ಟೋಲ್‌ಗೇಟ್ ಸ್ಥಳಾಂತರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಕರಗುದರಿ, ಮಹಾರಾಜಪೇಟೆ, ನಿಟಗಿನಕೊಪ್ಪ, ಯಲಿವಾಳ, ಯಳ್ಳವಟ್ಟಿ, ಬೊಮ್ಮನಹಳ್ಳಿ, ಬೆಳಗಾಲಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಟೋಲ್ ಹೊರೆಯಾಗಲಿದೆ.
‘2018ರಲ್ಲಿ ರಸ್ತೆ ನಿರ್ಮಾಣವಾಗಿದ್ದು, ಅಂದಿನಿಂದ ಉಚಿತವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಏಳು ವರ್ಷಗಳ ಬಳಿಕ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ. ಈ ಟೋಲ್‌ಗೇಟ್‌ನಿಂದಾಗಿ ಸ್ಥಳೀಯ ಜನರ ಜೇಬಿಗೆ ಕತ್ತರಿ ಬೀಳಲಿದೆ. ಯಾವುದೇ ಕಾರಣಕ್ಕೂ ಟೋಲ್‌ಗೇಟ್ ಆರಂಭಿಸಬಾರದು’ ಎಂದು ಕರಗುದರಿ ಗ್ರಾಮದ ಮೆಹಬೂಬ್ ದೂರಿದರು.
‘ಟೋಲ್‌ಗೇಟ್ ಆರಂಭಕ್ಕೂ ಮುನ್ನವೇ ತಹಶೀಲ್ದಾರ್ ಹಾಗೂ ಇತರರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಮನವಿ ಪರಿಶೀಲನೆ ಸಹ ಸಮರ್ಪಕವಾಗಿ ಆಗಿಲ್ಲ. ಸ್ಥಳೀಯರ ವಿರೋಧದ ನಡುವೆಯೇ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ’ ಎಂದರು.
ಸ್ಥಳೀಯರಿಗೆ ಹೊರೆಯಾಗುತ್ತಿರುವ ಟೋಲ್ ಗೇಟ್ ನಿರ್ಮಾಣ ಕೈಬಿಡಬೇಕು. ಇಲ್ಲದಿದ್ದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದುಲೋಕೇಶ್ ಬೆಳಗಾಲಪೇಟೆ ನಿವಾಸಿ
‘ಸ್ಥಳ ಬದಲಿಸಿ ಟೋಲ್‌ಗೇಟ್ ನಿರ್ಮಾಣ’ ಶಿವಮೊಗ್ಗ–ತಡಸ ಮಾರ್ಗದ ಶಿಕಾರಿಪುರ ಬಳಿ ಕೆಆರ್‌ಡಿಸಿಎಲ್ ವತಿಯಿಂದ ಈಗಾಗಲೇ ಟೋಲ್‌ಗೇಟ್ ನಿರ್ಮಿಸಲಾಗಿದೆ. ಈಗ ಹಾನಗಲ್ ಬಳಿ ಟೋಲ್‌ಗೇಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ. ‘ಮಹಾರಾಜಪೇಟೆ ಬಳಿ ಟೋಲ್‌ಗೇಟ್ ನಿರ್ಮಾಣ ಮಾಡಬೇಕೆಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ. ಆದರೆ ಮಹಾರಾಜಪೇಟೆ ಬಿಟ್ಟು ಕರಗುದರಿ ಬಳಿ ಟೋಲ್‌ಗೇಟ್ ನಿರ್ಮಾಣ ಮಾಡುತ್ತಿರುವುದು ಅಕ್ರಮವಾಗಿದೆ. ಸ್ಥಳೀಯರ ಜೇಬಿಗೆ ಕತ್ತರಿ ಹಾಕಲು ಹಾಗೂ ಹೆಚ್ಚು ಟೋಲ್ ವಸೂಲಿ ಉದ್ದೇಶದಿಂದ ನಿಯಮಗಳನ್ನು ಉಲ್ಲಂಘಿಸಿ ಟೋಲ್‌ಗೇಟ್ ನಿರ್ಮಿಸಲಾಗುತ್ತಿದೆ’ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.