ADVERTISEMENT

ರಾತ್ರಿ ಎರಡು ಗಂಟೆ ಮೊಬೈಲ್–ಟಿವಿ ಬಂದ್: ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕ್ರಮ

ಸಂತೋಷ ಜಿಗಳಿಕೊಪ್ಪ
Published 3 ಫೆಬ್ರುವರಿ 2026, 6:18 IST
Last Updated 3 ಫೆಬ್ರುವರಿ 2026, 6:18 IST
ಹಾವೇರಿ ಜಿಲ್ಲೆಯ ತೆಗ್ಗಿಹಳ್ಳಿ ಗ್ರಾ.ಪಂ. ವತಿಯಿಂದ ‘ಡಿಜಿಟಲ್ ಲಾಕ್’ ಬಗ್ಗೆ ಸೋಮವಾರ ರಾತ್ರಿ ಢಂಗುರ ಸಾರಲಾಯಿತು
ಹಾವೇರಿ ಜಿಲ್ಲೆಯ ತೆಗ್ಗಿಹಳ್ಳಿ ಗ್ರಾ.ಪಂ. ವತಿಯಿಂದ ‘ಡಿಜಿಟಲ್ ಲಾಕ್’ ಬಗ್ಗೆ ಸೋಮವಾರ ರಾತ್ರಿ ಢಂಗುರ ಸಾರಲಾಯಿತು   

ಹಾವೇರಿ: ಜಿಲ್ಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ವಿವಿಧ ಕ್ರಮ ಕೈಗೊಳ್ಳುತ್ತಿರುವ ಶಾಲಾ ಶಿಕ್ಷಣ ಇಲಾಖೆ, ಇದೀಗ ‘ಮೊಬೈಲ್ ಸ್ವಿಚ್ ಆಫ್ ಹಾಗೂ ಟಿ.ವಿ. ಬಂದ್’ ಮಾಡಿಸುವ ‘ಡಿಜಿಟಲ್ ಲಾಕ್’ ಪ್ರಯೋಗಕ್ಕೆ ಮುಂದಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಾರಿಯಲ್ಲಿದ್ದ ಪ್ರಯೋಗವನ್ನು ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮಸ್ಥರು ಯಶಸ್ವಿಯಾಗಿ ಅನುಸರಿಸಿದ್ದರು. ನಿತ್ಯ ಸಂಜೆ 7ರಿಂದ ರಾತ್ರಿ 9ರವರೆಗೆ ಮೊಬೈಲ್‌ ಮತ್ತು ಟಿ.ವಿ. ಬಂದ್‌ ಮಾಡುವ ನಿರ್ಣಯ ತೆಗೆದುಕೊಂಡಿದ್ದರು. ಇದೇ ಕ್ರಮವನ್ನು ಇದೀಗ ಹಾವೇರಿ ಜಿಲ್ಲೆಯಲ್ಲಿಯೂ ಕಾರ್ಯರೂಪಕ್ಕೆ ತರಲಾಗುತ್ತಿದೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸುವುದಕ್ಕಾಗಿ, ಪ್ರತಿ ಗ್ರಾಮದಲ್ಲಿಯೂ ನಿತ್ಯ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಹಾಗೂ ಟಿ.ವಿ. ಆಫ್‌ ಮಾಡುವಂತೆ ಢಂಗುರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ’ ಎಂದು ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರ ಬರೆದಿದ್ದಾರೆ.

ADVERTISEMENT

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಯೋಗ ಜಾರಿಗೊಳಿಸಲು ಸೂಚಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳಿರುವ ಮನೆಗಳಲ್ಲಿ ಕಡ್ಡಾಯವಾಗಿ ಡಿಜಿಟಲ್ ಲಾಕ್ ಪ್ರಯೋಗ ಪಾಲಿಸುವಂತೆ ಕೋರಲಾಗುತ್ತಿದೆ.

2024ನೇ ಸಾಲಿನಲ್ಲಿ ಶೇ 78.34ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿತ್ತು. 2025ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ 69.17ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನಕ್ಕೆ ಬಂದಿತ್ತು. ಪ್ರಸಕ್ತ ಸಾಲಿನಲ್ಲಿ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ಶಾಲಾ ಶಿಕ್ಷಣ ಇಲಾಖೆ, ಇದೀಗ ಡಿಜಿಟಲ್ ಲಾಕ್‌ ಪ್ರಯೋಗ ಮಾಡುತ್ತಿದೆ. ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಢಂಗುರ ಸಾರಿ, ಜಾಗೃತಿ ಮೂಡಿಸಲಾಗಿದೆ.

‘ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮಕ್ಕಳ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ, ಜಿಲ್ಲೆಯಾದ್ಯಂತ ಡಿಜಿಟಲ್ ಲಾಕ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದ್ದು, ಪ್ರಯೋಗಕ್ಕೆ ಕೈ ಜೋಡಿಸುವಂತೆ ಕೋರಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಧುನಿಕ ಯುಗದಲ್ಲಿ ಮೊಬೈಲ್ ಹಾಗೂ ಟಿ.ವಿ. ಬಳಕೆ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಓದಲು ಆಗುತ್ತಿಲ್ಲ. ಓದಿಗೆ ಅಡೆತಡೆ ಉಂಟಾಗುತ್ತಿದೆ. ಮಕ್ಕಳ ಓದಿಗೆ ಸಹಕರಿಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ಅವಧಿಯಲ್ಲಿ ಪೋಷಕರು ಹಾಗೂ ಮನೆಯಲ್ಲಿರುವವರು ಮೊಬೈಲ್–ಟಿ.ವಿ. ಬಂದ್ ಮಾಡಿ, ಮಕ್ಕಳ ಓದಿಗೆ ಸಹಕರಿಸಬೇಕು’ ಎಂದು ಅವರು ಕೋರಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಕ್ಕಳ ಭವಿಷ್ಯ ರೂಪಿಸುವ ಪರೀಕ್ಷೆ. ಪೋಷಕರು ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸಬೇಕು. ಓದುವ ಮಕ್ಕಳ ಎದುರು ಮೊಬೈಲ್ ಬಳಸುವುದನ್ನು ಹಾಗೂ ಟಿ.ವಿ. ನೋಡುವುದನ್ನು ಕಡಿಮೆ ಮಾಡಬೇಕು
ಮೋಹನ್ ದಂಡಿನ ಉಪ ನಿರ್ದಶಕ ಶಾಲಾ ಶಿಕ್ಷಣ ಇಲಾಖೆ

ಪಿಡಿಒಗಳ ಪತ್ರದಲ್ಲಿ ಏನಿದೆ ?

ಡಿಜಿಟಲ್ ಲಾಕ್ ವ್ಯವಸ್ಥೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬರೆದಿರುವ ಪತ್ರವನ್ನು ಉಲ್ಲೇಖಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲೆಯ ಎಲ್ಲ ಗ್ರಾ.ಪಂ. ಪಿಡಿಒಗಳಿಗೆ ಪತ್ರ ಬರೆದಿದ್ದಾರೆ. ‘ನಿಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮೊಬೈಲ್‌ಗಳನ್ನು ಸ್ವಿಚ್ ಆಫ್‌ ಮಾಡುವಂತೆ ಹಾಗೂ ಟಿ.ವಿ.ಗಳನ್ನು ಆಫ್‌ ಮಾಡುವಂತೆ ಢಂಗುರ ಸಾರಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಕೋರಿದ್ದಾರೆ. ಗ್ರಾಮಗಳಲ್ಲಿರುವ ಎಸ್‌ಎಸ್‌ಎಲ್‌ಸಿ ಮಕ್ಕಳ ಫಲಿತಾಂಶ ಸುಧಾರಣೆ ದೃಷ್ಟಿಯಿಂದ ಅವರ ಕೋರಿಕೆಯನ್ನು ಪಾಲಿಸಬೇಕು. ಪ್ರತಿ ಗ್ರಾಮದಲ್ಲೂ ಢಂಗುರ ಸಾರಿ ಕಚೇರಿಗೆ ವರದಿ ಸಲ್ಲಿಸಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.