ADVERTISEMENT

ವಿಮಾ ವ್ಯಾಪ್ತಿಗೆ ಹೆಚ್ಚು ರೈತರನ್ನು ತರಲು ಡಿಸಿ ಸೂಚನೆ

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 16:08 IST
Last Updated 6 ಜೂನ್ 2019, 16:08 IST
ಕೃಷ್ಣ ಬಾಜಪೇಯಿ
ಕೃಷ್ಣ ಬಾಜಪೇಯಿ   

ಹಾವೇರಿ: ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು. ವಿಮಾ ನೋಂದಣಿಗೆ ಬರುವ ರೈತರ ಮೂಲ ಪಹಣಿ ಬೇಡಿಕೆ ಸಲ್ಲಿಸದೆ ಜೆರಾಕ್ಸ್‌ ಪ್ರತಿಗೆ ಮಾನ್ಯ ಮಾಡುವಂತೆ ಜಿಲ್ಲೆಯ ವಿವಿಧ ವಾಣಿಜ್ಯ, ಸಹಕಾರಿ ಬ್ಯಾಂಕ್‌ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚಿಸಿದರು.

ಇಲ್ಲಿಗೆ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯಡಿ ಬೆಳೆವಿಮೆ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬೆಳೆವಿಮೆ ನೋಂದಣಿಗೆ ರೈತರ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಆಧಾರ ಕಾರ್ಡ್ ಜೊತೆಗೆ ಆರ್.ಟಿ.ಸಿ.(ಪಹಣಿ) ಸಲ್ಲಿಸುವುದು ಕಡ್ಡಾಯ. ಆದರೆ, ಬ್ಯಾಂಕ್‌ ಅಧಿಕಾರಿಗಳು ತಹಶೀಲ್ದಾರರ ಸಹಿ ಹಾಗೂ ಮುದ್ರೆ ಇರುವ ಪಹಣಿಯನ್ನೇ ಸಲ್ಲಿಸುವಂತೆ ರೈತರಿಗೆ ಒತ್ತಾಯ ಮಾಡಬಾರದು. ಬೆಳೆ ದೃಢೀಕರಣ ಪತ್ರವು ಅಗತ್ಯವಿಲ್ಲ. ಹೆಚ್ಚುವರಿ ಹಣ ವಸೂಲಿ, ರೈತರಿಗೆ ಅನಗತ್ಯ ದಾಖಲೆಗಳ ಬೇಡಿಕೆ ಸಲ್ಲಿಸಬಾರದು ಎಂದು ಸೂಚಿಸಿದರು.

ADVERTISEMENT

ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 36 ಬೆಳೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಹಾಗೂ ಸವಣೂರಿನಲ್ಲಿ ಮೆಕ್ಕೆಜೋಳದ ಜೊತೆಗೆ ನೆಲಗಡಲೆ, ಹಾನಗಲ್‌ನಲ್ಲಿ ಮೆಕ್ಕೆಜೋಳದ ಜೊತೆ ನೀರಾವರಿ ಭತ್ತ ಹಾಗೂ ವಾಣಿಜ್ಯ ಬೆಳೆಗಳ ವಿಮೆ ನೋಂದಣಿಗೆ ಅಧಿಸೂಚಿತ ಬೆಳೆಯಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಬೆಳೆ ವಿಮೆ ನೋಂದಣಿಗೆ ಜುಲೈ 30 ಕೊನೆಯ ದಿನವಾಗಿದೆ. ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್‌ 14 ಕೊನೆಯ ದಿನಾಂಕವಾಗಿದೆ. ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಿದವಿಮಾ ಮೊತ್ತಕ್ಕೆ ಶೇ 2 ರಷ್ಟು ಕಂತುಗಳನ್ನು ಪಾವತಿಸಬೇಕಾಗುತ್ತದೆ. ವಾಣಿಜ್ಯ ಬೆಳೆಗಳಿಗೆ ಶೇ 5 ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ಕೃಷಿ ವಿಮೆ ನೋಂದಣಿಗೆ ಈ ವರ್ಷ ಮುಂಚಿತವಾಗಿ ಮಾರ್ಚ್ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ 2017ರಲ್ಲಿ 79 ಸಾವಿರ ರೈತರು ಹಾಗೂ 2018ರಲ್ಲಿ 1.23 ಲಕ್ಷ ರೈತರು ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದರು. ಈ ಬಾರಿ ಕನಿಷ್ಠ 35 ರಿಂದ 40 ರಷ್ಟು ರೈತರು ಬೆಳೆವಿಮೆಗೆ ನೋಂದಾಯಿಸಲು ಗುರಿ ಹಾಕಿಕೊಳ್ಳಲಾಗಿದೆ.2019–20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ನಷ್ಟ ಪರಿಹಾರದ (ಇಂಡೆಮ್ನಿಟಿ) ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ 90 ಹಾಗೂ ಮಳೆಯಾಶ್ರಿತ ಬೆಳೆಗಳಿಗೆ ಶೇ 80ರಷ್ಟು ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 238 ರೈತರು ವಿಮಾ ನೋಂದಣಿ ಮಾಡಿದ್ದಾರೆ ಎಂದು ವಿವರಿಸಿದರು.

*
ಬೆಳೆಸಾಲ ಮಾಡಿದ ರೈತರು ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು, ಸಾಲ ಮಾಡದ ಇತರ ರೈತರು ಬೆಳೆವಿಮೆ ಮಾಡಿಸಲು ಪ್ರೋತ್ಸಾಹಿಸಬೇಕು.
-ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.