ADVERTISEMENT

ತೂಕದಲ್ಲಿ ಮೋಸ: ಖರೀದಿ ಪರವಾನಗಿ ರದ್ದು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:22 IST
Last Updated 19 ಫೆಬ್ರುವರಿ 2026, 5:22 IST

ಹಾವೇರಿ: ರೈತರು ತರುತ್ತಿದ್ದ ಕೃಷಿ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡುತ್ತಿದ್ದ ಆರೋಪದಡಿ ಎಸ್.ಎಸ್. ಯರೆಶೀಮಿ ಮಳಿಗೆಯ ಖರೀದಿ ಪರವಾನಗಿಯನ್ನು ರದ್ದುಪಡಿಸಲಾಗಿದೆ.

ಇಲ್ಲಿಯ ಹಾನಗಲ್ ರಸ್ತೆಯಲ್ಲಿರುವ ಹೊಸ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಎಸ್.ಎಸ್. ಯರೆಶೀಮಿ ಮಳಿಗೆ ಹೊಂದಿದ್ದ ಮಾಲೀಕ ಸೋಮಶೇಖರ್ ಅವರು ತೂಕದಲ್ಲಿ ಮೋಸ ಮಾಡುತ್ತಿದ್ದ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟಗೊಂಡಿತ್ತು.

ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕೋರಿದ್ದರು. ಮೋಸದ ಬಗ್ಗೆ ಪರಿಶೀಲನೆ ನಡೆಸಿದ್ದ ಎಪಿಎಂಸಿ ಅಧಿಕಾರಿಗಳು, ಎಸ್.ಎಸ್. ಯರೆಶೀಮಿ ಮಳಿಗೆಯ ಪರವಾನಗಿಯನ್ನು ರದ್ದುಪಡಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರಕಟಣೆ ನೀಡಿರುವ ಎಪಿಎಂಸಿ ಕಾರ್ಯದರ್ಶಿ ಜಿ.ಕೆ. ಕಬ್ಬೇರಹಳ್ಳಿ, ‘ಯರೆಶೀಮಿ ಅಂಗಡಿಯ ಮಾಲೀಕ ಸೋಮಶೇಖರ್ ಅವರು ರೈತರಿಗೆ ತೂಕದಲ್ಲಿ ಮೋಸ ಮಾಡಿರುವುದು ಕಂಡುಬಂದಿದೆ. ಅವರ ಖರೀದಿ ಪರವಾನಗಿ ರದ್ದುಪಡಿಸಲಾಗಿದೆ. ಇನ್ಮುಂದೆ, ಎಸ್.ಎಸ್. ಯರೆಶೀಮಿ ಮಾಲೀಕರ ಜೊತೆ ರೈತರು ಹಾಗೂ ಪೇಟೆ ಕಾರ್ಯಕರ್ತರು ವ್ಯವಹರಿಸಬಾರದು. ವ್ಯವಹರಿಸಿದ್ದಲ್ಲಿ ಪೇಟೆ ಕಾರ್ಯಕರ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

3 ಕೆ.ಜಿ. ವ್ಯತ್ಯಾಸ: ರೈತ ಶರಣಗೌಡ ಪಾಟೀಲ ಅವರು ಎಪಿಎಂಸಿಗೆ ಕಡಲೆ ಕಾಳು ತಂದಿದ್ದರು. ತರುವಾಗ, ತಮ್ಮ ಮನೆಯಲ್ಲಿಯೇ ತೂಕ ಮಾಡಿಕೊಂಡು ಬಂದಿದ್ದರು. ಎಸ್.ಎಸ್. ಯರೆಶೀಮಿ ಮಳಿಗೆಯಲ್ಲಿ ತೂಕ ಮಾಡಿದಾಗ, 3 ಕೆ.ಜಿ. ವ್ಯತ್ಯಾಸ ಕಂಡುಬಂದಿತ್ತು. ಇದನ್ನು ಗಮನಿಸಿದ್ದ ಅವರು, ಮಾಧ್ಯಮದವರ ಎದುರು ಅಳಲು ತೋಡಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.