ADVERTISEMENT

‘ರಾಜ್ಯಮಟ್ಟದ ಕಲಾವಿದರ ಸಮ್ಮೇಳನಕ್ಕೆ ಚಿಂತನೆ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:25 IST
Last Updated 29 ಜೂನ್ 2025, 16:25 IST
ಹಾವೇರಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಕಲಾಕೃತಿ ಓದು’ ಕಾರ್ಯಕ್ರಮದಲ್ಲಿ ಕೆ.ವಿ. ಸುಬ್ರಹ್ಮಣ್ಯ ಮಾತನಾಡಿದರು
ಹಾವೇರಿಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಕಲಾಕೃತಿ ಓದು’ ಕಾರ್ಯಕ್ರಮದಲ್ಲಿ ಕೆ.ವಿ. ಸುಬ್ರಹ್ಮಣ್ಯ ಮಾತನಾಡಿದರು   

ಹಾವೇರಿ: ‘ರಾಜ್ಯದ 31 ಜಿಲ್ಲೆಗಳ ಕಲಾವಿದರನ್ನು ಒಂದುಗೂಡಿಸಿ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವಿನೂತನ ಸಮ್ಮೇಳನ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಲಲಿತಕಲಾ ಅಕಾಡೆಮಿಯ ನೂತನ ಅಧ್ಯಕ್ಷ ಪ.ಸ. ಕುಮಾರ ತಿಳಿಸಿದರು.

ನಗರದಲ್ಲಿರುವ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಕಲಾಕೃತಿ ಓದು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅಕಾಡೆಮಿಯಿಂದ ಜನಪರ ಹಾಗೂ ಕಲಾವಿದರ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಲಾಕೃತಿಯ ಓದು ಎಂಬ ಕಾರ್ಯಕ್ರಮ, ಕಲಾವಿದರ ಚಿತ್ರಗಳನ್ನು ಹೇಗೆ ಓದಬೇಕು ಹಾಗೂ ವಿಶ್ಲೇಷಿಸಬೇಕೆಂಬುದನ್ನು ತಿಳಿಸುತ್ತದೆ. ಭಾವಚಿತ್ರ ತರಬೇತಿ ಕಾರ್ಯಾಗಾರ, ನಿಮ್ಮೊಂದಿಗೆ ನಾವು, ಗ್ರಾಫಿಕ್ ತರಬೇತಿ ಕಾರ್ಯಾಗಾರಗಳನ್ನೂ ಅಕಾಡೆಮಿ ನಡೆಸುತ್ತಿದೆ’ ಎಂದರು.

ADVERTISEMENT

ಕಲಾ ವಿಮರ್ಶಕ ಕೆ.ವಿ. ಸುಬ್ರಹ್ಮಣ್ಯ ಮಾತನಾಡಿ, ‘ಕಲಾಕೃತಿಯನ್ನು ಓದುವುದಕ್ಕೂ ಮತ್ತು ನೋಡುವುದಕ್ಕೂ ವ್ಯತ್ಯಾಸವಿದೆ. ಸಂವೇದನಾಶೀಲತೆಯನ್ನು ಹೆಚ್ಚಿಸುವ ಹಾಗೂ ನೋಡುವಿಕೆಯನ್ನು ಕಲಾಕೃತಿ ಸೃಷ್ಟಿಸಬೇಕು. ಯಾವುದೇ ಕೃತಿಯಿರಲಿ ನಿರ್ದಿಷ್ಟ ಅಂತರದಲ್ಲಿ ನೋಡಿ ಆನಂದಿಸಬೇಕು. ಅರಮನೆ, ಗುರು ಮನೆ, ದೇವರಮನೆ.. ಹೀಗೆ ಕಲಾಪ್ರಿಯರ ಮನೆಗಳಲ್ಲಿ ಬೇರೆ ಬೇರೆ ಚಿತ್ರಗಳು ಇರಬೇಕು. ಆಗ ಮಾತ್ರ ಅವುಗಳಿಗೆ ಮೌಲ್ಯ ಬರುತ್ತದೆ’ ಎಂದರು.

‘ಚಿತ್ರದಲ್ಲಿ ಏನೋ ಅಡಗಿದೆ ಎಂಬ ಕುತೂಹಲವಿರಬೇಕು. ಕಲಾವಿದನ ನಂಬಿಕೆ, ಬದ್ಧತೆ, ಕುಶಲತೆಗಳು ಅದರಲ್ಲಿ ಬಿಂಬಿತವಾಗಿರಬೇಕು. ಒಂದು ನಿಗೂಢ ಕಲಾಕೃತಿ ಐತಿಹಾಸಿಕ ಪ್ರಜ್ಞೆಯ ಜೊತೆಗೆ ಒಂದು ತಾತ್ವಿಕ ಬದ್ಧತೆಯನ್ನು ಹೊಂದಿದಾಗ ಅದಕ್ಕೊಂದು ಸಾತ್ವಿಕತೆ ಬರುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸತೀಶ ಕುಲಕರ್ಣಿ, ‘ಚಿತ್ರವೊಂದು ಕಣ್ಣಿಗೆ ತಾಗಬೇಕು, ಇಲ್ಲವೆ ತಡೆದು ನಿಲ್ಲಿಸಬೇಕು. ಸಾಹಿತ್ಯ ವಿಮರ್ಶೆಗೆ ವ್ಯಾಕರಣ, ಶಬ್ದ ಸಂಪತ್ತು ಬುನಾದಿ. ಚಿತ್ರಕಲೆಗೆ ಬಣ್ಣ, ರೇಖೆಗಳೇ ವ್ಯಾಕರಣ’ ಎಂದರು.

ಲಲಿತಕಲಾ ಅಕಾಡೆಮಿಯ ಸದಸ್ಯ ಕರಿಯಪ್ಪ ಹಂಚಿನಮನಿ, ‘ಜಿಲ್ಲೆಯಲ್ಲಿ ಚಿತ್ರಕಲೆ ಅಭಿರುಚಿಯನ್ನು ಹೆಚ್ಚಿಸುವುದು ಹಾಗೂ ಲಲಿತಕಲಾ ಅಕಾಡೆಮಿಯ ಚಟುವಟಿಕೆಯನ್ನು ವಿಸ್ತರಿಸುವುದು ಕಲಾಕೃತಿ ಓದು ಕಾರ್ಯಕ್ರಮದ ಉದ್ದೇಶ’ ಎಂದರು.

ಕಲಾವಿದರಾದ ಬಹುರೂಪಿ, ಕುಮಾರ ಕಾಟೇನಹಳ್ಳಿ, ಸಿ.ಡಿ. ಜಟ್ಟೆಣ್ಣನವರ, ಎಸ್.ಜೆ. ಚಿತ್ರಗಾರ, ಬಸವರಾಜ ಕಲ್ಲೂರ, ಶಿವರಾಜ, ಎಂ.ಡಿ. ಹೊನ್ನಮ್ಮನವರ, ನಿರ್ಮಲಾ ಹಿಮ್ಮಡಿ, ದಾವಣಗೆರೆ ಕಲಾಶಾಲೆಯ 12 ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.