ಹಾವೇರಿ: ಕಿತ್ತು ಹೋದ ಡಾಂಬರು. ಹೆಚ್ಚಾದ ತಗ್ಗು–ಗುಂಡಿಗಳು. ನೀರು ನಿಂತು ಹೊಂಡದಂತಾದ ದಾರಿಗಳು. ವಾಹನ ಚಲಾಯಿಸಲು ಭಯಪಡುವ ಚಾಲಕರು. ಗುಂಡಿ ಕಾಣದೇ ವಾಹನಗಳು ಉರುಳಿಬಿದ್ದಿದ್ದರಿಂದ ಗಾಯಗೊಂಡ ಸವಾರರು. ಕೆಸರಿನಲ್ಲಿ ಸಾಗುವಾಗ ಕಾಲು ಜಾರಿ ಬೀಳುವ ಪಾದಚಾರಿಗಳು....
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಂಡುಬರುವ ರಸ್ತೆಗಳ ದುಸ್ಥಿತಿಯಿದು. ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಹದಗೆಟ್ಟಿವೆ. ಇದರಿಂದಾಗಿ ಜನರಿಗೆ ಸಂಚಾರ ಕಂಟಕ ಎದುರಾಗಿದೆ. ನಿರಂತರ ಮಳೆ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ಅಪಘಾತಕ್ಕೂ ಆಹ್ವಾನ ನೀಡುತ್ತಿವೆ.
ರಸ್ತೆಯ ಅಕ್ಕ–ಪಕ್ಕದ ಕಾಲುವೆಗಳು ಹೂಳು ತುಂಬಿಕೊಂಡಿವೆ. ಮಳೆ ಬಂದ ಸಂದರ್ಭದಲ್ಲಿ ಕಾಲುವೆ ನೀರು, ರಸ್ತೆಯಲ್ಲಿ ಹರಿಯುತ್ತಿದೆ. ಇದು ಸಹ ರಸ್ತೆ ಹಾಳಾಗಲು ಕಾರಣವಾಗಿದೆ. ಮಳೆಗಾಲದ ಆರಂಭದಿಂದಲೇ ಹಲವು ರಸ್ತೆಗಳಲ್ಲಿ ಡಾಂಬರೀಕರಣ, ಸೇತುವೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ರಸ್ತೆಯನ್ನು ಅಗೆಯಲಾಗಿದ್ದು, ಅದೇ ಸ್ಥಳದಲ್ಲಿ ನೀರು ನಿಂತು ಕೆಸರು ಹೆಚ್ಚಾಗುತ್ತಿದೆ.
ಜಿಲ್ಲಾ ಕೇಂದ್ರ ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಬಳಿಯ ದೇವಗಿರಿ ರಸ್ತೆಯೇ ತೀರಾ ಹದಗೆಟ್ಟಿದೆ. ಜೊತೆಗೆ, ನಗರದೊಳಗಿನ ಮಾರುಕಟ್ಟೆ, ಹಾನಗಲ್ ರಸ್ತೆ, ರೈಲ್ವೆ ನಿಲ್ದಾಣ, ಪುರದ ಓಣಿ ಸೇರಿದಂತೆ ಬಹುತೇಕ ಕಡೆಯ ರಸ್ತೆಗಳು ಗುಂಡಿಮಯವಾಗಿವೆ. ಎಲ್ಲಿ ರಸ್ತೆ ಹದಗೆಟ್ಟಿದೆ ಎನ್ನುವುದಕ್ಕಿಂತ, ಎಲ್ಲಿ ರಸ್ತೆ ಚೆನ್ನಾಗಿದೆ ಎಂದು ಹುಡುಕುವ ಸ್ಥಿತಿಯಿದೆ.
ಹಾನಗಲ್–ಹಾವೇರಿ ಪ್ರಮುಖ ರಸ್ತೆಯಲ್ಲಿಯೂ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದೆ. ಇದರಿಂದಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಕೆಶಿಪ್‌ನವರು ಈ ರಸ್ತೆ ನಿರ್ವಹಣೆ ಮಾಡುತ್ತಿದ್ದು, ದುರಸ್ತಿಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಜಿಲ್ಲಾ ಕೇಂದ್ರ ಮಾತ್ರವಲ್ಲದೆ ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ರಸ್ತೆಗಳು ಹದಗೆಟ್ಟಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿದರೆ, ಗುಂಡಿಗಳೇ ಕಣ್ಣಿಗೆ ರಾಚುತ್ತವೆ. ನೀರು ನಿಂತ ಸಂದರ್ಭದಲ್ಲಂತೂ ವಾಹನಗಳು ಉರುಳಿಬಿದ್ದು, ಸವಾರರು ಗಾಯಗೊಂಡು ಆಸ್ಪತ್ರೆಗೆ ಸೇರುತ್ತಿದ್ದಾರೆ.
ಹಾನಗಲ್‌ನಲ್ಲೂ ಹದಗೆಟ್ಟ ರಸ್ತೆ: ಹಾನಗಲ್ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿಯೂ ರಸ್ತೆಯಲ್ಲಿ ತಗ್ಗುಗಳು ಬಿದ್ದು, ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆಯೂ ಹದಗೆಟ್ಟಿದ್ದು, ದುರಸ್ತಿಗೆ ಜನರು ಆಗ್ರಹಿಸುತ್ತಿದ್ದಾರೆ.
ಹಾನಗಲ್‌ನಿಂದ 24 ಕಿ.ಮೀ. ದೂರದಲ್ಲಿರುವ ತಿಳವಳ್ಳಿ ಗ್ರಾಮದ ಕೆರೆಯ ದಡದಲ್ಲಿರುವ ರಸ್ತೆಯೂ ತೀರಾ ಹದಗೆಟ್ಟಿದೆ. ತಿಳವಳ್ಳಿ ಬಸ್ ನಿಲ್ದಾಣ ಎದುರಿನ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಇಡೀ ಡಾಂಬರ್ ಕಿತ್ತುಹೋಗಿ, ಮಣ್ಣು ಹೊರಗೆ ಬಂದು ತಗ್ಗು ಬಿದ್ದಿವೆ.
ಬಸ್ ನಿಲ್ದಾಣ ಎದುರೇ ಗುಂಡಿಗಳು ಬಿದ್ದಿದ್ದು, ನೀರು ನಿಂತುಕೊಂಡಿದೆ. ಈ ರಸ್ತೆಯಲ್ಲಿ ಸಾಗುವಾಗ ಹಲವು ಬೈಕ್ ಸವಾರರು, ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ನಿಲ್ದಾಣ ಬಳಿಯೇ ನಾಯರ್ ಪೆಟ್ರೋಲ್ ಬಂಕ್ ಇದ್ದು, ಅದರ ಎದರಿನ ರಸ್ತೆಯಂತೂ ತೀರಾ ಹದಗೆಟ್ಟಿದೆ. ಡಾಂಬರ್ ಮಾಯವಾಗಿ, ಗುಡ್ಡುಗಾಡು ಪ್ರದೇಶದ ರಸ್ತೆಯಂತೆ ಗೋಚರಿಸುತ್ತಿದೆ.
ಹದಗೆಟ್ಟ ರಸ್ತೆ ಬಗ್ಗೆ ಗೊತ್ತಿರುವ ಚಾಲಕರು, ರಸ್ತೆಯ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಜಾಗದಿಂದ ಸಂಚರಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಬಂಕ್ ಸಿಬ್ಬಂದಿಗೂ ಕಿರಿಕಿರಿ ಉಂಟಾಗುತ್ತಿದೆ. ರೈತರು ಕೃಷಿ ಉತ್ಪನ್ನವನ್ನು ಹೊಲದಿಂದ ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಗುಂಡಿಗಳಿಂದಾಗಿ ರಸ್ತೆಯಲ್ಲಿಯೇ ಕೃಷಿ ಉತ್ಪನ್ನಗಳು ಬಿದ್ದು ಚಿಲ್ಲಾಪಿಲ್ಲಿಯಾಗುತ್ತಿವೆ.
ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಹಾನಗಲ್‌ನ ರಾಣಿ ಚನ್ನಮ್ಮ ವೃತ್ತದ ರಸ್ತೆಯೇ ತೀರಾ ಹದಗೆಟ್ಟಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ತಿರುಗಿಯೂ ನೋಡುತ್ತಿಲ್ಲಸುಭಾಷ್ ಎಂ. ಹಾನಗಲ್ ನಿವಾಸಿ
ರಸ್ತೆ ನೋಡಿ ನಮಗೆ ನಾಚಿಕೆ ಬರುತ್ತಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಳ್ಳುವರು ಹೆಚ್ಚಾಗಿದ್ದಾರೆ. ಮತ ಕೇಳಲು ಬರುವವರು ರಸ್ತೆ ನೋಡಲು ಬರುತ್ತಿಲ್ಲಚಂದ್ರಪ್ಪ ಘಾಳಪೋಜಿ ನಿವಾಸಿ
ರಸ್ತೆ ಹದಗೆಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡುತ್ತಿಲ್ಲ. ಹೊಸ ರಸ್ತೆ ಮಾಡಿಸುವುದಾಗಿ ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆರಬ್ಬಾನಿ ನಾಶಿಪುಡಿ ತಿಳವಳ್ಳಿ ನಿವಾಸಿ
ಜಿಲ್ಲೆಯ ಶಾಸಕರು ಅಧಿಕಾರಿಗಳು ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ. ಅವರಿಗೆ ಗುಂಡಿಗಳಿಂದ ಏನು ಆಗುವುದಿಲ್ಲ. ಸಾಮಾನ್ಯ ಜನರೇ ರಸ್ತೆಯಿಂದ ಕಷ್ಟ ಅನುಭವಿಸಿ ಬೇಸತ್ತಿದ್ದಾರೆಶಂಕರ ಎನ್. ಹಿರೇಕೆರೂರು ನಿವಾಸಿ
- ‘ಸಮೀಕ್ಷೆ ಮಾಡಿಸಿ ಅಭಿವೃದ್ಧಿ ಮಾಡಿ’ ‘ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ಅಂಥ ರಸ್ತೆಗಳ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಬೇಕು. ಮಳೆಗಾಲ ಮುಗಿಯುತ್ತಿದ್ದಂತೆ ಶಾಶ್ವತ ಪರಿಹಾರವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ರಾಣೆಬೆನ್ನೂರು ನಿವಾಸಿ ಚಂದ್ರು ಬಾಲಪ್ಪನವರ ಹೇಳಿದರು. ‘ರಸ್ತೆ ಹದಗೆಟ್ಟಿರುವುದರಿಂದ ಓಡಾಡಲು ಆಗುತ್ತಿಲ್ಲ. ಎಲ್ಲ ಕಡೆಯೂ ಗುಂಡಿಗಳಿವೆ. ವಾಹನಗಳು ಹಾಳಾಗುತ್ತಿವೆ. ಇದರ ಜೊತೆಯಲ್ಲಿ ಅಪಘಾತಗಳು ಸಂಭವಿಸಿ ಹಲವರು ಗಾಯಗೊಳ್ಳುತ್ತಿದ್ದಾರೆ’ ಎಂದು ಹೇಳಿದರು. ‘ಗ್ಯಾರಂಟಿ ಯೋಜನೆಗಳಿಗೆ ಹಣ ಹೋಗುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲವೆಂದು ಕೆಲ ಶಾಸಕರು ದೂರುತ್ತಿದ್ದಾರೆ. ಜಿಲ್ಲೆಯ ಶಾಸಕರಾದರೂ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದರು.
ಗುಂಡಿಯಿಂದ ಮಹಿಳೆ ಸಾವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿ ರಸ್ತೆಯ ಗುಂಡಿಯಿಂದ ಅಪಘಾತ ಸಂಭವಿಸಿ ಬೈಕ್‌ನ ಹಿಂಬದಿ ಕುಳಿತಿದ್ದ ಅನ್ನಪೂರ್ಣಾ ಕರೆಗೌಡ್ರ (45) ಎಂಬುವವರು ಮೃತಪಟ್ಟಿದ್ದಾರೆ. ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದ ಅನ್ನಪೂರ್ಣಾ ಅವರು ಪತಿ ಕರೆಗೌಡ (55) ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಅವಘಡ ಸಂಭವಿಸಿತ್ತು. ರಸ್ತೆಯಲ್ಲಿದ್ದ ಗುಂಡಿಯೇ ಕಾರಣವೆಂಬುದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.