ADVERTISEMENT

ಹಾವೇರಿ | ಬ್ಯಾಂಕ್ ವಿಲೀನ: ಗೃಹಲಕ್ಷ್ಮಿಯರಿಗೆ ತಲುಪದ ಹಣ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ * ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಎಂ.ಎಂ. ಹಿರೇಮಠ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 2:58 IST
Last Updated 5 ನವೆಂಬರ್ 2025, 2:58 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ’ ಮಂಗಳವಾರ ಜರುಗಿತು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ’ ಮಂಗಳವಾರ ಜರುಗಿತು    

ಹಾವೇರಿ: ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅನ್ನು (ಕೆವಿಜಿ) ಕರ್ನಾಟಕ ಗ್ರಾಮೀಣ ಬ್ಯಾಂಕ್ ಜೊತೆ ವಿಲೀನ ಮಾಡಲಾಗಿದೆ. ಈ ವಿಲೀನ ಪ್ರಕ್ರಿಯೆಯ ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ಹಲವು ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ. ಪರಿಶೀಲನೆ ನಡೆಸಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗೃಹಲಕ್ಷ್ಮಿ ಯೋಜನೆಯಡಿ ಜುಲೈ ತಿಂಗಳವರೆಗೂ ಫಲಾನುಭವಿಗಳ ಖಾತೆಗಳಿಗೆ ತಲಾ ₹2,000 ಜಮೆ ಮಾಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಹಿರೇಮಠ, ‘ಗ್ರಾಮೀಣ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಫಲಾನುಭವಿಗಳಿಗೆ ಹಣ ಬಂದಿಲ್ಲವೆಂಬ ಮಾಹಿತಿಯಿದೆ. ಯಾರಿಗೆಲ್ಲ ಹಣ ಬಂದಿಲ್ಲವೆಂಬುದು ತಿಳಿದುಕೊಂಡು, ಅವರೆಲ್ಲರಿಗೂ ಹಣ ಬರುವಂತೆ ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎಂದು ಹೇಳಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಬೇಕು. ಪ್ರಾಧಿಕಾರದ ಎಲ್ಲ ಸಮಿತಿಯ ಸದಸ್ಯರು ತಮ್ಮ ಹಂತದಲ್ಲಿಯೇ ಕೆಲಸ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಹಿರೇಮಠ ಅವರು ತಿಳಿಸಿದರು.

ನಿಲ್ದಾಣಗಳಲ್ಲಿ ಕ್ಯಾಮೆರಾ: ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಗೆ ತಿಳಿಸಿದ ಅಧಿಕಾರಿಗಳು, ‘ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಹೊಸ ಮಾರ್ಗಗಳಲ್ಲಿ ಮತ್ತು ಅಗತ್ಯವಿರುವ ಮಾರ್ಗಗಳಲ್ಲಿ ಬಸ್‌ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಹಿರೇಮಠ, ‘ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಬಸ್ ಮಾರ್ಗ ಹೊಂದಾಣಿಕೆ ಮಾಡಿ. ನಿಲ್ದಾಣಗಳಲ್ಲಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಿ’ ಎಂದು ಸೂಚಿಸಿದರು.

‘ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಶೇ 88ರಷ್ಟು ವಿದ್ಯಾರ್ಥಿಗಳ ನೋಂದಣಿಯಾಗಿದೆ. ಮುಂಬರುವ ದಿನಗಳಲ್ಲಿ ನೋಂದಣಿ ಪ್ರಮಾಣ ಹೆಚ್ಚಿಸಬೇಕು. ನೋಂದಣಿಗಾಗಿ ಅಭಿಯಾನ ಕೈಕೊಳ್ಳಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಯೋಜನೆ ಕುರಿತು ಅರಿವು ಮೂಡಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಚ್.ವೈ. ಮೀಸಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ಸಭೆಯಲ್ಲಿದ್ದರು.

‘ಅನಗತ್ಯ ವಿದ್ಯುತ್ ಬಳಕೆ ತಡೆಯಿರಿ’

‘ಪಿ.ಎಂ. ಸೂರ್ಯಘರ್ ಯೋಜನೆಯಡಿ ಸೋಲಾರ್ ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಗ್ರಾಮೀಣ ಭಾಗಗಳಲ್ಲಿ ಹಗಲಿನಲ್ಲಿ ವಿದ್ಯುತ್ ದೀಪಗಳು ಉರಿಯುವ ಆರೋಪವಿದೆ. ಅನಗತ್ಯ ವಿದ್ಯುತ್ ಬಳಕೆಯನ್ನು ತಡೆಯಬೇಕು. ವಿದ್ಯುತ್ ಸಂಬಂಧಿತ ಯಾವುದೆ ಸಮಸ್ಯೆಗಳಿದ್ದರೂ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದು ಪರಿಹರಿಸಬೇಕು’ ಎಂದು ಹಿರೇಮಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.