ADVERTISEMENT

ಹಾವೇರಿ: ಹೆದ್ದಾರಿಯಲ್ಲಿ ಚಕ್ಕಡಿ ಸವಾರಿ; ಜೀವಕ್ಕೆ ಅಪಾಯಕಾರಿ

ದೇವರಗುಡ್ಡ–ಮೈಲಾರ ಜಾತ್ರೆ * ಪೊಲೀಸರ ನಿರ್ಲಕ್ಷ್ಯ; ಜನಪ್ರತಿನಿಧಿಗಳಿಂದ ಒತ್ತಡ

ಸಂತೋಷ ಜಿಗಳಿಕೊಪ್ಪ
Published 11 ಫೆಬ್ರುವರಿ 2025, 20:59 IST
Last Updated 11 ಫೆಬ್ರುವರಿ 2025, 20:59 IST
ಹಾವೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದ ಚಕ್ಕಡಿ ಹಾಗೂ ಅವುಗಳ ಹಿಂದೆ ತೆರಳುತ್ತಿದ್ದ ವಾಹನಗಳು – ಪ್ರಜಾವಾಣಿ ಚಿತ್ರ
ಹಾವೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದ ಚಕ್ಕಡಿ ಹಾಗೂ ಅವುಗಳ ಹಿಂದೆ ತೆರಳುತ್ತಿದ್ದ ವಾಹನಗಳು – ಪ್ರಜಾವಾಣಿ ಚಿತ್ರ   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಹಾಗೂ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಜಾತ್ರೆಗಾಗಿ ಜನರು ಚಕ್ಕಡಿ ಕಟ್ಟಿಕೊಂಡು ಹೆದ್ದಾರಿಗಳ ಮೂಲಕ ಹೊರಟಿದ್ದಾರೆ. ಜಿದ್ದಿಗೆ ಬಿದ್ದು ಅತೀ ವೇಗದಲ್ಲಿ ಚಕ್ಕಡಿಗಳನ್ನು ಓಡಿಸುತ್ತಿದ್ದು, ಮಾರ್ಗಮಧ್ಯೆ ಅನಾಹುತ ಸಂಭವಿಸುತ್ತಿವೆ.

ರಾಜ್ಯದಲ್ಲೇ ಅತೀ ಹೆಚ್ಚು ಜನರು ಸೇರುವ ಮೈಲಾರ ಜಾತ್ರೆಗೆ ಫೆಬ್ರುವರಿ 9ರಿಂದ ಹಾವೇರಿ ಹಾಗೂ ಸುತ್ತಮುತ್ತಲಿನ ಜನರು ಎತ್ತಿನ ಚಕ್ಕಡಿ ಹಾಗೂ ವಾಹನಗಳ ಮೂಲಕ ಹೊರಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲೆ ಹಾಗೂ ತಾಲ್ಲೂಕು ರಸ್ತೆಗಳಲ್ಲಿ ಚಕ್ಕಡಿಗಳ ಸಂಖ್ಯೆಯೇ ಹೆಚ್ಚಿದೆ.

ಯುವಕರೇ ಚಕ್ಕಡಿ ಸವಾರಿ ಮಾಡುತ್ತಿದ್ದಾರೆ. ತಮ್ಮಿಷ್ಟದ ಸ್ವಾತಂತ್ರ್ಯ ಹೋರಾಟಗಾರರು, ಸಿನಿಮಾ ನಟರು ಹಾಗೂ ಇತರರ ಫೋಟೊಗಳ ಬಾವುಟ ಕಟ್ಟಿ ಚಕ್ಕಡಿ ಅಲಂಕಾರ ಮಾಡಿದ್ದಾರೆ. ಇದೇ ಚಕ್ಕಡಿಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಪರ್ಧೆಯ ರೀತಿಯಲ್ಲಿ ಓಡಿಸುತ್ತಿದ್ದಾರೆ. ಅಕ್ಕ–ಪಕ್ಕ ಹಾಗೂ ಹಿಂದಿನಿಂದ ಜನರು ಬೈಕ್‌ನಲ್ಲಿ ಚಕ್ಕಡಿ ಹಿಂಬಾಲಿಸುತ್ತಿದ್ದಾರೆ.

ADVERTISEMENT

ರಸ್ತೆಯಲ್ಲಿ ಸಾಗುವ ವಾಹನಗಳ ಶಬ್ದದಿಂದ ಎತ್ತುಗಳು ಬೆದರುತ್ತಿದ್ದು, ಚಕ್ಕಡಿಗಳನ್ನು ಎಲ್ಲೆಂದರಲ್ಲಿ ಎಳೆದೊಯ್ಯುತ್ತಿವೆ. ಇಂಥ ಸಂದರ್ಭದಲ್ಲಿ ಅವಘಡಗಳು ಸಂಭವಿಸುತ್ತಿವೆ. ಚಕ್ಕಡಿ ಗುದ್ದಿ ದ್ವಿಚಕ್ರ ವಾಹನ ಸವಾರರು ಗಾಯಗೊಳ್ಳುತ್ತಿದ್ದು, ಸಮೀಪದ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಚಕ್ಕಡಿ ಓಡಿಸದಂತೆ ನಿಯಮವಿದೆ. ಸರ್ವೀಸ್ ರಸ್ತೆಯಲ್ಲಿ ಹೋಗಲು ಚಕ್ಕಡಿಗಳಿಗೆ ಅವಕಾಶವಿದೆ. ಆದರೆ, ಎಲ್ಲ ಚಕ್ಕಡಿಗಳು ಹೆದ್ದಾರಿಯಲ್ಲಿಯೇ ಸಾಗುತ್ತಿವೆ. ಇದರಿಂದಾಗಿ ರಾಜ್ಯ–ಹೊರ ರಾಜ್ಯಗಳ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಪೊಲೀಸರ ನಿರ್ಲಕ್ಷ್ಯ:

ಜಾತ್ರೆಗೆ ಜನರು ಚಕ್ಕಡಿ ಹಾಗೂ ವಾಹನಗಳ ಮೂಲಕ ಹೋಗುವ ಬಗ್ಗೆ ಮಾಹಿತಿ ಇದ್ದರೂ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿಲ್ಲ. ಸೋಮವಾರ ಸಂಜೆಯಿಂದ ರಾತ್ರಿಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಕ್ಕಡಿಗಳ ಸಾಲು ಕಂಡುಬಂತು. ಸ್ಥಳದಲ್ಲಿ ಒಬ್ಬ ಪೊಲೀಸ್ ಸಹ ಇರಲಿಲ್ಲ. ಯುವಕರು, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಚಕ್ಕಡಿಗಳನ್ನು ಓಡಿಸಿಕೊಂಡು ಹೋದರು. ಯಾರಾದರೂ ಪ್ರಶ್ನಿಸಿದರೆ, ಅವರ ಜೊತೆಗೆ ಜಗಳ ಮಾಡಿದ ಘಟನೆಗಳೂ ನಡೆದವು.

ಹಾವೇರಿ ಹೊರಭಾಗದ ಹೆದ್ದಾರಿಯಲ್ಲಿ ಚಕ್ಕಡಿ ಪಕ್ಕದಲ್ಲಿ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು, ಉರುಳಿಬಿದ್ದು ಗಾಯಗಳು ಆಗಿವೆ.ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಅವರದ್ದೇ ಮನೆಯ ಚಕ್ಕಡಿ ಆಗಿದ್ದರಿಂದ ಈ ಬಗ್ಗೆ ದೂರು ನೀಡಿಲ್ಲ.

ಚಕ್ಕಡಿಗಳ ಸವಾರಿ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ‘ಇದು ಅಪಾಯಕಾರಿ ನಡೆ. ಬಂಕಾಪುರ ಟೋಲ್‌ಗೇಟ್‌ನಿಂದ ದೇವರಗುಡ್ಡ ಬಳಿಯ ಕಾಕೋಳವರೆಗೂ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಅಪಾಯಕಾರಿ ರೀತಿಯಲ್ಲಿ ಚಕ್ಕಡಿ ಓಡಿಸುವವರನ್ನು ಪತ್ತೆ ಮಾಡಿ ಕ್ರಮ ಜರುಗಿಸುತ್ತಿದ್ದಾರೆ’ ಎಂದರು.

‘ಒಂದೆರೆಡು ಚಕ್ಕಡಿಗಳಿದ್ದರೆ ಸಮಸ್ಯೆ ಕಡಿಮೆ. ನೂರಾರು ಚಕ್ಕಡಿಗಳು ಹೋಗುವಾಗ, ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅತೀ ವೇಗವಾಗಿ ಚಕ್ಕಡಿ ಓಡಿಸುವುದು ತುಂಬಾ ಅಪಾಯಕಾರಿ. ರಸ್ತೆ ಮಧ್ಯೆ ಚಕ್ಕಡಿಯನ್ನು ತಡೆದು ನಿಲ್ಲಿಸಿದರೆ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ, ಚಕ್ಕಡಿಗಳನ್ನು ತ್ವರಿತವಾಗಿ ನಿಗದಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ’ ಎಂದು ಹೇಳಿದರು.

ಜನಪ್ರತಿನಿಧಿಗಳಿಂದ ಕರೆ:

ಕೆಲವರ ಚಕ್ಕಡಿಗಳನ್ನು ಪೊಲೀಸರು ತಡೆದು ನಿಲ್ಲಿಸಿ ಜಪ್ತಿ ಮಾಡಲು ಮುಂದಾಗಿದ್ದರು. ಇಂಥ ಸಂದರ್ಭದಲ್ಲಿ ಪೊಲೀಸರಿಗೆ ಕರೆ ಮಾಡಿದ್ದ ಜನಪ್ರತಿನಿಧಿಗಳು, ‘ಅವು ನಮ್ಮ ಮತದಾರರ ಚಕ್ಕಡಿ. ಬಿಟ್ಟು ಕಳುಹಿಸಿ’ ಎಂದು ತಾಕೀತು ಮಾಡಿರುವುದು ಗೊತ್ತಾಗಿದೆ. ಇದಾದ ನಂತರ ಪೊಲೀಸರು, ಚಕ್ಕಡಿ ಬಿಟ್ಟು ಕಳುಹಿಸಿದ್ದಾರೆ.

ಪ್ರತಿವರ್ಷ ಜಾತ್ರೆಗೆ ಚಕ್ಕಡಿಗಳು ಹೋಗುವ ವಿಷಯ ಪೊಲೀಸರಿಗೆ ಗೊತ್ತಿದೆ. ಅಷ್ಟಾದರೂ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ
ರಾಜಶೇಖರ ಬಂಕಾಪುರ ಹಾವೇರಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.