ADVERTISEMENT

ಹಾವೇರಿ: ಬಸ್‌ ಹತ್ತಲು ನೂಕುನುಗ್ಗಲು, ಪರದಾಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 2:49 IST
Last Updated 14 ಡಿಸೆಂಬರ್ 2025, 2:49 IST
ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಗದಗ ಮಾರ್ಗದ ಬಸ್‌ ಹತ್ತಲು ಕಿಕ್ಕಿರಿದು ಸೇರಿದ್ದ ಜನರು
ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಗದಗ ಮಾರ್ಗದ ಬಸ್‌ ಹತ್ತಲು ಕಿಕ್ಕಿರಿದು ಸೇರಿದ್ದ ಜನರು   

ಹಾವೇರಿ: ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾವೇರಿ– ಗದಗ ಮಾರ್ಗದ ಬಸ್‌ ಹತ್ತಲು ಪ್ರಯಾಣಿಕರು ಪರದಾಡಿದ್ದು, ಬಸ್‌ ಹತ್ತುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯಾದ್ಯಂತ ಬಸ್‌ನಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಹಾವೇರಿ ಕೇಂದ್ರ ಬಸ್‌ ನಿಲ್ದಾಣದಲ್ಲಂತೂ ನಿತ್ಯವೂ ಜನಜಂಗುಳಿ ಕಂಡುಬರುತ್ತಿದೆ. ಬೆಂಗಳೂರು, ಹುಬ್ಬಳ್ಳಿ, ಗದಗ ಹಾಗೂ ಇತರೆ ಮಾರ್ಗದ ಬಸ್‌ಗಳಲ್ಲಿ ಸಂಪೂರ್ಣ ಭರ್ತಿಯಾಗಿ ಸಂಚರಿಸುತ್ತಿವೆ.

ಹಾವೇರಿಯಿಂದ ಬಂಕಾಪುರ, ಲಕ್ಷ್ಮೇಶ್ವರ ಮಾರ್ಗವಾಗಿ ಗದಗ ನಗರಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಈ ಮಾರ್ಗದ ಬಸ್‌ಗಳು ನಿತ್ಯವೂ ಭರ್ತಿಯಾಗುತ್ತಿವೆ. ಇತ್ತೀಚೆಗೆ ಹಾವೇರಿ ನಿಲ್ದಾಣಕ್ಕೆ ಬಂದ ಬಸ್‌ ಹತ್ತಲು ಪ್ರಯಾಣಿಕರು ಮುಗಿಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೇ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ.

ADVERTISEMENT

‘ನಿಲ್ದಾಣದಲ್ಲಿ ನಿಂತಿದ್ದ ಬಸ್‌ನ ಪ್ರವೇಶ ದ್ವಾರದ ಬಳಿ ಜನರು ಕಿಕ್ಕಿರಿದು ಸೇರಿದ್ದಾರೆ. ಕೆಲವರು, ಕಿಟಕಿ ಮೂಲಕವೇ ಬಸ್‌ನೊಳಗೆ ಹತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರ ನಡುವೆ ತಳ್ಳಾಟ–ನೂಕಾಟವೂ ನಡೆದಿದೆ. ಬಸ್‌ ಹತ್ತುವ ಸಂದರ್ಭದಲ್ಲಿ ಕೆಲವರು ಕಾರು ಜಾರಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಗ್ಯಾರಂಟಿ ಯೋಜನೆ ಬಂದ ನಂತರ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಸ್‌ಗಳ ಸಂಖ್ಯೆ ಏರಿಕೆಯಾಗಿಲ್ಲ. ಇರುವ ಬಸ್‌ನಲ್ಲಿಯೇ ಜನರು ಪ್ರಾಣದ ಹಂಗು ತೊರೆದು ಪ್ರಯಾಣಿಸುತ್ತಿದ್ದಾರೆ. ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.