ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಕತ್ತಲಿನಲ್ಲಿ ನಿಂತಿದ್ದ ಪ್ರಯಾಣಿಕರು
ಹಾವೇರಿ: ಇಲ್ಲಿಯ ಕೇಂದ್ರ ಬಸ್ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟ್ರಾನ್‌ಫಾರ್ಮರ್ (ಟಿ.ಸಿ.) ಹಾಗೂ ಸ್ವಿಚ್‌ಬೋರ್ಡ್ ಹಾಳಾಗಿದ್ದು, ಇದರಿಂದಾಗಿ ಇಡೀ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಕತ್ತಲು ಆವರಿಸಿತ್ತು.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ನಿಲ್ದಾಣಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಬಸ್‌ಗಳು ಬಂದು ಹೋಗುತ್ತವೆ. ನಿತ್ಯವೂ ಸಾವಿರಾರೂ ಪ್ರಯಾಣಿಕರ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಆದರೆ, ಮಂಗಳವಾರ ರಾತ್ರಿ ಕತ್ತಲು ಆವರಿಸಿದ್ದರಿಂದ ಪ್ರಯಾಣಿಕರು ಭಯದಲ್ಲಿಯೇ ಬಸ್‌ಗಾಗಿ ಕಾದು ನಿಂತಿದ್ದ ದೃಶ್ಯಗಳು ಕಂಡುಬಂದವು. ಬಸ್‌ಗಳ ಹೈಡ್‌ಲೈಟ್ ಬೆಳಕಿನಲ್ಲಿಯೇ ಪ್ರಯಾಣಿಕರು ಓಡಾಡಿದರು.
ನಿಲ್ದಾಣ ಹಾಗೂ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ನಿಲ್ದಾಣ ಬಳಿಯೇ ಟ್ರಾನ್‌ಫಾರ್ಮರ್ ಇರಿಸಲಾಗಿದೆ. ಈ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಸೋಮವಾರವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸೋಮವಾರ ರಾತ್ರಿಯೂ ವಿದ್ಯುತ್ ಇರಲಿಲ್ಲ. ಇದರಿಂದಾಗಿ ನಿಲ್ದಾಣದಲ್ಲಿ ಸೋಮವಾರ ರಾತ್ರಿಯೂ ಕತ್ತಲು ಆವರಿಸಿತ್ತು.
ನಿಲ್ದಾಣದಲ್ಲಿ ಕತ್ತಲು ಇರುವುದನ್ನು ಗಮನಿಸಿದ್ದ ಕೆಲ ಪ್ರಯಾಣಿಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಬೆಳಿಗ್ಗೆಯೇ ಸಮಸ್ಯೆ ಸರಿಪಡಿಸುವುದಾಗಿ ಹೇಳಿದ್ದ ಅಧಿಕಾರಿಗಳು, ಮಂಗಳವಾರ ರಾತ್ರಿಯಾದರೂ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಲಿಲ್ಲ. ಅಧಿಕಾರಿಗಳ ಈ ವರ್ತನೆಗೆ ಪ್ರಯಾಣಿಕರು ಬೇಸರ ಹೊರಹಾಕಿದರು.
‘ಹಾವೇರಿ ಕೇಂದ್ರ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ಬಂದು ಹೋಗುತ್ತವೆ. ಇಂಥ ನಿಲ್ದಾಣದಲ್ಲಿಯೇ ರಾತ್ರಿ ಕತ್ತಲು ಆವರಿಸಿದೆ. ಒಬ್ಬರ ಮುಖ ಒಬ್ಬರಿಗೆ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಭಯದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾರೆ. ಏನಾದರೂ ಅನಾಹುತವಾದರೆ, ಅಧಿಕಾರಿಗಳೇ ಹೊಣೆ’ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಯುವತಿ ಅಪಹರಣಕ್ಕೆ ಯತ್ನ: ಬೆಂಗಳೂರಿನಿಂದ ಹಾವೇರಿ ಬಸ್ ನಿಲ್ದಾಣಕ್ಕೆ ಸೋಮವಾರ ರಾತ್ರಿ ಬಂದಿದ್ದ ಯುವತಿಯೊಬ್ಬರನ್ನು, ಕತ್ತಲಿನಲ್ಲಿಯೇ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಯುವತಿ ಕೂಗಾಡಿದ್ದರಿಂದ, ಸಹ ಪ್ರಯಾಣಿಕರು ರಕ್ಷಣೆ ಮಾಡಿದ್ದಾರೆ. ಅಪಹರಣಕ್ಕೆ ಯತ್ನಿಸಿದ್ದ ಯುವಕನೊಬ್ಬ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ನಿಲ್ದಾಣದಲ್ಲಿ ಕತ್ತಲು ಆವರಿಸಿದ್ದರಿಂದ, ಮಹಿಳೆಯರ ಸುರಕ್ಷತೆಗೆ ಧಕ್ಕೆಯಾಗಿದೆ. ಕತ್ತಲಿನಲ್ಲಿಯೇ ಯುವಕನೊಬ್ಬ, ಯುವತಿಯನ್ನು ಅಪಹರಿಸಲು ಯತ್ನಿಸಿದ ಘಟನೆಯೂ ನಡೆದಿದೆ. ಕೂಡಲೇ ವಿದ್ಯುತ್ ಸಂಪರ್ಕ ಸಮಸ್ಯೆ ಸರಿಪಡಿಸಬೇಕು. ಮುಂಬರುವ ದಿನಗಳಲ್ಲಿ ಇಂಥ ಪರಿಸ್ಥಿತಿ ಬರದಂತೆ, ಜನರೇಟರ್ ವ್ಯವಸ್ಥೆಯನ್ನಾದರೂ ಮಾಡಬೇಕು’ ಎಂದು ಅವರು ಆಗ್ರಹಿಸಿದರು.
‘ಬೆಳಗಾವಿಯಿಂದ ಸಾಮಗ್ರಿ ತರಿಸಿ ದುರಸ್ತಿ’
‘ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪರಿಶೀಲನೆ ನಡೆಸಲಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿರುವ ಕೆಲ ಸಾಮಗ್ರಿಗಳು ಹಾಳಾಗಿದ್ದು ಸ್ಥಳೀಯ ಮಾರುಕಟ್ಟೆಯಲ್ಲಿ ಅವು ಲಭ್ಯವಿಲ್ಲ. ಬೆಳಗಾವಿಯಿಂದ ಸಾಮಗ್ರಿ ತರಿಸಿ ದುರಸ್ತಿ ಮಾಡಿಸಲಾಗುತ್ತಿದೆ’ ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ತಿಳಿಸಿದರು.
ವಿದ್ಯುತ್ ಸಂಪರ್ಕ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಮಂಗಳವಾರ ರಾತ್ರಿಯಿಂದಲೇ ದುರಸ್ತಿ ಕೆಲಸ ನಡೆದಿದೆ. ಅತೀ ಶೀಘ್ರದಲ್ಲೇ ಸಮಸ್ಯೆ ಸರಿಯಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.