ADVERTISEMENT

ಪೂಜೆ ಹೆಸರಿನಲ್ಲಿ ಹಾವೇರಿ ಯುವತಿಗೆ ವಂಚನೆ: ಸಿಂಧನೂರಿನ ಮೂವರು ಸೆರೆ

* ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿಗಳು * ₹ 20.88 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:39 IST
Last Updated 7 ಜುಲೈ 2025, 2:39 IST
<div class="paragraphs"><p>ಬಂಧನ </p></div>

ಬಂಧನ

   

ಹಾವೇರಿ: ‘ನಿಮಗೆ ಗಂಡಾಂತರವಿದೆ. ವಿಶೇಷ ಪೂಜೆ ಮಾಡಬೇಕು’ ಎಂದು ಹೇಳಿ ಚಿನ್ನಾಭರಣ ಪಡೆದುಕೊಂಡು ವಾಪಸು ಕೊಡದೇ ವಂಚಿಸಿದ್ದ ಮೂವರು ಆರೋಪಿಗಳನ್ನು ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕದ್ರವ್ಯ ನಿಯಂತ್ರಣ) ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿಯ ರಮೇಶ ಶಾಸ್ತ್ರಿ, ಗೋಪಾಲ್‌ ಶಾಸ್ತ್ರಿ ಬಂಧಿತರು. ಇನ್ನೊಬ್ಬ ಆರೋಪಿ ಬಾಲಕನಿದ್ದು, ಹೆಸರು ಬಹಿರಂಗಪಡಿಸಲಾಗದು. ನಾಲ್ಕನೇ ಆರೋಪಿ ಗುರು ಶಾಸ್ತ್ರಿ ಎಂಬಾತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹಾವೇರಿ ನಗರದ 23 ವರ್ಷದ ಯುವತಿಯೊಬ್ಬರಿಗೆ ಇತ್ತೀಚೆಗೆ ವಂಚನೆಯಾಗಿತ್ತು. ಈ ಬಗ್ಗೆ ದಾಖಲಾಗಿದ್ದ ದೂರಿನ ತನಿಖೆ ಕೈಗೊಂಡು ಮೈಸೂರಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹ 20.88 ಲಕ್ಷ ಮೌಲ್ಯದ 227 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಆ್ಯಪ್‌ನಲ್ಲಿ ಪರಿಚಯ: ‘ಜ್ಯೋತಿಷ್ಯಕ್ಕೆ ಸಂಬಂಧಪಟ್ಟಂತೆ ಸಂವಹನಕ್ಕೆಂದು ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ತಂದೆ–ತಾಯಿ ಜೊತೆ ನೆಲೆಸಿದ್ದ ಸಂತ್ರಸ್ತ ಯುವತಿ, ತನ್ನ ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಅದರಲ್ಲಿ ಖಾತೆ ತೆರೆದಿದ್ದರು. ಆರೋಪಿಗಳು, ಅದೇ ಆ್ಯಪ್‌ ಮೂಲಕ ಯುವತಿಯನ್ನು ಸಂಪರ್ಕಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಯುವತಿಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಿಮಗೆ ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬರುತ್ತವೆ. ಅದಕ್ಕಾಗಿ ಒಂದು ಯಂತ್ರವನ್ನು ನಿರಂತರವಾಗಿ ಪೂಜೆ ಮಾಡಬೇಕು. ಹಣ ಕಳುಹಿಸಿದರೆ, ಯಂತ್ರವನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸುತ್ತೇವೆ’ ಎಂದಿದ್ದರು. ಅದನ್ನು ನಂಬಿದ್ದ ಯುವತಿ, ಹಣವನ್ನು ನೀಡಿ ಯಂತ್ರ ಖರೀದಿಸಿದ್ದರು. ನಿಗದಿತ ದಿನಗಳು ಮುಗಿಯುತ್ತಿದ್ದಂತೆ, ಜ್ಯೋತಿಷಿಗಳ ಮಾತಿನಂತೆ ಯಂತ್ರವನ್ನು ನಾಶಪಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಎರಡನೇ ಬಾರಿ ಪುನಃ ಯುವತಿಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ನಿಮಗೆ ಹಾಗೂ ನಿಮ್ಮ ಕುಟುಂಬದವರ ಜೀವಕ್ಕೆ ಗಂಡಾಂತರವಿದೆ. ಇದನ್ನು ತಡೆಯಬೇಕಾದರೆ, ಚಿನ್ನಾಭರಣಗಳನ್ನು ದೇವರ ಬಳಿ ಇರಿಸಿ ಪೂಜೆ ಮಾಡಬೇಕು. ನೀವು ಚಿನ್ನಾಭರಣ ಕಳುಹಿಸಿದರೆ, ಪೂಜೆ ಮಾಡಿ ವಾಪಸು ಕೊಡುತ್ತೇವೆ’ ಎಂದಿದ್ದರು. ಅದನ್ನು ನಂಬಿದ್ದ ಯುವತಿ, ಆಭರಣ ನೀಡಲು ಒಪ್ಪಿದ್ದರು’ ಎಂದರು.

ನಿಲ್ದಾಣದಲ್ಲಿ ಚಿನ್ನಾಭರಣ ಸಂಗ್ರಹ: ‘ಮೈಸೂರಿನಿಂದ ಆರೋಪಿಗಳು, ಹಾವೇರಿಯ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಯೇ ಆರೋಪಿಗಳನ್ನು ಭೇಟಿಯಾಗಿದ್ದ ಯುವತಿ, ಚಿನ್ನಾಭರಣ ಕೊಟ್ಟು ಕಳುಹಿಸಿದ್ದರು. ಇದಾದ ನಂತರ, ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಚಿನ್ನಾಭರಣವೂ ವಾಪಸು ಬಂದಿರಲಿಲ್ಲ. ಅವಾಗಲೇ ಯುವತಿ ಠಾಣೆಗೆ ಸಂಪರ್ಕಿಸಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.