ಹಾವೇರಿ: ‘ಜಿಲ್ಲೆಯಲ್ಲಿ ಬಿಸಿಲಿನ ತಾಪ ನಿಧಾನವಾಗಿ ಹೆಚ್ಚುತ್ತಿದ್ದು, ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕರು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಅಧಿಕಾರಿಗಳು ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ’ ಕುರಿತ ರಾಷ್ಟ್ರೀಯ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜನರು ಮನೆಯಿಂದ ಹೊರಗಡೆ ಹೋಗುವಾಗ ಸಡಿಲವಾದ ತೆಳು ಬಿಳಿ ಬಣ್ಣದ ಹತ್ತಿ ಬಟ್ಟೆ ಧರಿಸಬೇಕು. ಶುದ್ಧ ಕುಡಿಯುವ ನೀರನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಬೇಕು. ಯಥೇಚ್ಛವಾಗಿ ಆಗಾಗ ನೀರು ಕುಡಿಯುತ್ತಿರಬೇಕು. ಮನೆಯಲ್ಲಿ ಸಿದ್ಧಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಎಳನೀರು ಮತ್ತು ಮಜ್ಜಿಗೆ ಕುಡಿಯುವುದು ಒಳ್ಳೆಯದು. ಬೆವರು ಒರೆಸಿಕೊಳ್ಳಲು ಹತ್ತಿ ಬಟ್ಟೆಯ ಕರವಸ್ತ್ರ ಬಳಸಬೇಕು. ಗಾಳಿಯಾಡುವ ಚಪ್ಪಲಿ ಧರಿಸಬೇಕು’ ಎಂದರು.
‘ಬೇಸಿಗೆಯಲ್ಲಿ ಕಲುಷಿತ ನೀರು ಕುಡಿಯುವುದರಿಂದ ವಾಂತಿ–ಭೇದಿ ಪ್ರಕರಣಗಳು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಶುದ್ಧೀಕರಿಸಿದ ಅಥವಾ ಶುದ್ಧಿಕರಣ ಘಟಕದ ನೀರನ್ನು ಕುಡಿಯುವುದು ಹೆಚ್ಚು ಸೂಕ್ತ’ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾತನಾಡಿ, ‘ಬಿಸಿಲು ಹೆಚ್ಚಾದರೆ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಿಸಿಲು ಇರುವ ಸಂದರ್ಭದಲ್ಲಿ ಯಾರಾದರೂ ತೊದಲು ಮಾತನಾಡಿದರೆ, ಬಡಬಡಿಸಿದರೆ, ಚರ್ಮ ಕೆಂಪಾದರೆ, ಬೆವರು ಕಡಿಮೆಯಾದರೆ, ದೇಹದ ಉಷ್ಣತೆ ಹೆಚ್ಚಾದರೆ, ಉಸಿರಾಟದ ತೊಂದರೆಯಾದರೆ ಕೂಡಲೇ ನೆರಳಿರುವ ಜಾಗಕ್ಕೆ ಕರೆದೊಯ್ಯಬೇಕು. ಬಳಿಕ, ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು. 108/102 ಸಂಖ್ಯೆಗೂ ಕರೆ ಮಾಡಿ ವ್ಯಕ್ತಿಗೆ ಚಿಕಿತ್ಸೆ ಸಿಗುವಂತೆ ಮಾಡಬೇಕು’ ಎಂದರು.
‘ಬೇಸಿಗೆಯಲ್ಲಿ ಬರುವ ಆರೋಗ್ಯದ ಪರಿಣಾಮಗಳನ್ನು ಎದುರಿಸಲು ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.