
ಹಾವೇರಿ: ‘ಜಿಲ್ಲಾ ಕೇಂದ್ರ ಹಾವೇರಿಯ ಜೆ.ಪಿ. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ದೇವಗಿರಿ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ವಿಸ್ತರಣೆ ಮಾಡಲು ತಯಾರಿ ನಡೆದಿದ್ದು, ಇದಕ್ಕಾಗಿ ₹ 50 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕರ್ನಾಟಕ ರಾಜ್ಯೋತ್ಸವ’ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಸ್ತೆ ವಿಸ್ತರಣೆಗೆ ₹ 50 ಕೋಟಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ. ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕ ನಂತರ, ಟೆಂಡರ್ ಕರೆದು ರಸ್ತೆ ವಿಸ್ತರಣೆ ಕಾಮಗಾರಿ ಶುರುವಾಗಲಿದೆ’ ಎಂದರು.
‘ಜಿಲ್ಲೆಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದು ಗಮನದಲ್ಲಿದೆ. ಗುಂಡಿಗಳನ್ನು ಮುಚ್ಚಲು ಈಗಾಗಲೇ ಹಣ ಬಿಡುಗಡೆಯಾಗಿದೆ. ಆದರೆ, ಮಳೆ ಇರುವ ಕಾರಣದಿಂದ ಕಾಮಗಾರಿ ಆರಂಭವಾಗಿಲ್ಲ. ಡಾಂಬರ್ ಹಾಕಿದರೂ ಮಳೆ ನೀರಿನಿಂದ ರಸ್ತೆ ಪುನಃ ಹಾಳಾಗುತ್ತದೆ. ಹೀಗಾಗಿ, ಮಳೆ ಕಡಿಮೆಯಾದ ನಂತರವೇ ಗುಂಡಿಗಳನ್ನು ಮುಚ್ಚುವ ಕೆಲಸ ಶುರುವಾಗಲಿದೆ. ನವೆಂಬರ್‌ನಿಂದ ಮುಂದಿನ ಮಾರ್ಚ್ ಒಳಗೆ ಎಲ್ಲ ರಸ್ತೆಗಳ ದುರಸ್ತಿ ಆಗಲಿದೆ’ ಎಂದು ಹೇಳಿದರು.
ಆರೋಗ್ಯ ಸಮಸ್ಯೆಗೆ ಪ್ರತ್ಯೇಕ ಸಭೆ: ‘ಜಿಲ್ಲೆಯಲ್ಲಿ ಜನರು ಹಾಗೂ ಜಾನುವಾರುಗಳ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಶಿವಾನಂದ ಪಾಟೀಲ ಹೇಳಿದರು.
‘ಜಿಲ್ಲೆಯಲ್ಲಿರುವ 108 ಆಂಬುಲೆನ್ಸ್ ವಾಹನಗಳು, ಪಶು ಸಂಗೋಪನಾ ಇಲಾಖೆಯ ಆಂಬುಲೆನ್ಸ್‌ಗಳು ಸೇರಿದಂತೆ ಎಲ್ಲ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ: ‘ವರದಾ ನದಿಯ ಹಲವು ಬಾಂದಾರ್‌ಗಳಲ್ಲಿ ಗೇಟ್ ಹಾಕಿಲ್ಲವೆಂಬ ಬಗ್ಗೆ ಮಾಹಿತಿ ಇದೆ. ನೀರು ಸಂಗ್ರಹಣೆ ಮಾಡಲು ಅಗತ್ಯವಿರುವ ಅನುದಾನ ಕೊಡಿಸುತ್ತೇನೆ. ಮುಂಬರುವ ಬೇಸಿಗೆಯಲ್ಲಿ ನರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.
‘ವರದಾ-ಬೇಡ್ತಿ ನದಿಗಳ ಜೋಡಣೆಗೆ ಸಂಬಂಧಪಟ್ಟಂತೆ ಉತ್ತರ ಕನ್ನಡದ ಶಾಸಕರು, ಮುಖ್ಯಮಂತ್ರಿ ಅವರನ್ನು ಭೇಟಿಯಾಗಿರುವ ಮಾಹಿತಿ ಇದೆ. ಹಾವೇರಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಈ ಹಿಂದೆಯೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಯೋಜನೆ ಅನುಷ್ಠಾನಕ್ಕೆ ಕೋರಿದ್ದರು. ಯೋಜನೆ ಬಗ್ಗೆ ಸಮೀಕ್ಷೆ ಆಗಿದೆ. ಯೋಜನೆ ಅನುಷ್ಠಾನ ಆಗಲಿದೆ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ನಗರಸಭೆ ಸದಸ್ಯ ಸಂಜೀವಕುಮಾರ್ ನೀರಲಗಿ ಇದ್ದರು.