ADVERTISEMENT

ಹಾವೇರಿ: ತೋಟಗಾರಿಕೆ ಬೆಳೆಯಲ್ಲಿ ‘ಅಡಿಕೆ’ ಪಾರುಪತ್ಯ

* ಹಣ್ಣು– ತರಕಾರಿ ಬೆಳೆ ಪ್ರದೇಶದಲ್ಲಿ ಇಳಿಕೆ * ಮುಂಬರುವ ದಿನಗಳಲ್ಲಿ ಆಹಾರ ಧಾನ್ಯ ಕೊರತೆ

ಸಂತೋಷ ಜಿಗಳಿಕೊಪ್ಪ
Published 6 ಮೇ 2025, 6:13 IST
Last Updated 6 ಮೇ 2025, 6:13 IST
ಹಾವೇರಿ ಜಿಲ್ಲೆಯ ಗ್ರಾಮವೊಂದರ ಜಮೀನಿನಲ್ಲಿ ಬೆಳೆದಿರುವ ಅಡಿಕೆ 
ಹಾವೇರಿ ಜಿಲ್ಲೆಯ ಗ್ರಾಮವೊಂದರ ಜಮೀನಿನಲ್ಲಿ ಬೆಳೆದಿರುವ ಅಡಿಕೆ    

ಹಾವೇರಿ: ಗೋವಿನಜೋಳ, ಜೋಳ ಸೇರಿದಂತೆ ಹಲವು ಆಹಾರ ಧಾನ್ಯಗಳಿಗೆ ಹೆಸರಾಗಿರುವ ಹಾವೇರಿ ಜಿಲ್ಲೆ, ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆ ಬೆಳೆಗಳತ್ತ ವಾಲುತ್ತಿದೆ. ಜಿಲ್ಲೆಯ ಹಲವು ರೈತರು, ತಮ್ಮ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಅಡಿಕೆ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ತೋಟಗಾರಿಕೆ ಬೆಳೆಗಳ ಪ‍್ರದೇಶಗಳ ಪೈಕಿ ‘ಅಡಿಕೆ’ ಬೆಳೆ ಅಗ್ರಸ್ಥಾನ ಪಡೆದುಕೊಂಡಿದೆ.

ಬಯಲು ಸೀಮೆಯ ಮೈದಾನ ಹಾಗೂ ಅರೇ ಮಲೆನಾಡು ಪ್ರದೇಶ ಹೊಂದಿರುವ ಹಾವೇರಿ ಜಿಲ್ಲೆಯ ವಾತಾವರಣ, ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕುಗಳು ಹಾವೇರಿ ಜಿಲ್ಲೆಯಲ್ಲಿವೆ. ಇದರ ಪರಿಣಾಮವಾಗಿ ರೈತರು, ಅಡಿಕೆ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ.

ಮಾವು, ಪೇರಲ, ಬಾಳೆ, ಚಿಕ್ಕು (ಸಪೋಟ), ಕಲ್ಲಂಗಡಿ, ತೆಂಗು, ಎಲೆಬಳ್ಳಿ, ಟೊಮೆಟೊ, ಮೆಣಸಿನಕಾಯಿ, ಉಳ್ಳಾಗಡ್ಡಿ, ಬಳ್ಳುಳ್ಳಿ, ಬದನೆಕಾಯಿ, ಶುಂಠಿ, ಸೌತೆ, ಹಿರೇಕಾಯಿ, ಹಾಗಲ, ಕುಂಬಳಕಾಯಿ, ಎಲೆಕೋಸು (ಕ್ಯಾಬೇಜ್), ಬೆಂಡಿ ಕಾಯಿ ಹಾಗೂ ಇತರೆ ಬೆಳೆಗಳಿಗಿಂತಲೂ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಪ್ರದೇಶ ಅಧಿಕವಾಗಿದೆ.

ADVERTISEMENT

‘ಜಿಲ್ಲೆಯ 18,223.81 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಿದೆ. ಉಳಿದ ಬೆಳೆಗೆ ಹೋಲಿಸಿದರೆ, ಜಿಲ್ಲೆಯಲ್ಲಿ ಅಡಿಕೆ ಪ್ರದೇಶ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಳವೂ ಆಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಹಲವು ರೈತರು ಮಾವು ಹಾಗೂ ಮೆಣಸಿನಕಾಯಿ ಬೆಳೆಯುತ್ತಿದ್ದರು. ಈಗ ಕ್ರಮೇಣ ಮಾವು– ಮೆಣಸಿನಕಾಯಿ ಬೆಳೆಯಿಂದ ವಿಮುಕ್ತರಾಗುತ್ತಿದ್ದಾರೆ. ಪ್ರಸಕ್ತ ವರ್ಷ 5,033.04 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಹಾಗೂ 4,331.70 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಮುಂದಿನ ವರ್ಷ ಈ ಪ್ರಮಾಣ ಕಡಿಮೆಯಾಗಬಹುದು. ಶುಂಠಿ ಪ್ರದೇಶವೂ 2,748.01 ಹೆಕ್ಟೇರ್‌ನಷ್ಟಿದ್ದು, ವರ್ಷದಿಂದ ವರ್ಷಕ್ಕೆ ಸ್ವಲ್ಪ ಏರಿಕೆಯಾಗುತ್ತಿದೆ’ ಎಂದರು.

‘ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಬೇಡಿಕೆಯೂ ಹೆಚ್ಚಿದೆ. ಕಾಗಿನೆಲೆ ಹಾಗೂ ನರೇಗಲ್‌ನ ವ್ಯಾಪಾರಿಗಳು, ಸ್ಥಳೀಯವಾಗಿಯೇ ಅಡಿಕೆ ಖರೀದಿಸುತ್ತಿದ್ದಾರೆ. ಹೀಗಾಗಿ, ರೈತರು ಜಮೀನಿನಲ್ಲಿದ್ದ ಬೇರೆ ಬೆಳೆಗಳನ್ನು ತೆಗೆದು ಅಡಿಕೆ ಸಸಿ ಬೆಳೆಸುತ್ತಿದ್ದಾರೆ. ಮುಂಬರುವ 10 ವರ್ಷಗಳವರೆಗೆ ಅಡಿಕೆಗೆ ಉತ್ತಮ ಬೆಲೆ ಇರುವುದಾಗಿ ಅಂದಾಜಿಸಲಾಗಿದೆ’ ಎಂದು ಹೇಳಿದರು. 

ಮಲೆನಾಡು ಸೆರಗಿನಲ್ಲಿರುವ ತಾಲ್ಲೂಕುಗಳಾದ ಹಾನಗಲ್, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಭಾಗದಲ್ಲಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ಈಗ ಅಡಿಕೆ ಬೆಳೆಯನ್ನು ಯಥೆಚ್ಚವಾಗಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಬಯಲು ಸೀಮೆಯ ಪ್ರದೇಶಕ್ಕೂ ಅಡಿಕೆ ಲಗ್ಗೆ ಇಟ್ಟಿದೆ. ಮಳೆ ಆಶ್ರಿತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸುತ್ತಿರುವ ರೈತರು, ನೀರಾವರಿ ಪ್ರದೇಶ ಮಾಡುವ ಮೂಲಕ ಅಡಿಕೆ ಸಸಿಗಳನ್ನು ಬೆಳೆಸುತ್ತಿದ್ದಾರೆ. ಹಾವೇರಿ, ಶಿಗ್ಗಾವಿ, ಸವಣೂರು ತಾಲ್ಲೂಕಿನ ಬಯಲು ಸೀಮೆ ಗ್ರಾಮಗಳಲ್ಲಿಯೂ ಅಡಿಕೆ ತೋಟಗಳು ಕಾಣಿಸುತ್ತಿವೆ.

ಅಡಿಕೆಗೆ ನೀರು ಅತೀ ಮುಖ್ಯ. ನದಿ ಪಾತ್ರ ಹಾಗೂ ನೀರಾವರಿ ಸೌಲಭ್ಯ ಬಳಸಿಕೊಂಡು ಅಡಿಕೆ ಬೆಳೆಯಲಾಗುತ್ತಿದೆ. ಸಸಿ ನಾಟಿ ಹಾಗೂ ಪೋಷಣೆಗೆ ತೋಟಗಾರಿಕೆ ಇಲಾಖೆಯಿಂದ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಸಹಾಯಧನ ಒದಗಿಸಲಾಗುತ್ತಿದೆ. ಇದರ ಸಹಾಯದಿಂದ ರೈತರು ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ.

ಮಣ್ಣು ಹಾಕಿಸಿ ಕೃಷಿ: ತಗ್ಗು ಪ್ರದೇಶಗಳಲ್ಲಿ ಅಡಿಕೆ ಬೆಳೆ ಬೆಳೆದರೆ, ನೀರು ನಿಂತುಕೊಂಡು ಜವಳು ಹೆಚ್ಚಾಗುವುದಾಗಿ ಕೃಷಿ ತಜ್ಞರು ಹೇಳುತ್ತಿದ್ದಾರೆ. ರೈತರು, ಅಡಿಕೆ ಸಸಿ ಹಚ್ಚುವುದಕ್ಕೂ ಮುನ್ನ ಕೆರೆಗಳಿಂದ ಜಮೀನಿಗೆ ಮಣ್ಣು ಹಾಕಿಸುತ್ತಿದ್ದಾರೆ. ತದನಂತರವೇ ಅಡಿಕೆ ಸಸಿ ನಾಟಿ ಮಾಡುತ್ತಿದ್ದಾರೆ.

ಅಡಿಕೆ ಸಸಿ ಹಚ್ಚಿದ ನಂತರ, ಹನಿ ನೀರಾವರಿ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆ ಮೂಲಕ ಸಸಿಗಳಿಗೆ ನೀರುಣಿಸುತ್ತಿದ್ದಾರೆ. ಸಸಿ ನಾಟಿ ಮಾಡಿದ 4 ವರ್ಷದಿಂದ 6 ವರ್ಷಗಳ ನಂತರ, ಅಡಿಕೆ ಫಸಲು ಆರಂಭವಾಗುತ್ತದೆ. ಅಲ್ಲಿಯವರೆಗೂ ರೈತರು, ಅಡಿಕೆ ಮಧ್ಯದಲ್ಲಿ ಬಾಳೆ, ಪಪ್ಪಾಯಿ, ನುಗ್ಗೆ ಹಾಗೂ ಇತರೆ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. 

ರೋಗ, ಹವಾಮಾನ್ಯ ವೈಪರೀತ್ಯದಿಂದ ನಷ್ಟ: ‘ಅಡಿಕೆ ಸಸಿಗಳನ್ನು ಮಕ್ಕಳ ರೀತಿಯಲ್ಲಿ ಬೆಳೆಸಬೇಕು’ ಎಂದು ರೈತರು ಹೇಳುತ್ತಾರೆ. ಯಾವುದಾದರೂ ರೋಗ ಬಂದರೆ ಹಾಗೂ ಹವಾಮಾನ ವೈಪರೀತ್ಯದಿಂದ ಸಸಿಗಳು ಹಾಳಾಗುತ್ತವೆ. ಈ ರೀತಿಯಾದರೆ, ಹಲವು ವರ್ಷ ಬೆಳೆಸಿದ ಸಸಿಗಳು ಕೆಲ ದಿನಗಳಲ್ಲಿಯೇ ಒಣಗಿ ನಶಿಸುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿರುವ ಪ್ರಕರಣಗಳೂ ವರದಿಯಾಗಿವೆ.

ಅಡಿಕೆಯನ್ನು ಔಷಧಿ ಪೇಂಟ್ ಗುಟ್ಕಾ ಹಾಗೂ ಇತರೆಡೆ ಬಳಸಲಾಗುತ್ತಿದೆ. ಈ ಬೆಳೆಗೆ ನೀರು ಮುಖ್ಯ. ನೀರಿನ ಮೂಲ ಚೆನ್ನಾಗಿದ್ದರೆ ರೈತರು ಅಡಿಕೆ ಬೆಳೆಯಬೇಕು. ಸ್ವಲ್ಪ ವ್ಯತ್ಯಾಸವಾದರೂ ಸಸಿಗಳು ಒಣಗುತ್ತವೆ
-ಆರ್.ಜಿ. ಗೊಲ್ಲರ, ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ
ಸದ್ಯದ ಮಾರುಕಟ್ಟೆಯಲ್ಲಿ ಅಡಿಕೆಗೆ ಒಳ್ಳೆಯ ಬೆಲೆಯಿದೆ. ಹೀಗಾಗಿ ರೈತರು ಅಡಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಇಲಾಖೆಯಿಂದಲೂ ರೈತರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ
- ಸಿದ್ದರಾಮಯ್ಯ, ಉಪ ನಿರ್ದೇಶಕ ಹಾವೇರಿ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.