
ಹಾವೇರಿ: ಜಿಲ್ಲೆಯಾದ್ಯಂತ ಪ್ರತಿ ವರ್ಷವೂ ಹೋಳಿಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವರ್ಷವೂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಯುತ್ತಿದೆ.
ಕಾಮಣ್ಣನ ಹಬ್ಬವೆಂದೇ ಕರೆಯುವ ಈ ಆಚರಣೆಯಂದು ಬಣ್ಣದಾಟ ಜೋರಾಗಿರುತ್ತದೆ. ಕಾಮಣ್ಣನ ಪ್ರತಿಕೃತಿ ಪ್ರತಿಷ್ಠಾಪನೆ ಮೂಲಕ ಆರಂಭವಾಗುವ ಹಬ್ಬವು, ದಹನದ ಮೂಲಕ ಮುಕ್ತಾಯಗೊಳ್ಳುತ್ತದೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಲು ಜನರು ಅಣಿಯಾಗಿದ್ದಾರೆ. ತಮ್ಮ ಹತ್ತಿರದ ಮಾರುಕಟ್ಟೆಗೆ ತೆರಳಿ, ಬಣ್ಣದಾಟಕ್ಕೆ ಅಗತ್ಯವಿರುವ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಹಲಗೆ ಬಾರಿಸುವ ಸಂಪ್ರದಾಯವಿದೆ. ಹಲವು ದಿನಗಳಿಂದ ಜನರು ಹಲಗೆ ಹಿಡಿದು ರಸ್ತೆಯಲ್ಲಿ ಬಾರಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಹಬ್ಬದಂದು ಹೋಳಿಗೆ ಹಾಗೂ ಸಿಹಿ ಊಟ ಮಾಡುವ ಸಂಪ್ರದಾಯವಿದೆ. ಇದಕ್ಕಾಗಿ ಅಗತ್ಯ ಕಿರಾಣಿ ವಸ್ತುಗಳ ಖರೀದಿಯೂ ಕಂಡುಬರುತ್ತಿದೆ.
ವರ್ಷದ ಕೊನೆಯ ಹಬ್ಬ ಎನಿಸಿಕೊಂಡಿರುವ ಹೋಳಿ ಹಬ್ಬವನ್ನು ಗಂಡುಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ‘ಎಲ್ಲ ಹಬ್ಬಕ್ಕೆ ಖರ್ಚು ಮಾಡಿದ ಗಂಡು ಮಕ್ಕಳು, ಕೊನೆಯಲ್ಲಿ ಅಂಗಿ ಹರಿದುಕೊಂಡು ಹೊಯ್ಕೊಳ್ಳುತ್ತಾರೆ’ ಎಂಬ ನಾಣ್ಣುಡಿ ಗ್ರಾಮೀಣ ಪ್ರದೇಶದಲ್ಲಿದೆ.
ಬಣ್ಣದಾಟ ನಾಳೆ: ಮಾ. 3ರಂದು ಹೋಳಿ ಹುಣ್ಣಿಮೆಯಿದೆ. ಇದೇ ದಿನದಂದು ಹಲವು ಗ್ರಾಮಗಳಲ್ಲಿ ಬಣ್ಣದಾಟ ಇರಲಿದೆ. ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಮಾ. 4ರಂದು ಬಣ್ಣದಾಟ ನಿಗದಿಪಡಿಸಲಾಗಿದೆ. ಬಣ್ಣದಾಟದ ದಿನವೂ ಆಯಾ ಗ್ರಾಮಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ.
ಹೋಳಿ ಹಬ್ಬದ ಅಂಗವಾಗಿ ಮಾರ್ಚ್ 3ರಿಂದ ಮಾರ್ಚ್ 13ರವರೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಹಾವೇರಿಯಲ್ಲಿ ಮಾ. 3ರ ಬೆಳಿಗ್ಗೆ 6 ಗಂಟೆಯಿಂದ ಮಾ. 5ರ ಬೆಳಿಗ್ಗೆ 6ರವರೆಗೆ ಹಾವನೂರು ಯಲಗಚ್ಚ ದೇವಿಹೊಸೂರ ಹಿರೇಹಳ್ಳಿ ಕವಲೆತ್ತು ಕರೂರು ಕೋಡಿಯಾಲ ಮಾಕನೂರು ಕೂಸನೂರ ಕಲಕೇರಿ ಮುತ್ತಳ್ಳಿ ಹಿರೇಮರಳಿಹಳ್ಳಿ ಹುರಳಿಕುಪ್ಪಿ ಹಿರೇಬೆಂಡಿಗೇರಿ ಗ್ರಾಮಗಳಲ್ಲಿ ಮಾ. 3ರಿಂದ ಮಾ. 4ರವರೆಗೆ ರಾನೆಬೆನ್ನೂರು ಶಹರ ಗುತ್ತಲ ಹೊಸರಿತ್ತಿ ದೇವಗಿರಿ ಕರ್ಜಗಿ ಮೆಡ್ಲೇರಿ ಅರೆಮಲ್ಲಾಪುರ ಹಿರೇಬಿದರಿ ಕಜ್ಜರಿ ಕಾಕೋಳ ಹಲಗೇರಿ ಕುಪ್ಪೇಲೂರ ತಡಸ ಹತ್ತಿಮೂರು ಯಲವಿಗಿ ಕಡಕೋಳ ಹಾಗೂ ಹುಲಗೂರ ಗ್ರಾಮಗಳಲ್ಲಿ ಮಾ. 4ರಿಂದ ಮಾ. 5ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮಾಸೂರ ನೀಡನೇಗಿಲು ರಟ್ಟಿಹಳ್ಳಿ ತುಮ್ಮಿನಕಟ್ಟಿ ಕಂಚಿನೆಗಳೂರಿನಲ್ಲಿ ಮಾ. 5ರಿಂದ ಮಾ.6 6ರವರೆಗೆ ಸವಣೂರು ಶಿಗ್ಗಾವಿ ಪಟ್ಟಣಗಳಲ್ಲಿ ಮಾ. 6ರಿಂದ ಮಾ. 8ರವರೆಗೆ ಮೋಟೆಬೆನ್ನೂರು ಕೋಡ ಬೆಟಕೇರೂರು ಆಡೂರ ತಿಳವಳ್ಳಿ ಹೇರೂರ ನರೇಗಲ್ ಕಲ್ಲಾಪುರ ಬಂಕಾಪೂರ ಮುನವಳ್ಳಿ ಗ್ರಾಮದಲ್ಲಿ ಮಾ. 7ರಿಂದ ಮಾ.8ರವರೆಗೆ ಹಾನಗಲ್ ಪಟ್ಟಣದಲ್ಲಿ ಮಾ. 7ರಿಂದ ಮಾ. 9ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬ್ಯಾಡಗಿ ಹಂಸಬಾವಿ ಚಿಕ್ಕೇರೂರ ಬೊಮ್ಮನಹಳ್ಳಿ ಚಿಕ್ಕಾಂಶಿ ಹೊಸೂರ ಬೆಳಗಾಲಪೇಟೆಯಲ್ಲಿ ಮಾ. 8ರಿಂದ ಮಾ. 9ರವರೆಗೆ ಅಕ್ಕಿಆಲೂರಿನಲ್ಲಿ ಮಾ. 10ರಿಂದ ಮಾ. 12ರವರೆಗೆ ಹಿರೇಕೆರೂರು ತಾವರಗಿಯಲ್ಲಿ ಮಾ. 12ರಿಂದ ಮಾ. 13ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.