ADVERTISEMENT

ಕಿರುಕುಳ ಆರೋಪ: ಹಾವೇರಿ ಜಿಲ್ಲಾಸ್ಪತ್ರೆಯ ‘ಡಿ’ ಗ್ರೂಪ್ ನೌಕರ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:06 IST
Last Updated 28 ಜನವರಿ 2026, 7:06 IST
<div class="paragraphs"><p>ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ&nbsp;ಸಿದ್ದಪ್ಪ ರೆಡ್ಡಿ</p></div>

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಪ್ಪ ರೆಡ್ಡಿ

   

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ನೌಕರ ಸಿದ್ದಪ್ಪ ರೆಡ್ಡಿ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, 'ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರು ಹಾಗೂ ವೈದ್ಯರ ಕಿರುಕುಳವೇ ಇದಕ್ಕೆ ಕಾರಣ' ಎಂಬ ಆರೋಪ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಹುರುಬಿನಹಟ್ಟಿ ಗ್ರಾಮದ ಸಿದ್ದಪ್ಪ ಅವರು ಕಾಯಂ ನೌಕರರಾಗಿ 12 ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬುಧವಾರ ಬೆಳಿಗ್ಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿದ ಸಂಬಂಧಿಕರು ಸಿದ್ದಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಆತ್ಮಹತ್ಯೆ ಯತ್ನದ ಬಗ್ಗೆ 'ಪ್ರಜಾವಾಣಿ' ಜೊತೆ ಮಾತನಾಡಿದ ಸಿದ್ದಪ್ಪ ರೆಡ್ಡಿ, 'ಜಿಲ್ಲಾಸ್ಪತ್ರೆಯ ವೈದ್ಯರ ಡಾ. ಸುರೇಶ ಗಡ್ಡಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರು ಅವರು ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ ನ್ಯಾಯ ಬೇಕು. ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮವಾಗಬೇಕು' ಎಂದು ಅವರು ಆಗ್ರಹಿಸಿದರು.

'ಜ. 21ರಂದು ಕೆಲಸದಲ್ಲಿದ್ದೆ. ವೈದ್ಯರು ಹೇಳಿದರೆ ಮಾತ್ರ ರೋಗಿಗಳನ್ನು ಕರೆತರುವುದು ನನ್ನ ಕೆಲಸವಾಗಿತ್ತು. ಆದರೆ, ಯಾರೂ ಹೇಳದಿದ್ದರಿಂದ ರೋಗಿಗಳನ್ನು ಕರೆಯಲಿಲ್ಲ. ಅದೇ ವಿಚಾರವಾಗಿ ವೈದ್ಯ ಡಾ. ಸುರೇಶ ಕಡ್ಲಿ ಅವರು ಅವಾಚ್ಯ ಶಬ್ದಗಳಿಂದ ಬೈದರು. ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಸ್ಥಳಕ್ಕೆ ಕರೆಸಿದರು. ಕೊಠಡಿ ಬಾಗಿಲನ್ನು ಹಾಕಿ, ಎಲ್ಲರೂ ಸೇರಿ ಅವಾಚ್ಯ ಶಬ್ಧಗಳಿಂದ ಬೈದರು. ಸ್ಥಳೀಯನಲ್ಲವೆಂದು ತಿಳಿದು ಮಾನಸಿಕ ಕಿರುಕುಳ ನೀಡಿದರು. ₹8 ಸಾವಿರ ಸಂಬಳ ಪಡೆಯುವ‌ ನೀನು, ಕಸಗೂಡಿಸಲು ಬಂದಿದಿಯಾ? ಎಂದು ಬೈದಿದ್ದರು. ಇದರಿಂದ ಮಾನಸಿಕವಾಗಿ ನೋವು ಉಂಟಾಗಿ, ನಿದ್ದೆ ಮಾಡಿಲ್ಲ. ಜೀವನವೇ ಬೇಸರವಾಗಿ ಆತ್ಮಹತ್ಯೆ ತೀರ್ಮಾನ ಕೈಗೊಂಡೆ' ಎಂದು ತಿಳಿಸಿದರು.

ಘಟನೆ ಬಗ್ಗೆ ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ.

ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಶಸ್ತ್ರ ಚಿಕಿತ್ಸಕ‌ ಪಿ.ಆರ್. ಹಾವನೂರು ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.