ಶಿವಾನಂದ ಪಾಟೀಲ
ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದು, ಜಾಗದ ಕೊರತೆಯಿಂದಾಗಿ ವೈದ್ಯಕೀಯ ಸೌಲಭ್ಯ ನೀಡುವಲ್ಲಿ ತೊಂದರೆ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತ, ಹೆಸ್ಕಾಂ ಕಚೇರಿಯ 2 ಎಕರೆ 14 ಗುಂಟೆ ಜಾಗವನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲು ತಯಾರಿ ಆರಂಭಿಸಿದೆ.
ಹಳೇ ಪಿ.ಬಿ. ರಸ್ತೆಯ ಕಾಗಿನೆಲೆ ವೃತ್ತದಲ್ಲಿರುವ 7 ಎಕರೆ ಜಾಗದಲ್ಲಿ ಜಿಲ್ಲಾಸ್ಪತ್ರೆ ಹಾಗೂ ಮಹಿಳಾ–ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಹೊರ ಜಿಲ್ಲೆಗಳಿಂದಲೂ ಜನರು ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರುವುದರಿಂದ ದಿನದಿಂದ ದಿನಕ್ಕೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
ಪ್ರತಿ ದಿನವೂ ಜನರು ಚೀಟಿ ಮಾಡಿಸಲು ಆಸ್ಪತ್ರೆಯ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಗಂಟೆಗಟ್ಟಲೇ ಕಾದು ಚೀಟಿ ಮಾಡಿಸುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಾದರೂ ಆಸ್ಪತ್ರೆಯ ಜಾಗ ಮಾತ್ರ ಹೆಚ್ಚಾಗಿಲ್ಲ. ಮತ್ತಷ್ಟು ಹಾಸಿಗೆ ಅಳವಡಿಸಲು ಹಾಗೂ ಹೊಸ ವೈದ್ಯಕೀಯ ಸೌಲಭ್ಯಗಳನ್ನು ಬಳಸಲು ಜಾಗದ ಕೊರತೆ ಉಂಟಾಗುತ್ತಿದೆ.
ಹಾವೇರಿಯಲ್ಲಿ ಸ್ಥಾಪನೆಯಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಹಿಮ್ಸ್) ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅನುಭವವುಳ್ಳ ವೈದ್ಯರೇ ಹಿಮ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾಸ್ಪತ್ರೆ ನಿರ್ವಹಣೆಯ ಜವಾಬ್ದಾರಿಯನ್ನು ಹಿಮ್ಸ್‌ಗೆ ವಹಿಸಲಾಗಿದೆ.
ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲೂ ಹಿಮ್ಸ್ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳು ಸಹ ರೋಗಿಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ರೋಗಿಗಳ ಜೊತೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿರುವುದರಿಂದ, ಜಿಲ್ಲಾಸ್ಪತ್ರೆಯಲ್ಲಿ ಸ್ಥಳದ ಕೊರತೆ ಎದ್ದು ಕಾಣುತ್ತಿದೆ.
ವೈದ್ಯಕೀಯ ಶಿಕ್ಷಣ ಹಾಗೂ ರೋಗಿಗಳಿಗೆ ಮತ್ತಷ್ಟು ಆಧುನಿಕ ಸೌಲಭ್ಯ ಒದಗಿಸಲು ಅಡೆತಡೆ ಉಂಟಾಗುತ್ತಿದೆ. ಇದನ್ನು ಮನಗಂಡ ಹಿಮ್ಸ್ ಡೀನ್ ಹಾಗೂ ನಿರ್ದೇಶಕರು, ಜಿಲ್ಲಾಸ್ಪತ್ರೆಗೆ ಹೊಂದಿಕೊಂಡಿರುವ ಹೆಸ್ಕಾಂ ಕಚೇರಿಗೆ ಸೇರಿರುವ 2 ಎಕರೆ 14 ಗುಂಟೆ ಜಾಗವನ್ನು ಹಸ್ತಾಂತರಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದನ್ನು ಉಲ್ಲೇಖಿಸಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ನಗರದ ಹೃದಯ ಭಾಗದ ಜಾಗ
ಹಾವೇರಿಯ ಹೃದಯಭಾಗದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಹೆಚ್ಚಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು ತೊಂದರೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಜಾಗದ ಅಗತ್ಯವಿರುವುದಾಗಿ ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಜಿಲ್ಲಾಸ್ಪತ್ರೆ ಪಕ್ಕದಲ್ಲಿರುವ ಸರ್ವೇ ನಂಬರ್ ‘30/ಕ’ದಲ್ಲಿ 2 ಎಕರೆ 14 ಗುಂಟೆ ಜಾಗದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ಹಾವೇರಿ ಕಚೇರಿಯಿದೆ. ಇದೇ ಕಚೇರಿಯ ಜಾಗವನ್ನು ಜಿಲ್ಲಾಸ್ಪತ್ರೆಗೆ ನೀಡಿದರೆ, ಆಸ್ಪತ್ರೆಯ ವಿಸ್ತರಣೆಗೆ ಅನುಕೂಲವಾಗಲಿದೆ. ಜೊತೆಗೆ, ಹೊಸ ಕಟ್ಟಡಗಳು ಹಾಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
ದೇವಗಿರಿ ಯಲ್ಲಾಪುರ ಗ್ರಾಮದ ಸರ್ವೇ ನಂಬರ್ ‘86/ಬ’ದಲ್ಲಿ ಕರ್ನಾಟಕ ನೀರಾವರಿ ನಿಗಮದ ತುಂಬಾ ಮೇಲ್ದಂಡೆ ಯೋಜನೆಗೆ ಸೇರಿದ 4 ಎಕರೆ 39 ಗುಂಟೆ ಜಾಗವಿದೆ. ಇದರಲ್ಲಿ 2 ಎಕರೆ ಜಾಗವನ್ನು ಹೆಸ್ಕಾಂ ಹಾವೇರಿ ಕಚೇರಿಗೆ ನೀಡಬಹುದು. ಈ ರೀತಿ ಮಾಡಿದರೆ, ಜಿಲ್ಲಾಸ್ಪತ್ರೆಗೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಮತ್ತಷ್ಟು ಸುಧಾರಿತ ಯಂತ್ರೋಪಕರಣ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿ ಜಿಲ್ಲಾಸ್ಪತ್ರೆಯನ್ನು ಸುಸಜ್ಜಿತಗೊಳಿಸಲು ಅನುಕೂಲವಾಗಲಿದೆ ಎಂಬ ಸಂಗತಿ ಪ್ರಸ್ತಾವದಲ್ಲಿದೆ.
ಹಾವೇರಿ ಜಿಲ್ಲಾಸ್ಪತ್ರೆ ವಿಸ್ತರಿಸುವ ಅಗತ್ಯವಿದ್ದು ಇದರಿಂದ ಜನರಿಗೂ ಮತ್ತಷ್ಟು ಆಧುನಿಕ ವೈದ್ಯಕೀಯ ಸೌಲಭ್ಯಗಳು ಸಿಗಲಿವೆ. ಹೆಸ್ಕಾಂ ಜಾಗದ ಹಸ್ತಾಂತರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ತಹಶೀಲ್ದಾರ್ ಎ.ಸಿ. ಪರಿಶೀಲನೆ
‘ಹಿಮ್ಸ್ ಡೀನ್–ನಿರ್ದೇಶಕರು ನೀಡಿದ್ದ ಕೋರಿಕೆಯಂತೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಯವರಿಂದ ಪರಿಶೀಲನಾ ವರದಿ ಪಡೆಯಲಾಗಿದೆ. ಅದೇ ವರದಿ ಸಮೇತ ಜಿಲ್ಲಾಧಿಕಾರಿಯವರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಕಳುಹಿಸಿದ್ದಾರೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು. ‘ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳದ ಕೊರತೆ ಇರುವುದನ್ನು ಗಮನಿಸಿದ್ದರು. ಜೊತೆಗೆ ಪಕ್ಕದಲ್ಲಿರುವ ಹೆಸ್ಕಾಂ ಕಚೇರಿ ಜಾಗವನ್ನು ವೀಕ್ಷಿಸಿದ್ದರು. ಹೆಸ್ಕಾಂ ಕಚೇರಿಯಲ್ಲಿ ಜನ ದಟ್ಟಣೆ ಕಡಿಮೆ ಇರುವ ಕಾರಣಕ್ಕೆ ಆ ಜಾಗವನ್ನು ಜನದಟ್ಟಣೆ ಹೆಚ್ಚಿರುವ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಬಹುದೆಂದು ಅಭಿಪ್ರಾಯಪಟ್ಟಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.