ADVERTISEMENT

ಹಾವೇರಿ | ಕಾನೂನು ಅರಿವು–ನೆರವಿಗೆ 200 ಸೇವಕರು ನಿಯೋಜನೆ

ಕಾನೂನು ಸೇವೆಗಳ ಪ್ರಾಧಿಕಾರದಿಂದ ನಿಯೋಜನೆ: ಜಿಲ್ಲಾ ಗುರುಭವನದಲ್ಲಿ ತರಬೇತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 6:11 IST
Last Updated 9 ಫೆಬ್ರುವರಿ 2026, 6:11 IST
ಹಾವೇರಿ ಜಿಲ್ಲಾ ಗುರುಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ’ವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್. ಉದ್ಘಾಟಿಸಿದರು
ಹಾವೇರಿ ಜಿಲ್ಲಾ ಗುರುಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ’ವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್. ಉದ್ಘಾಟಿಸಿದರು   

ಹಾವೇರಿ: ಜಿಲ್ಲೆಯ ಜನರಲ್ಲಿ ಕಾನೂನಿನ ಅರಿವು ಮೂಡಿಸಲು ಹಾಗೂ ನೆರವು ಕೊಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, 200 ಅರೆಕಾಲಿಕ ಸ್ವಯಂ ಸೇವಕರನ್ನು ನಿಯೋಜನೆ ಮಾಡಿದೆ.

ಜಿಲ್ಲೆಯ ಹಾವೇರಿ, ಹಾನಗಲ್, ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಅರೆಕಾಲಿಕ ಸ್ವಯಂ ಸೇವಕರ ನೇಮಕಕ್ಕಾಗಿ ಇತ್ತೀಚೆಗೆ ಪ್ರಕಟಣೆ ನೀಡಿತ್ತು. ಅದರನ್ವಯ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 200 ಮಂದಿಯನ್ನು ಅರೆಕಾಲಿಕ ಸ್ವಯಂಸೇವಕರಾಗಿ ನೇಮಕ ಮಾಡಲಾಗಿದೆ.

ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸರ್ಕಾರಿ ನಿವೃತ್ತ ನೌಕರರು ಸೇರಿದಂತೆ ಹಲವರು ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಅವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಇತ್ತೀಚೆಗೆ ತರಬೇತಿಯನ್ನು ನೀಡಲಾಗಿದೆ.

ADVERTISEMENT

ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಸ್ವಯಂಸೇವಕರು ಕೆಲಸ ಮಾಡಲಿದ್ದಾರೆ. ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ಹಾಗೂ ಯಾರಿಗಾದರೂ ಕಾನೂನಿನ ನೆರವು ಅಗತ್ಯವಿದ್ದರೆ ಅವರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಸ್ವಯಂಸೇವಕರಿಗೆ ವಹಿಸಲಾಗಿದೆ.

ನಿಸ್ವಾರ್ಥ ಮನೋಭಾವದಿಂದ ಸೇವೆ ಮಾಡಿ: ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಔಟ್‌ಲಾಡ್ ಇಂಡಿಯಾ ಫೌಂಡೇಷನ್ ಸಹಯೋಗದಲ್ಲಿ ಜಿಲ್ಲಾ ಗುರುಭವನದಲ್ಲಿ ಇತ್ತೀಚೆಗೆ ‘ಅರೆಕಾಲಿಕ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ’ ಜರುಗಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್., ‘ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿನ ಜನರು ಕಾನೂನು ಅರಿವು ಹೊಂದಲು ಸಾಧ್ಯ’ ಎಂದು ಹೇಳಿದರು.

‘ಪ್ರತಿ ಮನೆ ಹಾಗೂ ಮನಕ್ಕೂ ಕಾನೂನಿನ ಅರಿವು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಿಗುವ ಕಾನೂನು ನೆರವು ತಿಳಿಸುವಲ್ಲಿ ಅರೆಕಾಲಿಕ ಸ್ವಯಂ ಸೇವಕರ ಸೇವೆ ಅಗತ್ಯವಾಗಿದೆ. ಸ್ವಯಂ ಸೇವಕರು, ಸಮಾಜ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು’ ಎಂದರು.

ಔಟ್‌ಲಾಡ್ ಇಂಡಿಯಾ ಫೌಂಡೇಷನ್‌ನ ವಂದನಾ ಕೆ. ಹಾಗೂ ತುಷಿತಾ ಎಸ್. ಅವರು ಉಪನ್ಯಾಸ ನೀಡಿದರು.

ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಎನ್.ಎಂ.ರಮೇಶ, ಮಹ್ಮದ್ ಅನ್ವರ ಹುಸೇನ ಮೊಗಲಾನಿ, ಶೋಭಾ ಬಿ.ಜಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ., ನ್ಯಾಯಾಧೀಶರಾದ ಆಕರ್ಷ ಎಂ., ಬಿಪಿನ್ ಎಚ್.ಎಂ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಸಿದ್ದನಗೌಡರ ಹಾಗೂ ಇತರರು ಇದ್ದರು.

ಕಾನೂನು ಸೇವಗಳ ಪ್ರಾಧಿಕಾರದ ಪ್ರಯೋಗ ನಿವೃತ್ತ ಶಿಕ್ಷಕರು, ನೌಕರರ ನಿಯೋಜನೆ

ಮನೆ ಮನಕ್ಕೂ ಕಾನೂನಿನ ಅರಿವು ಹಾಗೂ ಪ್ರಾಧಿಕಾರದ ಕಾನೂನು ನೆರವು ತಿಳಿಸುವಲ್ಲಿ ಸ್ವಯಂ ಸೇವಕರ ಪಾತ್ರ ಮುಖ್ಯವಾಗಿರಲಿದೆ. ಜವಾಬ್ದಾರಿ ಅರಿತು ಕೆಲಸ ಮಾಡಿ

-ಬಿರಾದಾರ ದೇವಿಂದ್ರಪ್ಪಾ ಎನ್. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.