ADVERTISEMENT

ಆಟ ಮುಗಿಸಿದ ಸೋಲಿಲ್ಲದ ಸರದಾರ: ಹಾವೇರಿ ಡಾನ್‌ 111

‘ಹಾವೇರಿ ಡಾನ್‌ 111’ ಕೊಬ್ಬರಿ ಹೋರಿಯ ಅದ್ಧೂರಿ ಮೆರವಣಿಗೆ: ಕಣ್ಣೀರಿಟ್ಟ ಅಭಿಮಾನಿಗಳು

ಸಿದ್ದು ಆರ್.ಜಿ.ಹಳ್ಳಿ
Published 11 ಜನವರಿ 2022, 19:30 IST
Last Updated 11 ಜನವರಿ 2022, 19:30 IST
‘ಹಾವೇರಿ ಡಾನ್‌ 111’ ಎಂಬ ಕೊಬ್ಬರಿ ಹೋರಿ ಮೃತಪಟ್ಟ ಹಿನ್ನೆಲೆಯಲ್ಲಿ ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
‘ಹಾವೇರಿ ಡಾನ್‌ 111’ ಎಂಬ ಕೊಬ್ಬರಿ ಹೋರಿ ಮೃತಪಟ್ಟ ಹಿನ್ನೆಲೆಯಲ್ಲಿ ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳವಾರ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ:ನೋಟದಲ್ಲೇ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಾ, ಸಹಸ್ರಾರು ಜನರ ನಡುವೆ ಮಿಂಚಿನ ವೇಗದಲ್ಲಿ ಮುನ್ನುಗ್ಗುತ್ತಾ, ಕೊರಳಿಗೆ ಕಟ್ಟಿದ ಕೊಬ್ಬರಿ ಹರಿಯಲು ಒಮ್ಮೆಯೂ ಅವಕಾಶ ಕೊಡದೆ ಗುರಿ ಮುಟ್ಟುತ್ತಿದ್ದ ‘ಹಾವೇರಿ ಡಾನ್‌ 111’ ಎಂಬ ಕೊಬ್ಬರಿ ಹೋರಿ ಮಂಗಳವಾರ ತನ್ನ ಅಂತಿಮ ಆಟ ಮುಗಿಸಿತು.

ಕೊಬ್ಬರಿ ಹೋರಿ ಸ್ಪರ್ಧೆಯ ಅಂಗಳಕ್ಕೆ ‘ಹಾವೇರಿ ಡಾನ್‌’ ಕಾಲಿಟ್ಟರೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಮಿಂಚಿನ ಓಟ ಆರಂಭಿಸಿದರೆ ಅಭಿಮಾನಿಗಳು ‘ಹೈಸ್ಪೀಡ್‌, ಶರವೇಗದ ಸರದಾರ’ ಎಂದು ಕೂಗುತ್ತಾ ಚಪ್ಪಾಳೆ, ಶಿಳ್ಳೆ ಹಾಕಿ ಪ್ರೋತ್ಸಾಹಿಸುತ್ತಿದ್ದರು.

ಸೋಲಿಲ್ಲದ ಸರದಾರ:

ADVERTISEMENT

ಹಾವೇರಿ ಜಿಲ್ಲೆಯ ಹಾನಗಲ್‌, ಕನವಳ್ಳಿ, ದೇವಿಹೊಸೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ತೋಗರ್ಸಿ ಸೇರಿದಂತೆ ಸುತ್ತಮತ್ತಲ ಜಿಲ್ಲೆಗಳಲ್ಲಿ ನಡೆಯುವ ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು. 25 ಬೈಕ್‌, 30 ತೊಲೆ ಬಂಗಾರ, 2 ಚಕ್ಕಡಿ, ಗೋದ್ರೇಜ್‌ ಫ್ರಿಡ್ಜ್‌ ಸೇರಿದಂತೆ ಹಲವು ಬಹುಮಾನಗಳನ್ನು ಗೆದ್ದುಕೊಂಡಿದ್ದ ಈ ಕೊಬ್ಬರಿ ಹೋರಿಗೆ ‘ಸೋಲಿಲ್ಲದ ಸರದಾರ’ ಎಂಬ ಬಿರುದು ಸಿಕ್ಕಿತ್ತು.

ಹಾವೇರಿಯನಟರಾಜ ಕುಳೇನೂರು, ಗಿರೀಶ ಹೊಂಬರಡಿ, ಸಂತೋಷ ಸ್ವಾದಿ ಮತ್ತು ರಾಜು ಮಣೇಗಾರ ಎಂಬ ನಾಲ್ವರು ಸ್ನೇಹಿತರು ಈ ಹೋರಿಯ ಮಾಲೀಕರು. 2006ರಲ್ಲಿ ತಮಿಳುನಾಡಿನಿಂದ ₹50 ಸಾವಿರಕ್ಕೆ ನಾಲ್ಕು ವರ್ಷದ ಹೋರಿಯನ್ನು ಖರೀದಿಸಿ ತಂದಿದ್ದರು. 9 ವರ್ಷ ಪ್ರೀತಿಯಿಂದ ಸಾಕಿದ್ದ ಈ ಹೋರಿ ಮನೆಯ ಸದಸ್ಯರಲ್ಲಿ ಒಬ್ಬನಾಗಿತ್ತು.

ನಿತ್ಯ ತಾಲೀಮು:

‘ಹುರುಳಿ ನುಚ್ಚು, ಬಿಳಿ ಜೋಳದ ನುಚ್ಚು, ಹತ್ತಿ ಕಾಳು, ಬೆಣ್ಣೆ, ಜವಾರಿ ಕೋಳಿ ಮೊಟ್ಟೆ, ಹಸಿ ಹುಲ್ಲು, ಜೋಳದ ಸೊಪ್ಪೆ ಮುಂತಾದ ಆಹಾರವನ್ನು ನಿಯಮಿತವಾಗಿ ಕೊಡುತ್ತಿದ್ದೆವು. ನಿತ್ಯ ಎರಡೂವರೆ ಗಂಟೆ ಈಜು ಮತ್ತು ಓಟದ ತಾಲೀಮು ಮಾಡಿಸುತ್ತಿದ್ದೆವು. ನಾವು ರೊಕ್ಕ ಮಾಡೋಕೆ ಇದನ್ನು ತಮಿಳುನಾಡಿನಿಂದ ತಂದಿರಲಿಲ್ಲ. ಬಸವಣ್ಣನ ಮೇಲಿನ ಪ್ರೀತಿಯಿಂದ ಕರೆ ತಂದಿದ್ದೆವು’ ಎಂದು ಹೋರಿ ಮಾಲೀಕರಲ್ಲಿ ಒಬ್ಬರಾದ ನಟರಾಜ ಕುಳೇನೂರ ತಿಳಿಸಿದರು.

ಅನಾರೋಗ್ಯದಿಂದ ಮೃತಪಟ್ಟ ಹೋರಿಯನ್ನು ಹಾವೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಿಲ್ಲೆಯ ನೂರಾರು ಅಭಿಮಾನಿಗಳು ಹೋರಿಯ ಅಂತಿಮ ದರ್ಶನ ಪಡೆದರು. ಹಾನಗಲ್‌ ತಾಲ್ಲೂಕಿನ ಗುಡ್ಡದಮತ್ತಿಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಮಿಳುನಾಡಿನಲ್ಲೂ ಮಿಂಚು:

ಹಾವೇರಿ ಜಿಲ್ಲೆಯ ವಿವಿಧ ಹಬ್ಬಗಳಲ್ಲಿ ಭಾಗವಹಿಸಿ, ಬಹುಮಾನ ಗೆದ್ದು ಜನರ ಪ್ರೀತಿಗೆ ಪಾತ್ರವಾಗಿದ್ದ ಈ ಹೋರಿಯನ್ನು ಮತ್ತೆ ತಮಿಳುನಾಡಿನ ವರ್ತಕರೊಬ್ಬರಿಗೆ ₹2.50 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಜಲ್ಲಿಕಟ್ಟು ಸ್ಪರ್ಧೆಗಳಲ್ಲೂ ಮಿಂಚು ಹರಿಸಿದ್ದ ಈ ಹೋರಿ ‘ಹಾವೇರಿ ಡಾನ್‌’ ಎಂಬ ಹೆಸರನ್ನೇ ಉಳಿಸಿಕೊಂಡು ಅಭಿಮಾನಿಗಳ ಪ್ರೀತಿಯನ್ನು ಅಲ್ಲಿಯೂ ಸಂಪಾದಿಸಿತ್ತು.

ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಕೃಶವಾಗಿದ್ದ ಈ ಹೋರಿಯನ್ನು ಮತ್ತೆ ಹಾವೇರಿಯ ನಟರಾಜ ಕುಳೇನೂರು ಮತ್ತು ಇತರ ಸ್ನೇಹಿತರು ರಾಜ್ಯಕ್ಕೆ ಕರೆ ತಂದು ಶುಶ್ರೂಷೆ ಮಾಡಿಸಿದ ಪರಿಣಾಮ, ಹೋರಿ ಮತ್ತೆ ಚೇತರಿಸಿಕೊಂಡಿತು. ಇತ್ತೀಚೆಗೆ ಹಾನಗಲ್‌ ಹಬ್ಬದಲ್ಲಿ ಪಾಲ್ಗೊಂಡು 2 ತೊಲೆ ಬಂಗಾರ ಗೆದ್ದಿತ್ತು.

‘ಹಾವೇರಿ ಡಾನ್‌ 111’ ಕೊಬ್ಬರಿ ಹೋರಿಗೆ ಗುಡಿ ಕಟ್ಟಿ, ಅದರ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ. ಮನೆಯ ಮಗ ತೀರಿಕೊಂಡಷ್ಟು ದುಃಖವಾಗುತ್ತಿದೆ.
–ನಟರಾಜ ಕುಳೇನೂರ, ಹೋರಿ ಮಾಲೀಕ, ಹಾವೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.