
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಗೆ ತಯಾರಿ ನಡೆದಿದ್ದು, ಅರ್ಹ ಮತದಾರರ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿರುವ ಪದವೀಧರರು ಮತದಾನ ನೋಂದಣಿ ಮಾಡಿಸಲು ನಿರಾಸಕ್ತಿ ತೋರುತ್ತಿದ್ದಾರೆ.
ಮತದಾರರ ನೋಂದಣಿಗೆ ನವೆಂಬರ್ 6ರವರೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಹಾವೇರಿ ಜಿಲ್ಲೆಯಲ್ಲಿ ಅಕ್ಟೋಬರ್ 24ರ ಅಂತ್ಯಕ್ಕೆ ಕೇವಲ 446 ಪದವೀಧರರು ಮಾತ್ರ ಮತದಾನ ನೋಂದಣಿ ಮಾಡಿಸಿದ್ದಾರೆ. ಬಾಕಿ ಉಳಿದಿರುವ ದಿನಗಳಲ್ಲಿ ಮತ್ತಷ್ಟು ಪದವೀಧರರನ್ನು ನೋಂದಣಿ ಮಾಡಿಸಲು ಬಿಜೆಪಿ–ಕಾಂಗ್ರೆಸ್ ಪಕ್ಷಗಳ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ.
ಹಾವೇರಿ ಜಿಲ್ಲಾಡಳಿತ ಸಹ ಮತದಾನ ನೋಂದಣಿಗಾಗಿ ಪದವೀಧರರಲ್ಲಿ ಮನವಿ ಮಾಡುತ್ತಿದೆ. ಜಿಲ್ಲೆಯ ಆಯಾ ತಹಶೀಲ್ದಾರ್ ಕಚೇರಿಗಳಲ್ಲಿ ನಮೂನೆ 18 ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸುವಂತೆ ಅಧಿಕಾರಿಗಳು ಕೋರುತ್ತಿದ್ದಾರೆ. ಅಷ್ಟಾದರೂ ಪದವೀಧರರು, ಮತದಾನ ನೋಂದಣಿಗೆ ನಿರಾಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ.
ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಒಂದು ಸಾವಿರದಿಂದ 2 ಸಾವಿರ ವಿದ್ಯಾರ್ಥಿಗಳು, ಪದವಿ ಶಿಕ್ಷಣ ಪೂರ್ಣಗೊಳಿಸುತ್ತಿದ್ದಾರೆ. ಹಾವೇರಿ ಮಾತ್ರವಲ್ಲದೇ ಪಕ್ಕದ ಧಾರವಾಡ, ದಾವಣಗೆರೆ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳ ಕಾಲೇಜುಗಳಲ್ಲಿಯೂ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪೈಕಿ ಕೆಲವರು, ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಬಹುತೇಕರು, ಉದ್ಯೋಗ ಅರಸಿ ಬೇರೆ ಜಿಲ್ಲೆಗಳಲ್ಲಿ ವಾಸವಿದ್ದಾರೆ. ಇದೇ ಕಾರಣಕ್ಕೆ ಮತದಾರರ ನೋಂದಣಿ ಪ್ರಮಾಣ ಕಡಿಮೆ ಆಗುತ್ತಿರುವುದಾಗಿ ಅಧಿಕಾರಿಗಳು ಅಭಿಪ್ರಾಯಪಡುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಶಿಗ್ಗಾವಿ–ಸವಣೂರು ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸವಿರುವ ಪದವೀಧರು ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ. 2022ರ ಅಕ್ಟೋಬರ್ 30ಕ್ಕೂ ಮುಂಚೆ ಪದವಿ ಪಡೆದ ಎಲ್ಲರೂ ಮತದಾನಕ್ಕೆ ನೋಂದಣಿ ಮಾಡಿಸಬಹುದಾಗಿದೆ. ಮೂರು ವರ್ಷಗಳ ಡಿಪ್ಲೊಮಾ ಪದವಿ ಪಡೆದವರಿಗೂ ಈ ಬಾರಿ ಮತದಾನ ನೋಂದಣಿಗೆ ಅವಕಾಶ ನೀಡಲಾಗಿದೆ.
ಹಾವೇರಿ, ಉತ್ತರ ಕನ್ನಡ, ಗದಗ ಹಾಗೂ ಧಾರವಾಡ ಜಿಲ್ಲೆಗಳನ್ನು ಒಳಗೊಂಡು ಪದವೀಧರರ ಪಶ್ಚಿಮ ಮತಕ್ಷೇತ್ರ ರಚಿಸಲಾಗಿದೆ. ಮೂರು ಜಿಲ್ಲೆಗಳಲ್ಲಿರುವ ಪದವೀಧರರು, ಮತದಾನ ನೋಂದಣಿ ಮಾಡಿಸಿದರೆ ಮಾತ್ರ ಮತದಾನ ಮಾಡಲು ಅರ್ಹತೆ ಪಡೆಯಲಿದ್ದಾರೆ. ಸಾಮಾನ್ಯ ಚುನಾವಣೆಗಳಲ್ಲಿ ಒಮ್ಮೆ ನೋಂದಣಿ ಮಾಡಿಸಬಹುದಾಗಿದೆ. ಆದರೆ, ಪದವೀಧರರ ಕ್ಷೇತ್ರದ ಚುನಾವಣೆಗಳಲ್ಲಿ ಪ್ರತಿ ಬಾರಿಯೂ ನೋಂದಣಿ ಕಡ್ಡಾಯ ಮಾಡಲಾಗಿದೆ. ಇದು ಸಹ ಮತದಾನ ನೋಂದಣಿ ಕಡಿಮೆ ಆಗಲು ಕಾರಣವೆಂದು ಪಕ್ಷಗಳ ಮುಖಂಡರು ದೂರುತ್ತಿದ್ದಾರೆ.
ನಮೂನೆ 18 ಅರ್ಜಿಯನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಸಮೇತ ಸಲ್ಲಿಸುವಂತೆಯೂ ಆಯೋಗ ತಿಳಿಸಿದೆ. ಆದರೆ, ಹಲವು ಪದವೀಧರರು ದಾಖಲೆ ಹಿಡಿದು ಕಚೇರಿಯಿಂದ ಕಚೇರಿಗೆ ಓಡಾಡಬೇಕಾದ ಸ್ಥಿತಿಯೂ ನಿರ್ಮಾಣವಾಗುತ್ತದೆ. ಈ ಕಿರಿಕಿರಿ ಬೇಡವೆಂದು ಹಲವು ಪದವೀಧರರು, ಮತದಾನ ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಮತದಾರರ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದರೆ, ಮತದಾರದ ನೋಂದಣಿ ಹೆಚ್ಚಾಗಬಹುದೆಂದು ಪದವೀಧರರು ಹೇಳುತ್ತಿದ್ದಾರೆ.
ನೋಂದಣಿ ಮಾಡಿಸಲು ಹಣ ಖರ್ಚು: ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾರರಾಗಿರುವ ಹಲವು ಪದವೀಧರರು, ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ತಹಶೀಲ್ದಾರ್ ಕಚೇರಿಗಳಿಗೆ ಖುದ್ದಾಗಿ ಅರ್ಜಿ ಸಲ್ಲಿಸುವಂತೆ ಚುನಾವಣೆ ಆಯೋಗ ಹೇಳಿದೆ. ದೂರದ ಊರಿನಲ್ಲಿರುವ ಪದವೀಧರರು, ಮತದಾರರ ನೋಂದಣಿಗೆಂದೇ ಹಣ ಖರ್ಚು ಮಾಡಿಕೊಂಡು ತಮ್ಮೂರಿಗೆ ಬರಬೇಕಾದ ಸ್ಥಿತಿಯಿದೆ. ಹಣ ಖರ್ಚಾಗುವ ಕಾರಣಕ್ಕೆ ಹಲವು ಪದವೀಧರರು, ನೋಂದಣಿಗೆ ಆಸಕ್ತಿ ತೋರುತ್ತಿಲ್ಲವೆಂದು ಕೆಲ ಪದವೀಧರರು ಹೇಳುತ್ತಿದ್ದಾರೆ.
‘ಹಾನಗಲ್: 78 ಅರ್ಜಿ ಸ್ವೀಕಾರ’
‘ಪದವೀಧರರ ಪಶ್ಚಿಮ ಮತಕ್ಷೇತ್ರದ ಮತದಾರರ ಮರು ನೋಂದಣಿ ಮತ್ತು ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈಗಾಗಲೇ 78 ಪದವೀಧರರ ಅರ್ಜಿಗಳನ್ನು ಸ್ವೀಕರಿಸಲಾಗಿದೆ’ ಎಂದು ಹಾನಗಲ್ ತಹಶೀಲ್ದಾರ್ ರೇಣುಕಾ ತಿಳಿಸಿದರು. ಹಾನಗಲ್ ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಾನಗಲ್ ತಾಲ್ಲೂಕಿನಲ್ಲಿ 3128 ಪದವೀಧರ ಮತದಾರರಿದ್ದಾರೆ. 952 ಮತದಾರರು ನೋದಣಿಗಾಗಿ ಅರ್ಜಿ ನಮೂನೆ ಪಡೆದುಕೊಂಡಿದ್ದಾರೆ’ ಎಂದರು. ‘ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ತಾಲ್ಲೂಕು ಪಂಚಾಯಿತಿ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಬಹುದು. ಮಾಹಿತಿಗಾಗಿ 08379–262241 9844444269 9740090877 ಸಂಪರ್ಕಿಸಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.