
ಹಾವೇರಿ: ಜಿಲ್ಲೆಯ ಬಹುತೇಕ ಕುಟುಂಬಗಳು ಕೃಷಿ ನಂಬಿಕೊಂಡು ಬದುಕು ಕಟ್ಟಿಕೊಂಡಿವೆ. ಅತಿವೃಷ್ಠಿ–ಅನಾವೃಷ್ಠಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ಹಲವು ರೈತರಿಗೆ, ‘ಕೇಬಲ್ ಕಳ್ಳರ’ ಕಾಟ ಕಾಡುತ್ತಿದೆ. ನೀರಾವರಿ ಜಮೀನುಗಳನ್ನು ಗುರಿಯಾಗಿಸಿಕೊಂಡು ವಿದ್ಯುತ್ ತಂತಿ, ಪೈಪ್ ಹಾಗೂ ಇತರೆ ವಸ್ತುಗಳನ್ನು ಕಳ್ಳರು ಕದಿಯುತ್ತಿರುವುದು ಅನ್ನದಾತರ ನಿದ್ದೆಗೆಡಿಸಿದೆ.
ಬಯಲುಸೀಮೆ ಹಾಗೂ ಮಲೆನಾಡು ಎರಡೂ ರೀತಿಯ ಭೌಗೋಳಿಕ ಪ್ರದೇಶ ಹೊಂದಿರುವ ಹಾವೇರಿ ಜಿಲ್ಲೆ, ಅರೆಮಲೆನಾಡು ಪ್ರದೇಶವೆಂದು ಗುರುತಿಸಿಕೊಂಡಿದೆ. ಸವಣೂರು, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರು, ಶಿಗ್ಗಾವಿ ತಾಲ್ಲೂಕಿನ ಭಾಗಶಃ ಪ್ರದೇಶಗಳು ಬಯಲು ಸೀಮೆಯಾಗಿವೆ. ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ತಾಲ್ಲೂಕಿನ ಭಾಗಶಃ ಪ್ರದೇಶವು ಮಲೆನಾಡು ಜಿಲ್ಲೆಗಳ ಜೊತೆ ಗಡಿ ಹಂಚಿಕೊಂಡಿವೆ.
ಎರಡೂ ಪ್ರದೇಶಗಳಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಆಶ್ರಯದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ನೀರಾವರಿ ಆಶ್ರಿತ ಜಮೀನುಗಳಲ್ಲಿ ಕೊಳವೆ ಬಾವಿಗಳ ಕಾರ್ಯನಿರ್ವಹಣೆಗಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಜೊತೆಗೆ, ನೀರು ಹರಿಸಲು ರೈತರು ಪೈಪ್‌ಗಳನ್ನು ಬಳಸುತ್ತಿದ್ದಾರೆ.
ನೀರಾವರಿ ವ್ಯವಸ್ಥೆಯ ಜಮೀನಿನಲ್ಲಿರುವ ವಿದ್ಯುತ್ ಸಂಪರ್ಕ ತಂತಿಗಳು, ಕೊಳವೆಬಾವಿ ಮೋಟರ್‌ಗಳು, ನೀರು ಪೂರೈಕೆ ಪೈಪ್‌ಗಳು ಸೇರಿದಂತೆ ವಿವಿಧ ಪರಿಕರಗಳ ಮೇಲೆ ಕಳ್ಳರ ಕಾಕದೃಷ್ಟಿ ಬಿದ್ದಿದೆ. ರಾತ್ರಿ ಹೊತ್ತು ಹಾಗೂ ರೈತರು ಇಲ್ಲದ ಸಮಯದಲ್ಲಿ ಜಮೀನಿಗೆ ನುಗ್ಗುವ ಕಳ್ಳರು, ಕೃಷಿ ಪರಿಕರಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ.
ನೀರು ಹರಿಸಲು ಅಗತ್ಯವಿರುವ ಪರಿಕರಗಳನ್ನೇ ಕಳ್ಳರು ಕದ್ದೊಯ್ಯುತ್ತಿದ್ದಾರೆ. ಇದರಿಂದಾಗಿ, ನೀರು ಹರಿಸುವ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ. ಹೊಸ ಪರಿಕರಗಳನ್ನು ಖರೀದಿಸಿ ರೈತರು ಬಳಸುತ್ತಿದ್ದಾರೆ. ಕಳ್ಳರ ಈ ಕೃತ್ಯದಿಂದಾಗಿ ರೈತರು, ಪದೇ ಪದೇ ಹೊಸ ಪರಿಕರಗಳನ್ನು ಖರೀದಿಸಿ ಆರ್ಥಿಕ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ.
ಜಿಲ್ಲೆಯ ಹಾನಗಲ್, ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಹಲವು ಗ್ರಾಮಗಳ ಜಮೀನುಗಳಲ್ಲಿ ಕೃಷಿ ಪರಿಕರಗಳು ಕಳವಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಸಣ್ಣ ಮೊತ್ತದ ಪರಿಕರಗಳಿಗಾಗಿ ಠಾಣೆಗೆ ಅಲೆಬೇಕಾಗಬಹುದೆಂಬ ಕಾರಣಕ್ಕೆ ರೈತರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಕಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು, ಕಳವು ಮುಂದುವರಿದಿದೆ.
ವಿದ್ಯುತ್ ತಂತಿ, ಕೇಬಲ್, ಪೈಪ್‌ಗಳ ಜೊತೆಯಲ್ಲಿ ಸ್ವಿಚ್‌ಬೋರ್ಡ್, ಮೋಟರ್ ಹಾಗೂ ಇತರೆ ವಸ್ತುಗಳ ಕಳವೂ ನಡೆಯುತ್ತಿದೆ.
‘ಮೂರು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ, ಅದರಿಂದ ಕೃಷಿ ಮಾಡುತ್ತಿದ್ದೇವೆ. ಕೊಳವೆಬಾವಿಯಿಂದ ನೀರು ಮೇಲೆತ್ತಲು ವಿದ್ಯುತ್ ಸಂಪರ್ಕವಿದೆ. ಅಲ್ಲಲ್ಲಿ ವಿದ್ಯುತ್ ಕೇಬಲ್‌ಗಳನ್ನು ಹಾಕಿದ್ದೇವೆ. ಇದೇ ಕೇಬಲ್‌ಗಳನ್ನು ಇತ್ತೀಚೆಗೆ ಕಳ್ಳರು ಕದ್ದಿದ್ದಾರೆ. ಅನಿವಾರ್ಯವಾಗಿ ನಾವು ಹೊಸ ಕೇಬಲ್ ತಂದು ಹಾಕಿದ್ದೇನೆ’ ಎಂದು ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ರೈತರೊಬ್ಬರು ಹೇಳಿದರು.
‘ನಮ್ಮ ಜಮೀನು ಮಾತ್ರವಲ್ಲದೇ ಅಕ್ಕ–ಪಕ್ಕದ ಜಮೀನಿನಲ್ಲೂ ವಿದ್ಯುತ್ ಕೇಬಲ್‌ಗಳನ್ನು ಕೊಯ್ದು ಕದ್ದೊಯ್ದಿದ್ದಾರೆ. ಬೆಳೆಗೆ ನೀರು ಹರಿಸಲು ಇಟ್ಟಿದ್ದ ಪೈಪ್‌ಗಳನ್ನೂ ಕಳವು ಮಾಡಿದ್ದಾರೆ’ ಎಂದರು.
‘ಕಳವಾದ ವಿದ್ಯುತ್ ಕೇಬಲ್ ಹಾಗೂ ಪೈಪ್‌ಗಳ ಮೊತ್ತ ₹5 ಸಾವಿರ ದಾಟಿಲ್ಲ. ಹೀಗಾಗಿ, ನಾವು ಠಾಣೆಗೆ ದೂರು ನೀಡಿಲ್ಲ. ದೂರು ನೀಡಿದರೆ, ಕಳ್ಳರ ಪತ್ತೆ ಮಾಡುವಂತೆ ಪದೇ ಪದೇ ಪೊಲೀಸ್ ಠಾಣೆಗೆ ಅಲೆಯಬೇಕು. ಜಮೀನು ಹಾಗೂ ಸುತ್ತಲಿನ ಸ್ಥಳಗಳಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಕದ್ದವರು ಯಾರೆಂದು ಪತ್ತೆ ಮಾಡುವುದು ಕಷ್ಟ. ಹೀಗಾಗಿ, ದೂರು ಕೊಟ್ಟಿಲ್ಲ’ ಎಂದು ಹೇಳಿದರು.
ಹೊಸಕೊಪ್ಪದ ರೈತರೊಬ್ಬರು, ‘ಮಳೆಗಾಲ ಶುರುವಾಗುತ್ತಿದ್ದಂತೆ, ನಮ್ಮ ಭಾಗದಲ್ಲಿ ಮಳೆ ಜಾಸ್ತಿ ಇತ್ತು. ಕೊಳವೆಬಾವಿ ವಿದ್ಯುತ್ ಬೋರ್ಡ್‌ಗಳನ್ನು ಬಟ್ಟೆ–ಪ್ಲಾಸ್ಟಿಕ್‌ನಿಂದ ಮುಚ್ಚಿದ್ದರಿಂದ ಹೆಚ್ಚಿನ ರೈತರು ಜಮೀನು ಬಳಿ ಹೋಗಿಲ್ಲ. ಇಂಥ ಅವಧಿಯಲ್ಲೇ ಕಳ್ಳರು, ಜಮೀನಿಗೆ ನುಗ್ಗಿ ಕೇಬಲ್ ಕತ್ತರಿಸಿಕೊಂಡು ಹೋಗಿದ್ದಾರೆ’ ಎಂದರು.
‘ಕಳ್ಳರು ಯಾರೆಂಬುದು ಸದ್ಯಕ್ಕೆ ನಮಗೆ ಗೊತ್ತಾಗಿಲ್ಲ. ಅವರನ್ನು ಹಿಡಿಯಲು ರೈತರೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಮ್ಮೆಯಾದರೂ ಸಿಗಲೇಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ. ಸಿಕ್ಕ ಬಳಿಕವೇ ಪೊಲೀಸರಿಗೆ ತಿಳಿಸುತ್ತೇವೆ’ ಎಂದು ಹೇಳಿದರು.
‘ಮನೆಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳರು, ಈಗ ಜಮೀನಿಗೆ ಬಂದಿದ್ದಾರೆ. ಕೇಬಲ್ ಹಾಗೂ ಪೈಪ್ ಆಸೆಗಾಗಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ. ಪ್ರತ್ಯೇಕವಾಗಿರುವ ಕೇಬಲ್ ಹಾಗೂ ಪೈಪ್ ಕಳವು ಮಾಡಿದರೆ, ಹೊಸ ಕೇಬಲ್–ಪೈಪ್ ತಂದು ಹಾಕಬಹುದು. ಆದರೆ, ಹನಿ ನೀರಾವರಿ ವ್ಯವಸ್ಥೆ ಇರುವ ಜಮೀನಿನಲ್ಲಿ ಪ್ರಮುಖ ಪರಿಕರಗಳನ್ನೇ ಕಳವು ಮಾಡಿದರೆ ಹೆಚ್ಚು ಸಮಸ್ಯೆಯಾಗುತ್ತದೆ’ ಎಂದು ಆರೇಗೊಪ್ಪದ ರೈತರೊಬ್ಬರು ಅಳಲು ತೋಡಿಕೊಂಡರು.
‘ಹಾನಗಲ್ ತಾಲ್ಲೂಕಿನ ಮಲೆನಾಡು ಪ್ರದೇಶದ ಜಮೀನುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಳವು ಪ್ರಕರಣಗಳು ನಡೆಯುತ್ತಿದೆ. ಒಂದೇ ಗ್ಯಾಂಗ್ ಸದಸ್ಯರು ಈ ಕೃತ್ಯ ಮಾಡುತ್ತಿರುವ ಅನುಮಾನವಿದೆ. ಕಳ್ಳರು ಯಾರು ಎಂಬುದನ್ನು ನಾವೇ ಪತ್ತೆ ಮಾಡುತ್ತಿದ್ದೇವೆ’ ಎಂದರು.
ಬಸಾಪುರ ಗ್ರಾಮದ ರೈತರೊಬ್ಬರು, ‘ಹುಲ್ಲತ್ತಿ, ಆರೇಗೊಪ್ಪ, ಬೊಮ್ಮನಹಳ್ಳಿ, ಬಸಾಪುರ, ಯಳವಟ್ಟಿ, ಹಸನಾಬಾದಿ, ಕೊಪ್ಪರಸಿಕೊಪ್ಪ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕಳವು ನಡೆದಿರುವುದಾಗಿ ಅಲ್ಲಿಯ ರೈತರು ಹೇಳುತ್ತಿದ್ದಾರೆ. ಆದರೆ, ಯಾರೊಬ್ಬರೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ’ ಎಂದು ಹೇಳಿದರು.
ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಗತ್ಯ. ಕೇಬಲ್–ಪೈಪ್ ಕಳವಿನಿಂದ ಬೇಸತ್ತಿರುವ ಕೆಲವರು ತಮ್ಮ ಜಮೀನಿಗೆ ಸಿಸಿಟಿವಿ ಕ್ಯಾಮರಾ ಹಾಕಿದ್ದಾರೆ. ಇತರೆ ರೈತರು ಇಂದಿಗೂ ಕಳ್ಳರ ಭಯದಲ್ಲಿದ್ದಾರೆಪರಮೇಶ್ವರಪ್ಪ ಹಾನಗಲ್ ರೈತ
ಪ್ರತಿ ವರ್ಷ ಒಂದು ಬಾರಿ ವಿದ್ಯುತ್ ತಂತಿ–ಪೈಪ್ ಕಳವು ಆಗುತ್ತಿವೆ. ಇದೊಂದು ವ್ಯವಸ್ಥಿತ ಗ್ಯಾಂಗ್ ಇರುವ ಶಂಕೆಯಿದೆ. ಪೊಲೀಸರು ಕೆಲದಿನ ಜಮೀನುಗಳ ಬಳಿ ಓಡಾಡಿ ಕಳ್ಳರನ್ನು ಪತ್ತೆ ಮಾಡಬೇಕುಬಸವರಾಜ ಜಕ್ಕಣ್ಣಪ್ಪನವರ ಹಿರೇಕೆರೂರು ರೈತ
‘ಠಾಣೆಯ ಬೀಟ್ ಪೊಲೀಸರು ನಮ್ಮೂರಿಗೆ ಆಗಾಗ ಬಂದು ಹೋಗುತ್ತಾರೆ. ಜಮೀನಿನಲ್ಲಿ ನಡೆಯುತ್ತಿರುವ ಕಳವಿನ ಬಗ್ಗೆ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಸಹ ಕಳ್ಳರ ಪತ್ತೆ ಮಾಡೋಣವೆಂದು ಹೇಳಿದ್ದಾರೆ’ ಎಂದು ಹುಲ್ಲತ್ತಿ ಗ್ರಾಮದ ರೈತರು ಹೇಳಿದರು. ‘ದೊಡ್ಡ ಮೊತ್ತದ ಪರಿಕರಗಳು ಕಳವಾದರೆ ದೂರು ನೀಡುತ್ತಾರೆ. ಅದಕ್ಕೆ ಕಳ್ಳರು ಸ್ವಲ್ಪ ಮೊತ್ತದ ಪರಿಕರಗಳನ್ನು ಮಾತ್ರ ಕದ್ದೊಯ್ಯುತ್ತಿದ್ದಾರೆ’ ಎಂದು ತಿಳಿಸಿದರು.
Cut-off box - ಗುಜರಿಗೆ ಮಾರಾಟ ಶಂಕೆ ಮದ್ಯ ಹಾಗೂ ದುಶ್ಚಟಗಳಿಗೆ ದಾಸರಾಗಿರುವ ಕೆಲ ಯುವಕರೇ ಕಳವು ಮಾಡುತ್ತಿರುವ ಮಾಹಿತಿ ರೈತರಿಗಿದೆ. ಜಮೀನಿನಲ್ಲಿ ಕಳವು ಮಾಡಿದ ವಸ್ತುಗಳನ್ನು ಗುಜರಿಗೆ ಹಾಕಿ ಹಣ ಪಡೆಯುತ್ತಿರುವ ಶಂಕೆಯೂ ಇದೆ. ಹೀಗಾಗಿ ರೈತರು ಗುಜರಿ ಅಂಗಡಿಗಳಲ್ಲಿಯೂ ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯುತ್ ಕೇಬಲ್ ತಂತಿ ಪೈಪ್‌ಗಳನ್ನು ಕೆಲ ಗುಜರಿ ಅಂಗಡಿಯವರು ಖರೀದಿ ಮಾಡುತ್ತಾರೆ. ಸ್ವಲ್ಪ ಹಣ ಸಿಕ್ಕರೂ ಸಾಕೆಂಬ ಕಾರಣಕ್ಕೆ ಕಳ್ಳರು ಜಮೀನುಗಳಲ್ಲಿರುವ ಪರಿಕರ ಮೇಲೆ ಕಣ್ಣು ಹಾಕಿದ್ದಾರೆ ಎಂಬುದಾಗಿ ರೈತರು ಹೇಳುತ್ತಿದ್ದಾರೆ. ‘ಗ್ರಾಮೀಣ ಭಾಗದಲ್ಲಿ ಕೆಲ ಯುವಕರು ಗುಂಪು ಕಟ್ಟಿಕೊಂಡು ನಾನಾ ರೀತಿಯ ಕಳವು ಮಾಡುತ್ತಿದ್ದಾರೆ. ಜಮೀನುಗಳಲ್ಲಿ ಯಾರೂ ಇಲ್ಲದಾಗ ರಾತ್ರಿ ಹೊತ್ತಿನಲ್ಲಿ ಕೃತ್ಯ ಎಸಗುತ್ತಿರುವ ಇಂಥವರನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ’ ಎಂದು ರೈತರೊಬ್ಬರು ಹೇಳಿದರು.
Cut-off box - ಹನಿ ನೀರಾವರಿ ವ್ಯವಸ್ಥೆಗೆ ಧಕ್ಕೆ ಕೃಷಿ ಹಾಗೂ ತೋಟಗಾರಿಕೆ ಎರಡೂ ಬೆಳೆಗೂ ಬಹುತೇಕ ರೈತರು ನೀರಾವರಿ ಆಶ್ರಯದಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಸಾವಿರಾರೂ ರೂಪಾಯಿ ಖರ್ಚು ಮಾಡಿ ಜಮೀನುಗಳಲ್ಲಿ ಪೈಪ್ ಹಾಗೂ ಕೇಬಲ್‌ಗಳನ್ನು ಅಳವಡಿಸಿದ್ದಾರೆ. ಜಮೀನಿಗೆ ನುಗ್ಗುವ ಕಳ್ಳರು ಹನಿ ನೀರಾವರಿ ವ್ಯವಸ್ಥೆಯ ಪೈಪ್ ಹಾಗೂ ಕೇಬಲ್‌ಗಳನ್ನು ಎಲ್ಲೆಂದರಲ್ಲಿ ಕೊಯ್ದು ಕಳವು ಮಾಡುತ್ತಿದ್ದಾರೆ. ಇದರಿಂದಾಗಿ ನೀರು ಅಲ್ಲಲ್ಲಿ ಸೋರುತ್ತಿದೆ. ಕಳ್ಳರ ಕೃತ್ಯದಿಂದ ಹನಿ ನೀರಾವರಿ ವ್ಯವಸ್ಥೆಗೆ ಧಕ್ಕೆ ಬರುತ್ತಿದೆ. ಹನಿ ನೀರಾವರಿ ಇರುವ ಜಮೀನುಗಳಲ್ಲಿ ಎಲ್ಲೆಲ್ಲಿ ನೀರು ಸೋರುತ್ತಿದೆ ಎಂಬುದನ್ನು ಪತ್ತೆ ಮಾಡುವುದು ರೈತರಿಗೆ ಕಷ್ಟವಾಗುತ್ತಿದೆ. ಅದಕ್ಕಾಗಿ ಪರಿಣಿತ ಕೆಲಸಗಾರರನ್ನು ಜಮೀನಿಗೆ ಕರೆತಂದು ಪರಿಶೀಲಿಸುತ್ತಿದ್ದಾರೆ. ನಂತರ ಹೊಸದಾಗಿ ಪೈಪ್ ಹಾಗೂ ಕೇಬಲ್ ತಂದು ಪುನಃ ಅಳವಡಿಸುತ್ತಿದ್ದಾರೆ. ಪರಿಕರಗಳ ಮೊತ್ತ ಹಾಗೂ ಕಾರ್ಮಿಕರ ಕೆಲಸದ ಕೂಲಿ ಸೇರಿ ರೈತರಿಗೆ ಮತ್ತಷ್ಟು ಹೊರೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.