ADVERTISEMENT

ಹಾವೇರಿ | ರೈತರ ಬದುಕಿಗೆ ‘ಮುಳ್ಳು’: ಅನ್ನದಾತ ಕಂಗಾಲು

* ಮುಳ್ಳುಸಜ್ಜೆ ನಿಯಂತ್ರಣಕ್ಕೆ ಲಭ್ಯವಿಲ್ಲದ ನಿರ್ದಿಷ್ಟ ಔಷಧ * ಹಳೇ ಕೃಷಿ ಪದ್ಧತಿ ಮರೆತ ರೈತರು * ಸಾಮಾಜಿಕ ಮಾಧ್ಯಮಗಳ ವಿಡಿಯೊ ನಂಬಿ ಖರೀದಿ

ಸಂತೋಷ ಜಿಗಳಿಕೊಪ್ಪ
Published 7 ಜುಲೈ 2025, 2:30 IST
Last Updated 7 ಜುಲೈ 2025, 2:30 IST
ಹಾವೇರಿ ತಾಲ್ಲೂಕಿನ ಬಮ್ಮನಕಟ್ಟಿ ಬಳಿ ಜಮೀನಿನಲ್ಲಿ ಹೆಚ್ಚಾಗಿರುವ ಮುಳ್ಳುಸಜ್ಜೆಯನ್ನು ರೈತರು ಕಿತ್ತು ತೋರಿಸಿದರು
ಹಾವೇರಿ ತಾಲ್ಲೂಕಿನ ಬಮ್ಮನಕಟ್ಟಿ ಬಳಿ ಜಮೀನಿನಲ್ಲಿ ಹೆಚ್ಚಾಗಿರುವ ಮುಳ್ಳುಸಜ್ಜೆಯನ್ನು ರೈತರು ಕಿತ್ತು ತೋರಿಸಿದರು   

ಹಾವೇರಿ: ಬಾನಿನಿಂದ ಮಳೆ ಸುರಿಯುತ್ತಿದ್ದಂತೆ ಭೂಮಿಗೆ ಕೈ ಮುಗಿದು ಬಿತ್ತನೆ ಮಾಡಿರುವ ರೈತರು, ಇತ್ತೀಚಿನ ದಿನಗಳಲ್ಲಿ ಮುಳ್ಳು ಸಜ್ಜೆ ಕಳೆಯಿಂದ ಕಂಗಾಲಾಗಿದ್ದಾರೆ. ಬೆಳೆಯ ಜೊತೆಯಲ್ಲಿ ಅತೀ ವೇಗವಾಗಿ ಹರಡುತ್ತಿರುವ ಮುಳ್ಳುಸಜ್ಜೆಯ ನಿಯಂತ್ರಣಕ್ಕೆ ನಿರ್ದಿಷ್ಟ ಔಷಧಿ ಇಲ್ಲದಿದ್ದರಿಂದ, ರೈತರು ಅಂಗಡಿಯಿಂದ ಅಂಗಡಿಗೆ ಅಲೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿಡಿಯೊ ನಂಬಿ ಸಿಕ್ಕ ಸಿಕ್ಕ ಔಷಧಗಳನ್ನು ಬಳಸುತ್ತಿದ್ದಾರೆ. ಅಷ್ಟಾದರೂ ಕಳೆ ನಿಯಂತ್ರಣಕ್ಕೆ ಬಾರದಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ರೈತಾಪಿ ಜಿಲ್ಲೆ ಎನಿಸಿಕೊಂಡಿರುವ ಹಾವೇರಿಯಲ್ಲಿ ಬಹುತೇಕ ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಬಹುತೇಕ ಬಿತ್ತನೆ ಕೆಲಸವೂ ಮುಗಿದು ಬೀಜಗಳು ಮೊಳಕೆಯೊಡೆದಿವೆ. ಇದರ ನಡುವೆಯೇ ಗೋವಿನ ಜೋಳದಲ್ಲಿ ಮುಳ್ಳುಸಜ್ಜೆ ಕಾಟವೂ ವಿಪರೀತವಾಗಿದೆ.

3.14 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿರುವ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ (ಮೆಕ್ಕೆಜೋಳ) ಬೆಳೆಯಲಾಗಿದೆ. ಇದೇ ಗೋವಿನ ಜೋಳದ ಜಮೀನುಗಳಲ್ಲಿಯೇ ಮುಳ್ಳುಸಜ್ಜೆ ಪ್ರಮಾಣ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ರೈತರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಕೆಲವರು, ಅವರಿವರ ಮಾತು ಕೇಳಿ ಕಳೆ ನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಇನ್ನು ಕೆಲವರು, ಕೃಷಿ ಕಾರ್ಮಿಕರ ಮೂಲಕ ಕಳೆ ಕೀಳಿಸುತ್ತಿದ್ದಾರೆ. ಅಷ್ಟಾದರೂ ಮುಳ್ಳುಸಜ್ಜೆ ಮಾತ್ರ ಕಡಿಮೆಯಾಗುತ್ತಿಲ್ಲ.

ADVERTISEMENT

ಗರಿ ಬಿಚ್ಚುವ ಹಂತದಲ್ಲಿ ಗೋವಿನ ಜೋಳವನ್ನೇ ಹೋಲುವ ರೀತಿಯಲ್ಲಿ ಮುಳ್ಳುಸಜ್ಜೆ ಬೆಳೆಯುತ್ತಿದೆ. ಕೆಲ ರೈತರು, ಬೆಳೆಯ ಸಾಲಿನ ನಡುವೆ ಎಡೆಕುಂಟೆ ಹೊಡೆದು ಕಸ ನಿಯಂತ್ರಣ ಮಾಡುತ್ತಿದ್ದಾರೆ. ಕೆಲ ರೈತರು, ಕಳೆಗಾಗಿಯೇ ದುಬಾರಿ ಹಣ ಕೊಟ್ಟು ಕಳೆನಾಶಕ ಖರೀದಿಸಿ ಬಳಸುತ್ತಿದ್ದಾರೆ. ಆದರೂ ಸಾಲುಗಳ ನಡುವೆ ಹಾಗೂ ಗಿಡಗಳ ಅಕ್ಕ– ಪಕ್ಕದಲ್ಲಿಯೇ ಮುಳ್ಳುಸಜ್ಜೆ ಪುನಃ ಬೆಳೆಯುತ್ತಿದೆ.  

ಹಲವು ರೈತರು, ಹಿಂಗಾರು ಹಾಗೂ ಮುಂಗಾರಿನಲ್ಲಿ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಪರಿವರ್ತನೆಗೆ ಒತ್ತು ನೀಡದಿರುವುದು ಸಹ ಮುಳ್ಳುಸಜ್ಜೆ ಹೆಚ್ಚಾಗಲು ಕಾರಣವಾಗಿದೆ.

ಎಲ್ಲವನ್ನೂ ಭಕ್ಷಿಸುವ ಮುಳ್ಳುಸಜ್ಜೆ: ಗೋವಿನ ಜೋಳ ಬೆಳೆಗಾಗಿ ರೈತರು ಗೊಬ್ಬರ ಹಾಗೂ ವಿವಿಧ ಸತ್ವವುಳ್ಳ ಔಷಧಿಗಳನ್ನು ಬಳಸುತ್ತಿದ್ದಾರೆ. ಇವೆಲ್ಲವನ್ನೂ ಮುಳ್ಳುಸಜ್ಜೆಯೇ ಭಕ್ಷಿಸುತ್ತಿದೆ.  ಮುಳ್ಳುಸಜ್ಜೆ ಸಹ 3 ಅಡಿಯಿಂದ 4 ಅಡಿಯಷ್ಟು ಬೆಳೆಯುವಷ್ಟು ಸಾಮರ್ಥ್ಯ ಹೊಂದಿದೆ.

‘ಇಂದಿನ ಬಹುತೇಕ ರೈತರು, ಹಳೇ ಕೃಷಿ ಪದ್ಧತಿಯನ್ನು ಮರೆತಿದ್ದಾರೆ. ವಿಪರೀತವಾಗಿ ಕಳೆನಾಶಕ ಬಳಸುತ್ತಿದ್ದಾರೆ. ಇದರಿಂದಾಗಿ, ಜಮೀನಿನಲ್ಲಿರುವ ಇತರೆ ಕಳೆಗಳು ನಾಶವಾಗುತ್ತಿವೆ. ಕೊನೆಯಲ್ಲಿ ಉಳಿದ ಮುಳ್ಳುಸಜ್ಜೆ ಒಂದೇ ರಾಜನಂತೆ ಮೆರೆಯುತ್ತಿದೆ. ಇತರೆ ಕಳೆಗಳು ಇದ್ದಿದ್ದರೆ, ಮುಳ್ಳುಸಜ್ಜೆಯನ್ನು ಬೆಳೆಯಲು ಬಿಡುತ್ತಿರಲಿಲ್ಲ’ ಎಂದು ಕೃಷಿ ಅಧಿಕಾರಿಯೊಬ್ಬರು ಹೇಳಿದರು.

ಇಳುವರಿಗೆ ಹೊಡೆತ:

ಗೋವಿನ ಜೋಳದ ಬೆಳವಣಿಗೆಗೆ ಬೇಕಾದ ಸತ್ವವನ್ನು ಮುಳ್ಳುಸಜ್ಜೆಯೇ ಪಡೆದುಕೊಂಡು ಬೆಳೆಯುತ್ತದೆ. ಜಮೀನಿನಲ್ಲಿ ಮುಳ್ಳುಸಜ್ಜೆ ಹೆಚ್ಚಾದರೆ, ಗೋವಿನ ಜೋಳದ ಇಳುವರಿಯೂ ಕುಂಠಿತವಾಗುತ್ತದೆ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಾರೆ.

ಮುಳ್ಳುಸಜ್ಜೆ ಕಳೆಯಲ್ಲಿ ಮುಳ್ಳುಗಳು ಹೆಚ್ಚಿರುತ್ತವೆ. ಗೋವಿನ ಜೋಳದ ಕಟಾವು ಸಂದರ್ಭದಲ್ಲಿ, ತೆನೆಗಳನ್ನು ತೆಗೆಯಲು ಕಾರ್ಮಿಕರು ಹಿಂದೇಟು ಹಾಕುತ್ತಾರೆ. ಮುಳ್ಳುಗಳು ಇರುವುದರಿಂದ ಕೂಲಿಗೆ ಕಾರ್ಮಿಕರು ಸಿಗುವುದಿಲ್ಲವೆಂಬ ನೋವು ರೈತರದ್ದು. ಇದೇ ಕಾರಣಕ್ಕೆ ರೈತರು, ಸಿಕ್ಕ ಸಿಕ್ಕವರ ಸಲಹೆಯಂತೆ ಕೀಟನಾಶಕಗಳನ್ನು ಬಳಸಿ ಕೈ ಸುಟ್ಟುಕೊಳ್ಳುತ್ತಿದ್ದಾರೆ.

‘ಕಳೆದ ವರ್ಷ ಸಾಲ ಮಾಡಿ ಗೋವಿನ ಜೋಳ ಬೆಳೆದಿದ್ದೆ. ಮುಳ್ಳುಸಜ್ಜೆ ನಿಯಂತ್ರಣ ಆಗಲಿಲ್ಲ. ಗೋವಿನ ಜೋಳದ  ಸುತ್ತಲೂ ಮುಳ್ಳುಸಜ್ಜೆ ಇತ್ತು. ತೆನೆ ಬಿಡಿಸಲು ಕಾರ್ಮಿಕರು ಬರಲಿಲ್ಲ. ಮನೆಯವರೇ ಮುಳ್ಳು ಚುಚ್ಚಿಸಿಕೊಳ್ಳುತ್ತ ತೆನೆ ಬಿಡಿಸಿದೆವು. ಅಷ್ಟಾದರೂ ಲಾಭವಾಗಲಿಲ್ಲ. ಸಾಲವೂ ತೀರಲಿಲ್ಲ’ ಎಂದು ಬಂಕಾಪುರದ ರೈತ ಸಣ್ಣಫಕ್ಕೀರಪ್ಪ ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ: ಬೆಳೆಯ ಆರಂಭದಲ್ಲಿ ರೈತರನ್ನು ಕಾಡುತ್ತಿರುವ ಮುಳ್ಳುಸಜ್ಜೆಗೆ ಪರಿಹಾರವೇನು ? ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು ಹರಿದಾಡುತ್ತಿವೆ. ಇದನ್ನು ನಂಬುತ್ತಿರುವ ಬಹುತೇಕ ರೈತರು, ವಿಡಿಯೊದಲ್ಲಿ ತೋರಿಸಿವ ಕೀಟನಾಶಕಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ಹಾವೇರಿಯ ಮಳಿಗೆಯೊಂದರಲ್ಲಿ ಖರೀದಿಸಿದ್ದ ಕೀಟನಾಶಕದಿಂದ ಮುಳ್ಳುಸಜ್ಜೆ ಸಂಪೂರ್ಣ ನಿಯಂತ್ರಣವಾಗಿರುವುದಾಗಿ ವ್ಯಕ್ತಿಯೊಬ್ಬರು ಇತ್ತೀಚೆಗೆ ವಿಡಿಯೊ ಹರಿಬಿಟ್ಟಿದ್ದರು. ಇದನ್ನು ನಂಬಿದ್ದ ರೈತರು, ಮಳಿಗೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಸ್ಥಳಕ್ಕೆ ಬರಬೇಕಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಂತಿಮವಾಗಿ, ಬೇಡಿಕೆಗೆ ತಕ್ಕಷ್ಟು ಕೀಟನಾಶಕ ಲಭ್ಯವಿಲ್ಲದಿದ್ದರಿಂದ ಮಳಿಗೆಗೆ ಬೀಗ ಹಾಕಲಾಗಿದೆ.

ಹಾವೇರಿ ಮಾತ್ರವಲ್ಲದೇ ಬಳ್ಳಾರಿ, ವಿಜಯನಗರ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೈತರು ಸಹ ಕೀಟನಾಶಕ ಖರೀದಿಗೆ ಬಂದಿದ್ದರು. 

‘ಮುಳ್ಳುಸಜ್ಜೆ ಕಳೆಗೆ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಸರ್ಕಾರದವರೂ ಅದನ್ನು ಕಂಡುಹಿಡಿಯುತ್ತಿಲ್ಲ. ಈಗ ಮಳಿಗೆಯವರು ಯಾವುದೋ ಔಷಧಿ ಕೊಡುತ್ತಿದ್ದಾರೆ. ಅದರಿಂದ ಮುಳ್ಳುಸಜ್ಜೆ ಹೋಗಿರುವುದಾಗಿ ಹಲವು ರೈತರು ಹೇಳುತ್ತಿದ್ದಾರೆ. ಆದರೆ, ಈ ಕೀಟನಾಶಕದ ಪೂರೈಕೆ ಕಡಿಮೆ ಪ್ರಮಾಣದಲ್ಲಿದೆ’ ಎಂದು ರೈತ ಶಂಕ್ರಪ್ಪ ಕರೆಣ್ಣನವರ ಹೇಳಿದರು.

ಕೃಷಿ ಅಧಿಕಾರಿಯೊಬ್ಬರು, ‘ಮುಳ್ಳುಸಜ್ಜೆಗೆ ಪರಿಹಾರವೆಂದು ಕೀಟನಾಶನ ಮಾರುತ್ತಿದ್ದರು. ಆದರೆ, ಅದರಲ್ಲಿ ಕೆಲ ಕೀಟನಾಶಕ್ಕೆ ಮಾತ್ರ ಪರವಾನಗಿ ಇದೆ. ಒಂದು ಕೀಟನಾಶಕ್ಕೆ ಇಲ್ಲ. ಅದರ ಮಾರಾಟವನ್ನು ಬಂದ್ ಮಾಡಿಸಿದ್ದೇವೆ. ಉಳಿದ ಕೀಟನಾಶಕಗಳನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಅದರ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

‘ಮಳಿಗೆಯ ಔಷಧಿಗಳನ್ನು ಬಳಸುವುದರಿಂದ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗದು. ಇದು ರೈತರ ನಂಬಿಕೆ ವಿಷಯ. ಕೆಲವರು ಔಷಧಿ ಬಳಸಿ ಕಳೆ ನಿಯಂತ್ರಣ ಮಾಡಿದ್ದಾರೆ. ಅವರ ಜಮೀನಿನಲ್ಲಿ ಪುನಃ ಮುಳ್ಳುಸಜ್ಜೆ ಬರಬಹುದು. ಹೀಗಾಗಿ, ಇಂಥ ಔಷಧಗಳನ್ನು ನಂಬುವ ಮುನ್ನ ರೈತರು ಎಚ್ಚರಿಕೆ ವಹಿಸಬೇಕು. ಔಷಧಿ ಖರೀದಿಸಿದ್ದಕ್ಕಾಗಿ ರಶೀದಿ ಪಡೆಯಬೇಕು’ ಎಂದು ಹೇಳಿದರು.

ಹಾವೇರಿ ತಾಲ್ಲೂಕಿನ ಬಸಾಪುರ ಬಳಿಯ ಜಮೀನಿನಲ್ಲಿ ಗೋವಿನ ಜೋಳದ ಬೆಳೆಯಲ್ಲಿ ಹೆಚ್ಚಿರುವ  ಮುಳ್ಳುಸಜ್ಜೆ – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಬಸಾಪುರ ಬಳಿಯ ಜಮೀನಿನಲ್ಲಿ ಗೋವಿನ ಜೋಳದ ಬೆಳೆಯಲ್ಲಿ ಹೆಚ್ಚಿರುವ  ಮುಳ್ಳುಸಜ್ಜೆ
ಮುಳ್ಳುಸಜ್ಜೆ ಕಾಟ ವಿಪರೀತವಾಗಿದ್ದು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಈ ಕಳೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಸೂಚಿಸಬೇಕು
ಬಸವಂತಪ್ಪ ಲಿಂಗಣ್ಣನವರ ಶಿಗ್ಗಾವಿ

‘ಹಳೇ ಕೃಷಿ ಪದ್ಧತಿಯಿಂದ ಪರಿಹಾರ’

‘ಹಳೇ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಅವರು ಮುಳ್ಳುಸಜ್ಜೆಗೆ ಪರಿಹಾರ ಕಂಡುಕೊಂಡಿದ್ದಾರೆ. ವಿಪರೀತ ಕೀಟನಾಶಕ ಬಳಸುವ ಬದಲು ಹಳೇ ಕೃಷಿ ಪದ್ಧತಿಯತ್ತ ರೈತರು ಒಲುವು ತೋರಬೇಕು’ ಎಂದು ಕೃಷಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ ತಿಳಿಸಿದರು. ‘ಬಿತ್ತನೆ ಮಾಡಿದ 10 ದಿನಗಳಲ್ಲಿ ಕನಿಷ್ಠ ಎರಡು ಸಲ ಎಡೆಕುಂಟೆ ಹೊಡೆಯಬೇಕು. ಯಾವುದೇ ಹಂತದಲ್ಲೂ ಬೀಜಗಟ್ಟದಂತೆ ಕಳೆ ನಿರ್ವಹಣೆ ಮಾಡಬೇಕು. ಗೊಬ್ಬರ ಹಾಕಿದ ನಂತರ ಎಡೆಕುಂಟೆ ಹೊಡೆದು ಬೋದು ಏರಿಸಬೇಕು. ಮುಳ್ಳುಸಜ್ಜೆ ತೀವ್ರವಿದ್ದರೆ ಬಿತ್ತನೆ ಪೂರ್ವದಲ್ಲಿ ಮಳೆಯಾದಾಗಲೊಮ್ಮೆ ಹರಗಬೇಕು. ಬಿತ್ತಿದ ದಿವಸ ಅಟ್ರಾಜಿನ್ (ಉದಯಪೂರ್ವ ಕಳೆನಾಶಕ) ಬಳಕೆ ಮಾಡಬೇಕು. ಬಿತ್ತಿದ ನಂತರ 15 ದಿನದೊಳಗೆ ಉದಯೋತ್ತರ ಕಳೆ ನಾಶಕ ಬಳಸಬೇಕು’ ಎಂದರು.

‘2 ಎಲೆ ಹಂತದಲ್ಲಿ ನಿಯಂತ್ರಣ ಸಾಧ್ಯ’

‘ಬೆಳೆ ಪರಿವರ್ತನೆ ಮಾಡದಿರುವುದು ಹಾಗೂ ವಿಪರೀತ ಕಳೆನಾಶಕಗಳ ಬಳಕೆಯಿಂದ ಇಂದು ಮುಳ್ಳುಸಜ್ಜೆ ಹೆಚ್ಚಾಗಿದೆ. ಎರಡು ಎಲೆಗಳಿರುವ ಹಂತದಲ್ಲಿಯೇ ಸೂಕ್ತ ಉಪಚಾರ ಮಾಡಿದರೆ ಮುಳ್ಳುಸಜ್ಜೆ ನಿಯಂತ್ರಣ ಸಾಧ್ಯ’ ಎಂದು ಕೃಷಿ ಇಲಾಖೆಯ ಹಾವೇರಿ ತಾಲ್ಲೂಕು ಸಹಾಯಕ ನಿರ್ದೇಶಕ ವೀರಭದ್ರಪ್ಪ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಮುಳ್ಳುಸಜ್ಜೆಗೆ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಆದರೆ ಬೆಳೆಯುವ ಹಂತದಲ್ಲಿಯೇ ನಿರ್ದಷ್ಟ ಸಮಯದಲ್ಲಿ ಸೂಕ್ತ ಕೀಟನಾಶಕ ಬಳಸಿದರೆ ನಿಯಂತ್ರಣ ಸಾಧ್ಯ. ಕಳೆ ದೊಡ್ಡದಾದರೆ ನಿಯಂತ್ರಣ ಕಷ್ಟ. ಇಳುವರಿ ಮೇಲೆ ಪರಿಹಾರ ಬೀರುತ್ತದೆ’ ಎಂದರು. ‘ಹಲವು ರೈತರು ಪದೇ ಪದೇ ಗೋವಿನ ಜೋಳ ಬೆಳೆಯುತ್ತಿದ್ದಾರೆ. ಇದರ ಬದಲು ಸೋಯಾಬಿನ್ ಶೇಂಗಾ ಹಾಗೂ ಇತರೆ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಮುಳ್ಳುಸಜ್ಜೆ ನಿಯಂತ್ರಣ ಸಾಧ್ಯ’ ಎಂದರು. ‘ಹಾವೇರಿಯ ಮಳಿಗೆಯೊಂದರಲ್ಲಿ ಮುಳ್ಳುಸಜ್ಜೆಗೆ ಪರಿಹಾರವೆಂದು ಕೀಟನಾಶಕ ಮಾರಲಾಗುತ್ತಿತ್ತು. ಈ ಕೀಟನಾಶಕಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರುವುದು ಬಾಕಿಯಿದೆ’ ಎಂದು ಹೇಳಿದರು.

‘ಬೀಜದ ಆಯಸ್ಸು ಏಳು ವರ್ಷ’

‘ಮುಳ್ಳುಸಜ್ಜೆ ಕಳೆಯಿಂದ ಉತ್ಪತ್ತಿಯಾದ ಒಂದು ಬೀಜ ಮುಂದಿನ 7 ವರ್ಷದವರೆಗೂ ಭೂಮಿಯಲ್ಲಿರುತ್ತದೆ. ಕಳೆ ಒಣಗಿದ ನಂತರ ಬೀಜಗಳು ಭೂಮಿಗೆ ಬೀಳುತ್ತವೆ. ಪ್ರತಿ ವರ್ಷವೂ ಇದೇ ಬೀಜಗಳು ಮೊಳಕೆಯೊಡೆಯುತ್ತವೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಹೇಳಿದರು.

ಮುಳ್ಳುಸಜ್ಜೆ ಹೆಚ್ಚಾಗಲು ಪ್ರಮುಖ ಕಾರಣ

* ಹಳೇ ಕೃಷಿ ಪದ್ಧತಿ ಪಾಲನೆ ಮಾಡದಿರುವುದು

* ವಿಪರೀತ ಕಳೆನಾಶಕಗಳ ಬಳಕೆ * ಪದೇ ಪದೇ ಒಂದೇ ಬೆಳೆ ಬೆಳೆಯುವುದು

* ಪ್ರಾರಂಭಿಕ ಹಂತದಲ್ಲಿ ಹತೋಟಿ ಮಾಡದಿರುವುದು

* ಪರಿಣಿತರ ಸಲಹೆ ಪಡೆಯದೇ ಅನಧಿಕೃತ ಔಷಧಿ ಬಳಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.