ADVERTISEMENT

ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 2:56 IST
Last Updated 2 ಡಿಸೆಂಬರ್ 2025, 2:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿಗ್ಗಾವಿ: ತಾಲ್ಲೂಕಿನ ಕೋಣನಕೇರಿ, ದುಂಡಶಿ, ತಡಸ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದ ಮಾರ್ಗದಲ್ಲಿ ಚಿರತೆ ಮೃತಪಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಗೂ ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ತಾಲ್ಲೂಕಿನ ತರೂರಿನಿಂದ ಕೋಣನಕೇರಿ, ದುಂಡಶಿವರೆಗೆ ರಸ್ತೆಯ ಎರಡು ಬದಿಗೆ ಅರಣ್ಯ ಪ್ರದೇಶವಿದೆ. ಅದರಲ್ಲಿ ಆಗಾಗ ಆನೆ, ಚಿರತೆ, ಕರಡಿಗಳು ಓಡಾಡುತ್ತಿರುತ್ತವೆ. ಅರಟಾಳ, ಬಸವನಕೊಪ್ಪ, ಜೊಂಡಲಗಟ್ಟಿ, ಗೌಳಿದಡ್ಡಿ ಸುತ್ತಲಿನ ಪ್ರದೇಶದಲ್ಲಿಯೂ ಆನೆ, ಕರಡಿ, ಚಿರತೆಗಳು ಕಂಡುಬರುತ್ತಿವೆ.

ADVERTISEMENT

ಕೆಲ ಸಲ ಕಾಡು ಪ್ರಾಣಿಗಳು ಅರಣ್ಯ ಪ್ರದೇಶದಿಂದ ಶಿವಪುರ ತಾಂಡಾ, ನಾಗನೂರ ಕೆರೆ ಸೇರಿದಂತೆ ನಾಡಿಗೆ ಬಂದಿರುವುದನ್ನು ಕಾಣುತ್ತೇವೆ. ಅಂತಹ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರಣ್ಯ ಪ್ರದೇಶಗಳಿಗೆ ಸೇರಿಸಿದ್ದಾರೆ.

ಆದರೆ, ಕಾಡು ಪ್ರಾಣಿಗಳ ರಕ್ಷಣೆ ಹೊಣೆ ಹೊತ್ತಿರುವ ಇಲಾಖೆಯು ನವ್ಯ ಜೀವಿಗಳ ಚಲನವಲನಗಳ ಕುರಿತು ಹೆಚ್ಚಿನ ಒತ್ತು ನೀಡುತ್ತಿಲ್ಲ. ರಾಜ್ಯ ಹೆದ್ದಾರಿಗೆ ರಾತ್ರಿ ನುಸುಳುವ ಪ್ರಾಣಿಗಳು, ವಾಹನಗಳ ಡಿಕ್ಕಿಯಿಂದ ಮೃತಪಡುತ್ತಿವೆ. ಪ್ರಮುಖ ರಸ್ತೆ ಮಾರ್ಗದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ, ಪ್ರಾಣಿಗಳು ಹೇಗೆ ಸತ್ತವು ? ಅಪಘಾತ ಮಾಡಿದವರು ಯಾರು ? ಎಂಬುದು ಗೊತ್ತಾಗುತ್ತಿಲ್ಲ ಎಂದು ಜನರು ಹೇಳಿದರು.

ಕಾಡು ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನೀರು, ಆಹಾರಕ್ಕಾಗಿ ನಾಡಿಗೆ ಬರುವ ಕಾಡುಪ್ರಾಣಿಗಳು ಅಪರಿಚಿತ ವಾಹನಗಳಿಂದ ಪ್ರಾಣ ಕಳೆದುಕೊಳ್ಳುತ್ತವೆ. ರಸ್ತೆಗಳ ಬದಿಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಬೇಕು. ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ಅದರಿಂದ ಕಾಡು ಪ್ರಾಣಿಗಳ ಸಂರಕ್ಷಣೆ ಮಾಡಲು ಸಾಧ್ಯವಿದೆ. ಈ ಕುರಿತು ಅರಣ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕು ಎಂದು ತಾಂಡಾ ನಿವಾಸಿ ಭೀಮಜ್ಜ ಗಜೂರಿಯವರ ಆಗ್ರಹಿಸಿದರು.

ಕೋಣನಕೇರಿ ಭಾಗದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾಡು ಪ್ರಾಣಿಗಳ ಬೇಟೆ ಆಡುವ ಕಳ್ಳಕಾಕರು ಹೆಚ್ಚಾಗಿದ್ದಾರೆ. ನೆಪಕ್ಕೆ ಮಾತ್ರ ಕಾಡು ಪ್ರಾಣಿಗಳು ಸತ್ತಿವೆ ಎಂಬುದನ್ನು ತೋರುವ ಮೂಲಕ ಬೇಟೆಯಾಡುತ್ತಿದ್ದಾರೆ. ಚಿರತೆ, ಕಾಡುಹಂದಿಗಳನ್ನು ಬೇಟೆಯಾಡುತ್ತಿದ್ದಾರೆ. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಯುವ ಕಾರ್ಯ ಕೈಗೊಳ್ಳಬೇಕು ಎಂದು ನಿವಾಸಿ ಕರೆಪ್ಪ ಶಿಗ್ಗಾವಿ ಒತ್ತಾಯಿಸಿದರು.

‘ವಾಹನಗಳು ಅತೀ ವೇಗದಿಂದ ಸಂಚರಿಸುವುದರಿಂದ ರಾತ್ರಿ ವೇಳೆ ಅಪಘಾತಕ್ಕೆ ಪ್ರಾಣಿಗಳು ಸಿಲುಕುತ್ತಿವೆ. ಈಗಾಗಲೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಗಸ್ತು ತಿರುಗಲಾಗುತ್ತಿದೆ. ಮತ್ತಷ್ಟು ಭದ್ರತೆ ಕೈಗೊಳ್ಳಲು ಕ್ರಮ ಜರುಗಿಸಲಾಗುವುದು’ ಎಂದು ದುಂಡಶಿ ವಲಯ ಅರಣ್ಯ ಅಧಿಕಾರಿ ಕೆ.ಮಲ್ಲಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.