ಎಂ.ಎಚ್. ಪಾಟೀಲ
ಹಾವೇರಿ: ‘ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ 64 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ನವೆಂಬರ್ 16ರಂದು ಮತದಾನ ನಡೆಯಲಿದೆ’ ಎಂದು ಚುನಾವಣಾಧಿಕಾರಿ ಎಂ.ಎಸ್. ಪಾಟೀಲ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2024–29ನೇ ಅವಧಿಗೆ ಚುನಾವಣೆ ನಡೆಯಲಿದೆ’ ಎಂದರು.
‘ಅಕ್ಟೋಬರ್ 28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ನವೆಂಬರ್ 7 ಕೊನೆ ದಿನವಾಗಿದೆ. ನ. 8ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸು ಪಡೆಯಲು ನ. 11ರಂದು ಅವಕಾಶವಿದೆ. ನ. 16ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನಗರದಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಣೆ ಆಗಲಿದೆ’ ಎಂದು ಅವರು ಹೇಳಿದರು.
‘ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ಶಿಗ್ಗಾವಿ, ಸವಣೂರು ತಾಲ್ಲೂಕು ಘಟಕಗಳಿಗೆ ಈಗಾಗಲೇ ಚುನಾವಣೆ ನಡೆಯುತ್ತಿದೆ. ಈಗ ಜಿಲ್ಲಾ ಘಟಕಕ್ಕೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜಿಲ್ಲೆಯ 49 ಇಲಾಖೆಗಳಲ್ಲಿ 2,499 ಮತದಾರರಿದ್ದಾರೆ.’
‘ರಾಜ್ಯ ಸಂಘಕ್ಕೆ ಪ್ರತಿ ತಿಂಗಳು ಐದು ವರ್ಷದವರೆಗೆ ಸದಸ್ಯತ್ವ ಶುಲ್ಕ ಪಾವತಿ ಮಾಡಿರುವ, ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿರುವ ಹಾಗೂ ಯಾವುದೇ ಅಮಾನತು–ಇಲಾಖೆ ವಿಚಾರಣೆಗೆ ಒಳಗಾಗದ ನೌಕರರು, ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿದ್ದಾರೆ’ ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿ ಶೇಖರ ಹಂಚಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.