ಹಾವೇರಿ: ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕಾಗಿ ಹಾಕಿರುವ ಪೆಂಡಾಲ್ ಗಾಳಿಗೆ ಕಳಚಿಬಿದ್ದು, ಕಬ್ಬಿಣದ ಕಂಬಗಳು ಬಡಿದು ವ್ಯಕ್ತಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ನಗರದ ಹೊರವಲಯದ ಅಜ್ಜಯ್ಯ ಸ್ವಾಮಿ ದೇವಸ್ಥಾನ ಬಳಿ ದೊಡ್ಡ ಮಟ್ಟದಲ್ಲಿ ಶಾಮಿಯಾನ ಹಾಗೂ ವೇದಿಕೆ ನಿರ್ಮಾಣ ಮಾಡಲಾಗಿದೆ.
ಅದರ ವೀಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕರು ಗುರುವಾರ ಭೇಟಿ ನೀಡಿದ್ದ ವೇಳೆಯಲ್ಲಿಯೇ ಗಾಳಿಗೆ ಪೆಂಡಾಲ್ ಹಾರಿ ಬಿದ್ದಿದೆ.
ಇದೇ ಸಂದರ್ಭದಲ್ಲಿ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ಸಚಿವರು ಹಾಗೂ ಶಾಸಕರ ಎದುರೇ ಪೆಂಡಾಲ್ ಕಳಚಿ ಬಿದ್ದಿದ್ದು, ಎಲ್ಲರೂ ಕೆಲ ನಿಮಿಷ ಕಕ್ಕಾಪಿಕ್ಕಿಯಾದರು ಕೆಲವರು, ಸ್ಥಳದಿಂದ ಓಡಿದರು. ಇದೇ ಸಂದರ್ಭದಲ್ಲಿಯೇ ಮಲ್ಲೇಶ ತಲೆಗೆ ಕಬ್ಬಿಣ ಬಿದ್ದು, ಗಾಯವಾಗಿ ರಕ್ತ ಸೋರುತ್ತಿತ್ತು.
ಗಾಯಗೊಂಡ ಅವರನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಊಟದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಪೆಂಡಾಲ್ ಹಾಕಿರುವುದೇ ಅವಘಡಕ್ಕೆ ಕಾರಣವೆಂಬ ಆರೋಪ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.