ADVERTISEMENT

ಹಾವೇರಿ: ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಕಲೆ, ದುರ್ನಾತ– ಜಿಲ್ಲಾಧಿಕಾರಿ ಗರಂ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:10 IST
Last Updated 20 ಅಕ್ಟೋಬರ್ 2024, 16:10 IST
ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಒಳಗಡೆ ಇರುವ ಗುಟ್ಕಾ ಉಗುಳು
ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಒಳಗಡೆ ಇರುವ ಗುಟ್ಕಾ ಉಗುಳು   

ಹಾವೇರಿ: ‘ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಿಂದು ಉಗುಳುವವರ ಸಂಖ್ಯೆ ಹೆಚ್ಚಾಗಿದೆ. ಗುಟ್ಕಾ ಕಲೆಗಳು ಹಾಗೂ ದುರ್ವಾಸನೆಯಿಂದ ಜನರು ಸ್ಥಳದಲ್ಲಿ ನಿಲ್ಲಲು ಆಗುತ್ತಿಲ್ಲ. ಇಂಥ ಸ್ಥಳಗಳ ಸ್ವಚ್ಛತೆಗೆ ಒತ್ತು ನೀಡಬೇಕು. ಗುಟ್ಕಾ ತಿಂದು ಉಗುಳುವವರಿಗೆ ದಂಡ ವಿಧಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ತಂಬಾಕು ನಿಯಂತ್ರಣದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

‘ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅತೀ ಹೆಚ್ಚು ಮಂದಿ ಗುಟ್ಕಾ ತಿಂದು ಉಗುಳುತ್ತಿರುವುದು ಕಂಡುಬರುತ್ತಿದೆ. ನಿಲ್ದಾಣದಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಿಲ್ಲುವಂತಾಗಿದೆ’ ಎಂದು ವಸ್ತುಸ್ಥಿತಿ ತೆರೆದಿಟ್ಟರು.

ADVERTISEMENT

‘ಜಿಲ್ಲೆಯಲ್ಲಿ ಬಹುತೇಕ ಸ್ಥಳಗಳಲ್ಲಿ ಗುಟ್ಕಾ, ತಂಬಾಕು ಉತ್ಪನ್ನ ಮತ್ತು ಸಿಗರೇಟ್‌ನಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಮಾರುತ್ತಿರುವ ಚಿಲ್ಲರೆ ಅಂಗಡಿಗಳ ಮೇಲೆ ದಾಳಿ ಮಾಡಬೇಕು. ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿ, ದಂಡ ವಿಧಿಸಬೇಕು. ತಂಬಾಕು ಉತ್ಪನ್ನಗಳನ್ನು ಮಾರದಂತೆ ಎಚ್ಚರಿಕೆ ನೀಡಬೇಕು’ ಎಂದು ಹೇಳಿದರು.

ಡಾ.ಸಂತೋಷ ಮಾತನಾಡಿ, ‘ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಶಾಲಾ ಕಾಲೇಜಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ಸಮುದಾಯ ಗುಂಪು ಚರ್ಚೆ, ತರಬೇತಿ ಮತ್ತು ಕಾರ್ಯಗಾರಗಳು, ಜಿಲ್ಲಾ ಮಟ್ಟದಲ್ಲಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಪೂರೈಸಲಾಗುತ್ತಿದೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.