ADVERTISEMENT

ಹಾವೇರಿ | ಹಟ್ಟಿ ಲಕ್ಕವ್ವ ಪೂಜೆಗೆ ತಯಾರಿ

ಹೋರಿ ಅಲಂಕಾರಿಕ ವಸ್ತು ಖರೀದಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:11 IST
Last Updated 21 ಅಕ್ಟೋಬರ್ 2025, 2:11 IST
ಹಾವೇರಿ ಮಾರುಕಟ್ಟೆಯಲ್ಲಿ ಜನರು ಸೋಮವಾರ ಬಾಳೆ ಗಿಡಗಳನ್ನು ಖರೀದಿಸಿದರು
ಹಾವೇರಿ ಮಾರುಕಟ್ಟೆಯಲ್ಲಿ ಜನರು ಸೋಮವಾರ ಬಾಳೆ ಗಿಡಗಳನ್ನು ಖರೀದಿಸಿದರು   

ಹಾವೇರಿ: ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಮೊದಲ ದಿನವಾದ ನರಕ ಚತುರ್ದಶಿಯನ್ನು ಜನರು ಸೋಮವಾರ ಆಚರಿಸಿದರು. ನೀರು ತುಂಬುವ ಹಬ್ಬವೆಂದು ಪ್ರಸಿದ್ಧಿ ಪಡೆದ ಮೊದಲ ದಿನದಂದು ಜನರು, ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದರು.

ಸೋಮವಾರ ಬೆಳಿಗ್ಗೆಯಿಂದಲೇ ಜನರು ಸಂಪ್ರದಾಯದ ಪ್ರಕಾರ ಹಬ್ಬದ ಆಚರಣೆ ಶುರು ಮಾಡಿದರು. ಸ್ನಾನದ ಪಾತ್ರೆಗಳ ಸುತ್ತಲೂ ಮಾಲಿಂಗ ಬಳ್ಳಿ ಕಟ್ಟಿದ್ದ ಜನರು, ಪಾತ್ರೆಯೊಳಗಿನ ನೀರಿನ ಸ್ನಾನ ಮಾಡಿದರು. ನಂತರ, ಗ್ರಾಮೀಣ ಪ್ರದೇಶದ ಜನರು ಹಿಂಡಲ ಇಂಚಿಕಾಯಿಯನ್ನು ತೊಳೆದು ಸ್ನಾನ ಮುಗಿಸಿದರು.

ಮಂಗಳವಾರ ಹಾಗೂ ಬುಧವಾರವೂ ಹಬ್ಬದ ಆಚರಣೆ ಇರಲಿದೆ. ಮಂಗಳವಾರ ಅಮವಾಸ್ಯೆ ಇರುವುದರಿಂದ, ಹಲವು ಕಡೆಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಬುಧವಾರ ಎಲ್ಲ ಕಡೆಯೂ ಲಕ್ಷ್ಮಿ ಪೂಜೆ ಹಾಗೂ ಹಟ್ಟಿ ಲಕ್ಕಮ್ಮ ಪೂಜೆ ನಡೆಯಲಿದೆ. ಹಟ್ಟಿ ಲಕ್ಕವ್ವ ಪೂಜೆಗೆ ಅಗತ್ಯವಿರುವ ವಸ್ತುಗಳನ್ನು ಜನರು, ಸೋಮವಾರ ಮಾರುಕಟ್ಟೆಯಲ್ಲಿ ಖರೀದಿಸಿದರು.

ADVERTISEMENT

ನಗರದ ಗಾಂಧಿ ಸರ್ಕಲ್, ಎಂ.ಜಿ. ರಸ್ತೆ, ಜೆ.ಪಿ. ಸರ್ಕಲ್ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೋಮವಾರ ಕಂಡುಬಂದರು. ಹಬ್ಬಕ್ಕೆ ಅಗತ್ಯವಿರುವ ದಿನಸಿ, ಹೂವು–ಹಣ್ಣು, ತಳೀರು ತೋರಣ, ಬಾಳೆ ದಿಂಡು, ಕಬ್ಬು ಹಾಗೂ ಇತರೆ ವಸ್ತುಗಳನ್ನು ಖರೀದಿಸಿದರು.

ತರಹೇವಾರಿ ಆಕಾಶ ಬುಟ್ಟಿಗಳು, ಹಣತೆಗಳು, ವಿದ್ಯುತ್ ಅಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳನ್ನು ಕುತೂಹಲದಿಂದ ವೀಕ್ಷಿಸಿದ ಜನರು, ತಮ್ಮಿಷ್ಟದ ಆಕಾಶ ಬುಟ್ಟಿಯನ್ನು ಕೊಂಡುಕೊಂಡರು.

ಜಿಲ್ಲೆಯ ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಮಾರುಕಟ್ಟೆಯಲ್ಲೂ ಖರೀದಿ ಜೋರಾಗಿತ್ತು. ದೀಪಾವಳಿ ಹಬ್ಬದಂದು ದೀಪಗಳನ್ನು ಹಚ್ಚುವುದು ವಾಡಿಕೆ. ತರಹೇವಾರಿ ದೀಪಗಳು ಮಾರುಕಟ್ಟೆಗೆ ಬಂದಿದ್ದು, ದೀಪದ ಹಣತೆಗಳನ್ನು ಜನರು ರೀದಿಸಿದರು.

ಸಗಣಿಗೆ ಬೇಡಿಕೆ: ಶಹರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಗಣಿಯನ್ನು ದೇವರೆಂದು ಪೂಜಿಸಿ ಹಟ್ಟಿ ಲಕ್ಕವ್ವ ಪೂಜೆಯನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ಹೆಚ್ಚು ಇರುವುದರಿಂದ, ಸಗಣಿ ಲಭ್ಯವಾಗುತ್ತದೆ. ಆದರೆ, ಶಹರಗಳಲ್ಲಿ ಸಗಣಿ ದೊರೆಯುವುದು ಕಷ್ಟ. ಹೀಗಾಗಿ, ಜನರು ಸಗಣಿಗಾಗಿ ಸೋಮವಾರದಿಂದಲೇ ಹಲವು ಕಡೆಗಳಲ್ಲಿ ಅಲೆದಾಡಿದರು.

ಹಾವೇರಿಯ ಜಾನುವಾರು ಮಾರುಕಟ್ಟೆಯಲ್ಲಿ ಜನರು, ಸಗಣಿಗಾಗಿ ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಸೋಮವಾರ ಮಾರುಕಟ್ಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಜಾನುವಾರುಗಳಿದ್ದವು. ಜಾನುವಾರುಗಳು ಸಗಣಿ ಹಾಕುವವರೆಗೂ ಕಾದ ಜನರು, ಹಾಕಿದ ನಂತರ ಸಗಣಿ ಸಂಗ್ರಹಿಸಿಕೊಂಡು ಹೋದರು. ತಡರಾತ್ರಿಯವರೆಗೂ ಜನರು ಸಗಣಿ ಸಂಗ್ರಹಿಸಿ ಕೊಂಡೊಯ್ದರು.

ಹಾವೇರಿ ಮಾರುಕಟ್ಟೆಯಲ್ಲಿ ಜನರು ಸೋಮವಾರ ಮಣ್ಣಿನ ಹಣತೆಗಳನ್ನು ಖರೀದಿಸಿದರು
ಹಾವೇರಿ ಮಾರುಕಟ್ಟೆಯಲ್ಲಿ ರೈತರೊಬ್ಬರು ತಮ್ಮ ಹೋರಿಗಳ ಅಲಂಕಾರಕ್ಕಾಗಿ ಸೋಮವಾರ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜನರು ಸೋಮವಾರ ಪಟಾಕಿ ಖರೀದಿಸಿದರು

ಕೊಬ್ಬರಿ ಹೋರಿ ದೀಪಾವಳಿ ಹಬ್ಬವೆಂದರೆ ಹಾವೇರಿ ಜಿಲ್ಲೆಯಲ್ಲಿ ಹಟ್ಟಿಹಬ್ಬವೆಂದು ಆಚರಿಸುತ್ತಾರೆ. ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆಯು ಜೋರಾಗಿರುತ್ತದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬುಧವಾರ ಹೋರಿ ಓಡಿಸುವ ಮೂಲಕ ಹಬ್ಬದ ಆಚರಣೆ ಮಾಡಲಾಗುತ್ತದೆ. ಹೋರಿಗಳ ಅಲಂಕಾರಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಪಟಾಕಿ ಖರೀದಿ ಜೋರು: ಜಿಲ್ಲೆಯ ಹಲವು ಕಡೆಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ದೀಪಾವಳಿಯಂದು ಪಟಾಕಿ ಹಾರಿಸಲು ಉತ್ಸುಹಕರಾಗಿರುವ ಜನರು ಮಳಿಗೆಗಳಲ್ಲಿ ಪಟಾಕಿ ಖರೀದಿಸಿದರು. ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟದ ಮಳಿಗೆಗಳನ್ನು ಹಾಕಲಾಗಿದೆ. ಮಳಿಗೆಗೆ ಭೇಟಿ ನೀಡಿದ ಜನರು ಪಟಾಕಿ ಖರೀದಿಸಿ ಕೊಂಡೊಯ್ದರು. ಹಲವರು ಮನೆ ಹಾಗೂ ಅಂಗಡಿಗಳ ಎದುರು ಸೋಮವಾರ ರಾತ್ರಿ ಪಟಾಕಿ ಹಾರಿಸಿ ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.