
ಹಾವೇರಿ: ಇಲ್ಲಿಯ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ನಿರ್ಮಿಸುತ್ತಿರುವ ಜಿ+1 ಮನೆಗಳ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಗುಡಿಸಲಿನಲ್ಲಿ ವಾಸವಿರುವ ಸುಡುಗಾಡು ಸಿದ್ಧರ ಕುಟುಂಬಗಳು ಸ್ವಂತ ಸೂರು ಸಿಗದೇ ಕಂಗಾಲಾಗಿದ್ದಾರೆ.
ಬಯಲು ಪ್ರದೇಶದ ಖಾಸಗಿ ಜಾಗಗಳಲ್ಲಿ ಜೋಪಡಿಗಳಲ್ಲಿ ವಾಸವಿರುವ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಜಿ+1 ಮನೆ ನೀಡಲು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಈಗಾಗಲೇ ₹33 ಲಕ್ಷ ನೀಡಿದೆ. ಆದರೆ, ನಿಗಮದಿಂದ ಬಂದ ಹಣವನ್ನು ಪಡೆದುಕೊಂಡಿರುವ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇದುವರೆಗೂ ಮನೆಗಳನ್ನು ಹಸ್ತಾಂತರ ಮಾಡಿಲ್ಲ.
ಶಾಂತಿನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ಜಿ+1 ಮಾದರಿಯಲ್ಲಿ 480 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಶುರುವಾದಾಗಿನಿಂದ ನಿಧಾನಗತಿಯಲ್ಲಿ ಸಾಗಿದೆ. ಗುತ್ತಿಗೆದಾರರ ಬದಲಾವಣೆಯೂ ಆಗಿದೆ. ಕಳಪೆ ಕಾಮಗಾರಿ ಆರೋಪದಡಿ ಲೋಕಾಯುಕ್ತರ ತನಿಖೆಯೂ ನಡೆಯುತ್ತಿದೆ. ಇದರ ನಡುವೆಯೇ, ಅನಕ್ಷರಸ್ಥರಾಗಿರುವ ಸುಡುಗಾಡು ಸಿದ್ಧರ ಕುಟುಂಬಗಳು ತಮಗೆ ಮನೆಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿಯೇ ದಿನ ದೂಡುತ್ತಿದ್ದಾರೆ.
₹33 ಲಕ್ಷ ಕೊಟ್ಟರೂ ಮನೆ ನೀಡದ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡೆಯಿಂದ ಬೇಸತ್ತಿರುವ ಸುಡುಗಾಡು ಸಿದ್ಧರ ಕುಟುಂಬದವರು, ‘ನಮ್ಮ ಹೆಸರಿನಲ್ಲಿ ಬಂದಿರುವ ಹಣವನ್ನು ಇಟ್ಟುಕೊಂಡು ಏನು ಮಾಡುತ್ತೀರಾ. ಮನೆಗಳಿಗಾಗಿ ವರ್ಷಗಟ್ಟಲೇ ಕಾಯುತ್ತಿದ್ದೇವೆ. ಮನೆಗಳು ಸಿಗದೇ, ಮಕ್ಕಳು ಹಾಗೂ ವೃದ್ಧರ ಜೊತೆ ಜೋಪಡಿಯಲ್ಲಿ ಬದುಕುತ್ತಿದ್ದೇವೆ. ಕೂಡಲೇ ನಮಗೆ ಮನೆಗಳನ್ನು ಹಸ್ತಾಂತರ ಮಾಡಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.
ಫಲಾನುಭವಿಗಳ ಪಾಲು ತುಂಬಿದ ನಿಗಮ: ಶಾಂತಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿ ಜೋಪಡಿ ನಿರ್ಮಿಸಿಕೊಂಡು ಸುಮಾರು ವರ್ಷಗಳಿಂದ ವಾಸವಿದ್ದ ಸುಡುಗಾಡು ಸಿದ್ಧರ 33 ಕುಟುಂಬಗಳನ್ನು, ಪುನರ್ ವಸತಿ ಭರವಸೆ ನೀಡಿ ಎರಡೂವರೆ ವರ್ಷದ ಹಿಂದೆ ತೆರವು ಮಾಡಲಾಗಿತ್ತು. ಅದೇ ಸ್ಥಳದಲ್ಲಿ ಜಿ+1 ಮನೆಗಳ ನಿರ್ಮಾಣ ಕೆಲಸ ಆರಂಭವಾಗಿದೆ.
ವಸತಿ ಸಮುಚ್ಚಯ ರೀತಿಯಲ್ಲಿ ಜಿ+1 ಮಾದರಿಯಲ್ಲಿ 430 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಮೊದಲ ಆದ್ಯತೆಯಾಗಿ 33 ಮನೆಗಳನ್ನು ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಸುಡುಗಾಡು ಸಿದ್ಧರ ಕುಟುಂಬದವರಿಂದ ತಲಾ ₹ 1 ಲಕ್ಷ ನಗದು ಹಾಗೂ ಬ್ಯಾಂಕ್ ಸಾಲದಿಂದ ₹ 2.20 ಲಕ್ಷ ಸಂಗ್ರಹಿಸಲು ಯೋಚಿಸಲಾಗಿತ್ತು. ಆದರೆ, ತಮ್ಮ ಬಳಿ ₹ 1 ಲಕ್ಷ ಇಲ್ಲವೆಂದು ಫಲಾನುಭವಿಗಳು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಫಲಾನುಭವಿಗಳ ಪರವಾಗಿ ₹ 33 ಲಕ್ಷವನ್ನು ಚೆಕ್ ಮೂಲಕ ಈಗಾಗಲೇ ಹಸ್ತಾಂತರಿಸಿದೆ.
‘ನಾವು ದುಡಿಮೆ ನಂಬಿ ಬದುಕುವ ಜನ. ಹಣ ಕೂಡಿ ಇಡುವಷ್ಟು ಶ್ರೀಮಂತರಲ್ಲ. ನಮ್ಮ ಬಳಿ ₹ 1 ಲಕ್ಷ ಇರಲಿಲ್ಲ. ನಿಗಮದವರು ನಮ್ಮ ಪರವಾಗಿ ಹಣ ಕೊಟ್ಟಿದ್ದಾರೆ. ಆದರೆ, ಹಣ ಕೊಟ್ಟರೂ ಮನೆಗಳ ಹಸ್ತಾಂತರವಾಗದಿರುವುದು ನೋವು ತರಿಸಿದೆ. ನಾವು ಇಂದಿಗೂ ಜೋಪಡಿಯಲ್ಲಿಯೇ ಉಳಿದುಕೊಳ್ಳುವಂತಾಗಿದೆ’ ಎಂದು ಫಲಾನುಭವಿ ಗಂಗಾಧರ ಬಾದಗಿ ಅಳಲು ತೋಡಿಕೊಂಡರು.
ಜಾಗ ಖಾಲಿ ಮಾಡಲು ಒತ್ತಾಯ: ಸರ್ಕಾರಿ ಜಾಗದಿಂದ ತೆರವು ಮಾಡುತ್ತಿದ್ದಂತೆ ನಾಗೇಂದ್ರಮಟ್ಟಿಯಲ್ಲಿಯೇ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಸೀರೆ–ತಗಡಿನಿಂದ ಜೋಪಡಿ ನಿರ್ಮಿಸಿಕೊಂಡು ಸುಡುಗಾಡು ಸಿದ್ಧರು ವಾಸವಿದ್ದಾರೆ. ಈಗ ಜಾಗ ಖಾಲಿ ಮಾಡುವಂತೆ ಮಾಲೀಕರು ಒತ್ತಾಯಿಸುತ್ತಿದ್ದು, ಸುಡುಗಾಡು ಸಿದ್ಧರ ಬದುಕು ಅತಂತ್ರವಾಗಿದೆ.
‘ಅಂದಿನ ಶಾಸಕ ಬಸವರಾಜ ಶಿವಣ್ಣನವರ ಮಾತಿನಂತೆ ಸರ್ಕಾರಿ ಜಾಗದಲ್ಲಿ ವಾಸವಿದ್ದೆವು. ಅದೇ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಹೇಳಿದ್ದರಿಂದ, ಅಲ್ಲಿಂದ ಹೊರಬಂದು ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಜೋಪಡಿಯಲ್ಲಿ ವಾಸವಿದ್ದೇವೆ. ಇದುವರೆಗೂ ನಮಗೆ ಜಿ+1 ಮನೆ ಸಿಕ್ಕಿಲ್ಲ. ಜಾಗ ಖಾಲಿ ಮಾಡುವಂತೆ ಮಾಲೀಕರು ಹೇಳುತ್ತಿದ್ದಾರೆ. ನಾವು ಎಲ್ಲಿಗೆ ಹೋಗಬೇಕು’ ಎಂದು ಫಲಾನುಭವಿಗಳು ಅಳಲು ತೋಡಿಕೊಂಡರು.
ಮಳೆಗಾಲಕ್ಕೂ ಮುನ್ನ ಮನೆ ನೀಡಿ: ‘ನಾವೆಲ್ಲ ಬಯಲು ಪ್ರದೇಶದಲ್ಲಿ ಜೋಪಡಿಯಲ್ಲಿದ್ದೇವೆ. ಮಳೆಗಾಲದ ಸಂದರ್ಭದಲ್ಲಿ ಜೋಪಡಿಯೊಳಗೆ ನೀರು ನುಗ್ಗುತ್ತದೆ. ಹಾವು ಚೇಳು ಎಲ್ಲವೂ ಜೋಪಡಿಯೊಳಗೆ ಬರುತ್ತವೆ. ಕಳೆದ ಮಳೆಗಾಲದಲ್ಲಿ ಸಾಕಷ್ಟು ಯಾತನೆ ಅನುಭವಿಸುತ್ತಿದ್ದೇವೆ. ಈ ಬಾರಿ ಮಳೆಗಾಲಕ್ಕೂ ಮುನ್ನವೇ ನಮಗೆ ಮನೆ ನೀಡಬೇಕು. ಇಲ್ಲದಿದ್ದರೆ ಮತ್ತೆ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಫಲಾನುಭವಿಗಳು ಹೇಳಿದರು.
‘ಮೂಲ ಸೌಕರ್ಯ ಕಲ್ಪಿಸುವ ಕೆಲಸ’ : ‘ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ಜಿ+1 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಕೆಲ ಭಾಗದ ಮನೆಗಳನ್ನು ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿ ಕೊಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ರಸ್ತೆ ಶೌಚಾಲಯ ಕುಡಿಯುವ ನೀರು ಸೇರಿ ಇತರೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ. ಅದು ಮುಗಿಯುತ್ತಿದ್ದಂತೆ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಮೊದಲ ಆದ್ಯತೆಯಾಗಿ ಮನೆಗಳನ್ನು ಹಸ್ತಾಂತರಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಚ್. ಕಾಂತರಾಜು ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಸುಡುಗಾಡು ಸಿದ್ಧರ ಕುಟುಂಬದವರು ವೈಯಕ್ತಿಕವಾಗಿ ಸರ್ಕಾರದ ನಿಗದಿಪಡಿಸಿದ್ದ ಹಣ ಭರಿಸಬೇಕಿತ್ತು. ಅವರ ಪರವಾಗಿ ನಿಗಮವು ಹಣ ನೀಡಿದೆ. ಈ ಹಣವನ್ನು ನಿಯಮಾವಳಿ ಪ್ರಕಾರ ನಾವು ಪುನಃ ಸರ್ಕಾರಕ್ಕೆ ಪಾವತಿ ಮಾಡುತ್ತೇವೆ. ತ್ವರಿತವಾಗಿ ಮನೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.