ADVERTISEMENT

‘ದುಶ್ಚಟ ಭಿಕ್ಷೆ ಬೇಡಿ, ಸದ್ಗುಣ ಧೀಕ್ಷೆ’

ಹುಕ್ಕೇರಿಮಠ ಜಾತ್ರಾ ಮಹೋತ್ಸವ: ಜನಜಾಗೃತಿ ಪಾದಯಾತ್ರೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:39 IST
Last Updated 23 ಡಿಸೆಂಬರ್ 2025, 2:39 IST
ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯಾನಗರ ಪಶ್ಚಿಮ ಪ್ರದೇಶದ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪಾದಯಾತ್ರೆ ಸಮಾರೋಪ ಸಮಾರಂಭ’ದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು
ಹಾವೇರಿ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯಾನಗರ ಪಶ್ಚಿಮ ಪ್ರದೇಶದ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪಾದಯಾತ್ರೆ ಸಮಾರೋಪ ಸಮಾರಂಭ’ದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು   

ಹಾವೇರಿ: ‘ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಯವರು ಜನಜಾಗೃತಿ ಪಾದಯಾತ್ರೆ ಮೂಲಕ ಭಕ್ತದ ಮನದಲ್ಲಿ ಸದ್ಭಾವನೆ ಮೂಡಿಸಿದ್ದಾರೆ. ಜನರಿಂದ ದುಶ್ಚಟಗಳ ಭಿಕ್ಷೆ ಬೇಡಿ, ಅವರಿಗೆ ಸದ್ಗುಣಗಳ ಧೀಕ್ಷೆ ನೀಡಿದ್ದಾರೆ’ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಅಂಗವಾಗಿ ವಿದ್ಯಾನಗರ ಪಶ್ಚಿಮ ಪ್ರದೇಶದ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಪಾದಯಾತ್ರೆ ಸಮಾರೋಪ ಸಮಾರಂಭ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಬಡವ- ಶ್ರೀಮಂತ, ಮೇಲ್ವರ್ಗ– ಕೆಳವರ್ಗ ಎಂಬ ತಾರತಮ್ಯವಿಲ್ಲದೇ ಸ್ವಾಮೀಜಿಯವರು ಎಲ್ಲರ ದುರ್ಗುಣಗಳನ್ನು ಅಳಿಸಿ ಸದ್ಗುಣ ಬೆಳೆಸಿದ್ದಾರೆ. ನಮ್ಮ ನಾಡಿನ ಯಾವುದೇ ಭಾಗದಲ್ಲಿ ಹೋದರೂ ಸದಾಶಿವ ಸ್ವಾಮೀಜಿ ಭಕ್ತಿಯ ಪ್ರವಾಹ ಸೃಷ್ಟಿಸುವವರು. ಅವರ ಗುಣವೇ ಶಿವಸ್ವರೂಪಿ. ತಮ್ಮ ಪ್ರೇರಕ ಶಕ್ತಿಯ ಪರಿಣಾಮ, ಭಕ್ತರ ಮನೆ, ಮನಗಳಿಗೆ ತಲುಪಿದ್ದಾರೆ’ ಎಂದರು.

ADVERTISEMENT

‘ನಮ್ಮ ಪಾಪಗಳನ್ನು ನಾವೇ ಕಳೆದುಕೊಳ್ಳಬೇಕು. ಆದರೆ, ಕೆಟ್ಟ ಹವ್ಯಾಸಗಳಿಗೆ ಅಂಟಿಕೊಂಡಿರುವ ಜನರನ್ನು ದುಶ್ಚಟ ಮುಕ್ತಗೊಳಿಸಲು ಸ್ವಾಮೀಜಿಯವರು ಪಾದಯಾತ್ರೆ ನಡೆಸಿದ್ದಾರೆ. ಈ ಐತಿಹಾಸಿಕ ಪಾದಯಾತ್ರೆಯಲ್ಲಿ ತಮ್ಮ ಆಪ್ತ ಗೆಳೆಯರನ್ನು ಮತ್ತು ಶಿಷ್ಯ ಸಮೂಹವನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಶಿವಬಸವ ಹಾಗೂ ಶಿವಲಿಂಗ ಸ್ವಾಮೀಜಿಯವರ ಕೃಪೆಯಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘63 ಮಠಗಳಿರುವ ಹಾವೇರಿಗೆ ಮರಿ ಕಲ್ಯಾಣ ಎಂಬ ಪ್ರತೀತಿ ಇದೆ. ಸೌಹಾರ್ದ ಹಾಗೂ ಸದ್ಭಾವದಿಂದ ಕೂಡಿದ ಈ ಪಾದಯಾತ್ರೆಯ ಉದ್ದೇಶವೇ ಮನಸ್ಸುಗಳನ್ನು ಕೂಡಿಸುವುದು. ಜೊತೆಗೆ, ದುಶ್ಚಟಗಳಿಂದ ಜನರನ್ನು ದೂರ ಮಾಡಿ ಸಾಮಾಜಿಕ ಮನ್ನಣೆ ಪಡೆಯುವಂತೆ ಮಾಡುವುದು. ಭಾವನಾತ್ಮಕ ಬೆಸುಗೆ ಬೆಸೆದ ಪಾದಯಾತ್ರೆಯು ಐತಿಹಾಸಿಕ ಗಳಿಗೆಗೆ ಸಾಕ್ಷಿಯಾಗಿದೆ’ ಎಂದರು.

ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ‘ಒಲೆ ಮೇಲೆ ಮಾಡಿದ ಅಡುಗೆ ನಾಲ್ಕು ತಾಸಿನವರೆಗೆ ಇರುತ್ತದೆ. ತಲೆ ಮೇಲೆ ಮಾಡಿದ ಅಡುಗೆ ಜೀವನಪೂರ್ತಿ ಇರುತ್ತದೆ ಎಂಬ ಮಾತಿದೆ. ಅಂತೆಯೇ, ಇದೇ ತಿಂಗಳು 27ರಂದು ನಡೆಯುವ ವಚನ ಪಠಣದಲ್ಲಿ 51 ಸಾವಿರ ಜನರು ಏಕಕಾಲಕ್ಕೆ ಹುಕ್ಕೇರಿಮಠದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಬರಲಿದ್ಸಾರೆ. ತಾವೆಲ್ಲರೂ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದರು.

ನ. 6ರಿಂದ ಶುರುವಾಗಿದ್ದ ಪಾದಯಾತ್ರೆ: ‘ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ನ. 6ರಿಂದ ಬ್ಯಾಡಗಿ ತಾಲ್ಲೂಕಿನ ಮಲ್ಲೂರು ಗ್ರಾಮದಿಂದ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ನಂತರ, 75 ಗ್ರಾಮಗಳಲ್ಲಿ ಪಾದಯಾತ್ರೆ ಜರುಗಿತು. ಅಂತಿಮವಾಗಿ ಹಾವೇರಿ ನಗರದಲ್ಲೂ ಪಾದಯಾತ್ರೆ ಸಾಗಿತು. ವಿದ್ಯಾನಗರ ಪಶ್ಚಿಮ ಪ್ರದೇಶದಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಿ, ಉದ್ಯಾನದಲ್ಲಿ ಆಲದ ಹಾಗೂ ಬೇವಿನಮರಗಳ ಸಸಿ ನೆಡಲಾಯಿತು.

‘ಚಟ’ ಹೋಮ ನಾಳೆ

‘ದುಶ್ಚಟಮುಕ್ತ ಸಮಾಜಕ್ಕಾಗಿ ಜನಜಾಗೃತಿ ಪಾದಯಾತ್ರೆ ನಡೆಸಲಾಯಿತು. ಭಕ್ತರೂ ಅಭೂತಪೂರ್ವ ಬೆಂಬಲ ನೀಡಿದರು. ಪಾದಯಾತ್ರೆ ಸಮಾರೋಪದ ನಂತರ ಡಿ. 24ರಂದು ಮಠದ ಎದುರು ‘ಚಟ’ ಹೋಮ ಮಾಡಲಾಗುವುದು’ ಎಂದು ಸದಾಶಿವ ಸ್ವಾಮೀಜಿ ಹೇಳಿದರು. ‘ಬೀಡಿ ಸಿಗರೇಟ್ ಹಾಗೂ ಮದ್ಯವನ್ನು ಸುಡುವ ಮೂಲಕ ಚಟ ಹೋಮ ಮಾಡಲಾಗುವುದು. ದುರ್ಗುಣ ಸುಟ್ಟು ಸದ್ಗುಣ ಬೆಳೆಸುವುದು ಈ ಹೋಮದ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.