ADVERTISEMENT

ಹಾವೇರಿ: ತವರು ಮನೆ ವಿಚಾರಕ್ಕೆ ಪತ್ನಿ ಕೊಲೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 2:37 IST
Last Updated 16 ಜನವರಿ 2026, 2:37 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮುದೂರು ಗ್ರಾಮದಲ್ಲಿ ಗೌಸಬಿ ಮಕ್ಬುಲ್ ಅಹ್ಮದ್ ಹಿರೇಹಳ್ಳಿ (44) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಅವರ ಪತಿ ಮಕ್ಬುಲ್ ಅಹ್ಮದ್ ಮೌಲಾಸಾಬ್ ಹಿರೇಹಳ್ಳಿ (45) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಗುರುವಾರ ಬೆಳಿಗ್ಗೆ ನಡೆದ ಗಲಾಟೆ ಬಗ್ಗೆ ಗೌಸಬಿ ಅವರ ಸಹೋದರಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಮಕ್ಬುಲ್ ಅವರನ್ನು ಬಂಧಿಸಲಾಗಿದೆ’ ಎಂದು ಹಾನಗಲ್ ಠಾಣೆ ಪೊಲೀಸರು ಹೇಳಿದರು.

‘ತಿಳವಳ್ಳಿ ಗ್ರಾಮದ ಗೌಸಬಿ ಹಾಗೂ ಮಕ್ಬುಲ್ ಅಹ್ಮದ್ ಅವರು ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಗೌಸಬಿ ಅವರು ಪದೇ ಪದೇ ತವರು ಮನೆಗೆ ಹೋಗುತ್ತಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಗುರುವಾರವೂ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ ಮಕ್ಬುಲ್, ಪತ್ನಿ ಗೌಸಬಿ ಅವರ ಕಪಾಳಕ್ಕೆ ಹೊಡೆದಿದ್ದ’ ಎಂದರು.

‘ಪ್ರಜ್ಞೆ ತಪ್ಪಿ ಬಿದ್ದಿದ್ದ ಗೌಸಬಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ್ದ ವೈದ್ಯರು, ಗೌಸುಬಿ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.