ಹಾವೇರಿ: ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಲು ಜಿಲ್ಲಾಡಳಿತ ತಯಾರಿ ಮಾಡುತ್ತಿದೆ. ಮಳೆಯಿಂದಾಗಿ ಮೈದಾನದ ಬಹುಪಾಲು ಜಾಗದಲ್ಲಿ ನೀರು ನಿಂತುಕೊಂಡು ಕೆಸರು ಹೆಚ್ಚಾಗಿದೆ. ಈ ಜಾಗಕ್ಕೆ ಬುಧವಾರ ಜಲ್ಲಿಕಲ್ಲು ಹಾಕುವ ಕೆಲಸ ನಡೆಯಿತು.
‘ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿ ಮಾಡಬೇಕು’ ಎಂದು ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಯೋಜನೆಯೂ ನನೆಗುದಿಗೆ ಬಿದ್ದಿದೆ.
ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಜಿಲ್ಲಾ ಮಟ್ಟದ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಇತರೆ ಕ್ರೀಡಾಕೂಟಗಳನ್ನು ಮೈದಾನದಲ್ಲಿ ಆಯೋಜಿಸಲಾಗುತ್ತದೆ. ಆದರೆ, ಮೈದಾನದ ಅಭಿವೃದ್ಧಿಗೆ ಮಾತ್ರ ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ.
ಧ್ವಜಾರೋಹಣ ನೆಪದಲ್ಲಿ ತಾತ್ಕಾಲಿಕವಾಗಿ ಮೈದಾನಕ್ಕೆ ಜಲ್ಲಿಕಲ್ಲು ಹಾಕುವ ಅಧಿಕಾರಿಗಳು, ಮರುದಿನ ಮೈದಾನ ಹೇಗಿದೆ ಎಂಬುದನ್ನು ನೋಡುವುದಿಲ್ಲ. ವಾಯುವಿಹಾರಿಗಳು, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು, ಮೈದಾನದಲ್ಲಿರುವ ಕೆಸರಿನಲ್ಲಿ ವಿಹಾರ ಮಾಡುವ ಸ್ಥಿತಿ ಬಂದಿದೆ.
ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲ. ಜಿಲ್ಲಾ ಕ್ರೀಡಾಂಗಣವೂ ಸೌಲಭ್ಯಗಳಿಂದ ವಂಚಿತವಾಗಿದೆ. ಸುಸಜ್ಜಿತ ಶೌಚಾಲಯವಿಲ್ಲ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಜೊತೆಗೆ, ಕ್ರೀಡಾಪಟುಗಳ ಅಭ್ಯಾಸಕ್ಕೂ ಅಗತ್ಯ ಪರಿಕರಗಳಿಲ್ಲವೆಂದು ಜನರು ದೂರುತ್ತಿದ್ದಾರೆ.
ರಕ್ಷಣಾ ಪಡೆಗಳ ಅಭ್ಯಾಸ: ಮಳೆಯಿಂದಾಗಿ ಹಾಳಾದ ಮೈದಾನದಲ್ಲಿಯೇ ರಕ್ಷಣಾ ಪಡೆಗಳು ಬುಧವಾರ ಪಥಸಂಚಲನದ ಅಭ್ಯಾಸ ನಡೆಸಿದವು. ಪೊಲೀಸರು, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್‌ಸಿಸಿ ಹಾಗೂ ಇತರ ಪಡೆಗಳು ಅಭ್ಯಾಸದಲ್ಲಿದ್ದವು.
ಮೈದಾನದ ಬಹುಪಾಲು ಭಾಗದಲ್ಲಿ ನೀರು ನಿಂತು ಕೆಸರು ಹೆಚ್ಚಾಗಿತ್ತು. ಕೆಲ ಪಡೆಯ ಸದಸ್ಯರು, ಮೈದಾನದ ಮೂಲೆ ಸ್ಥಳದಲ್ಲಿ ಅಭ್ಯಾಸ ನಡೆಸಿದರು. ವಿದ್ಯಾರ್ಥಿಗಳು ಕೆಸರಿನಲ್ಲೇ ಪಥಸಂಚಲನದ ತಯಾರಿ ಮಾಡಿದರು.
ನೃತ್ಯ ಅಭ್ಯಾಸಕ್ಕೆ ಕೆಸರು ಅಡ್ಡಿ: ಕ್ರೀಡಾಂಗಣದ ಮುಖ್ಯವೇದಿಕೆಯ ಎದುರಿನ ಸ್ಥಳದಲ್ಲಿಯೇ ನೀರು ನಿಂತು ಕೆಸರು ಹೆಚ್ಚಾಗಿದೆ. ಈ ಸ್ಥಳದಲ್ಲಿ ನೃತ್ಯ ಅಭ್ಯಾಸ ಮಾಡಲು ಅಸಾಧ್ಯವೆಂದು ಶಿಕ್ಷಕರು ಹೇಳಿದರು. ಹೀಗಾಗಿ, ಮಕ್ಕಳು ಬುಧವಾರ ನೃತ್ಯದ ಅಭ್ಯಾಸ ಮಾಡಲಿಲ್ಲ.
‘ಬುಧವಾರ ಇಡೀ ಮೈದಾನಕ್ಕೆ ಜಲ್ಲಿಕಲ್ಲು ಹಾಕಲಾಗುವುದು. ಇದರಿಂದಾಗಿ ಕೆಸರು ಇರುವುದಿಲ್ಲ. ಬಳಿಕ ಅಭ್ಯಾಸ ಮಾಡಿ’ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ಶಿಕ್ಷಕರಿಗೆ ಹೇಳಿದರು. ಹೀಗಾಗಿ, ನೃತ್ಯ ಅಭ್ಯಾಸಕ್ಕೆ ಬಂದ ಮಕ್ಕಳು ವಾಪಸು ಹೋದರು. ಗುರುವಾರ ನೃತ್ಯ ಅಭ್ಯಾಸ ನಡೆಸುವುದಾಗಿ ಹೇಳಿದರು.
‘ಸಚಿವ ಸಂಸದ ಶಾಸಕರ ವಿರುದ್ಧ ಆಕ್ರೋಶ’
‘ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಶಾಸಕರು ಕ್ರೀಡಾಂಗಣದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ’ ಎಂದು ವಾಯುವಿಹಾರಿಗಳು ಆಕ್ರೋಶ ಹೊರಹಾಕಿದ್ದಾರೆ. ‘ಕ್ರೀಡಾಂಗಣ ಹೇಗಿದೆ ? ಅಭಿವೃದ್ಧಿಗೆ ಏನು ಮಾಡಬೇಕು ? ಕ್ರೀಡಾಪಟುಗಳ ಅಭ್ಯಾಸ ಹೇಗೆ ನಡೆದಿದೆ ? ಕ್ರೀಡಾಕ್ಷೇತ್ರದಲ್ಲಿ ಸಾಧಕರನ್ನು ಹೇಗೆ ಸಿದ್ಧಪಡಿಸುವುದು ? ಎಂಬಿತ್ಯಾದಿ ಆಲೋಚನೆಗಳನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಯಾರಾದರೂ ಕ್ರೀಡೆಯಲ್ಲಿ ಗೆದ್ದು ಬಂದರೆ ಮಾತ್ರ ಪ್ರಚಾರಕ್ಕಾಗಿ ಅವರನ್ನು ಸನ್ಮಾನಿಸುವ ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.