ADVERTISEMENT

ಜನರಿಗೆ ಸಮರ್ಪಕ ಮಾಹಿತಿ ನೀಡಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:27 IST
Last Updated 12 ಜೂನ್ 2020, 12:27 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು    

ಹಾವೇರಿ: ವಿವಿಧ ಮಾಹಿತಿ ಕೇಳಿ ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಿ. ಜನರಿಗೆ ಸಮರ್ಪಕ ಮಾಹಿತಿ ನೀಡಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮೇ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ಸಮಸ್ಯೆಗಳನ್ನು ಹೊತ್ತು ತಮ್ಮ ಕಚೇರಿಗೆ ಬರುವ ಸಾರ್ವಜನಿಕರಿಗೆ ಸರ್ಕಾರದ ಮಾರ್ಗಸೂಚಿ, ಮಾನದಂಡಗಳಡಿ ಪರಿಹಾರ ಕಲ್ಪಿಸಿ. ಸಾಧ್ಯವಾಗದಿದ್ದರೆ ತಾಳ್ಮೆಯಿಂದ ಮನವರಿಕೆ ಮಾಡಿಕೊಡಿ. ನಿಮ್ಮ ಹಂತದಲ್ಲೇ ಸಮಸ್ಯೆಗಳು ಪರಿಹರಿಸಿದರೇ ಜನಪ್ರತಿನಿಧಿಗಳ ಹತ್ತಿರ ದೂರು ತರುವುದು ಕಡಿಮೆಯಾಗುತ್ತದೆ. ಆಡಳಿತ ಸರಳವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಜಿಲ್ಲಾ ಕಚೇರಿಗಳವರೆಗೆ ಹಳ್ಳಿ ಜನರ ದೂರು ಬರದಂತೆ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಹಂತದಲ್ಲೇ ಜನರ ಸಮಸ್ಯೆ ಇತ್ಯರ್ಥವಾಗಬೇಕು. ಗ್ರಾಮೀಣ ಹಾಗೂ ತಾಲ್ಲೂಕು ಹಂತದಲ್ಲಿದೇ ಸಮಸ್ಯೆಗಳು ಇತ್ಯರ್ಥವಾದಲ್ಲಿ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಕೆಳಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥಗೊಂಡಲ್ಲಿ ನಿಮಗೆ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕಚೇರಿಗಳಿಗೆ ಬರುವ ಜನರು ಕಡಿಮೆಯಾಗುತ್ತಾರೆ ಎಂದರು.

ಶಾಲಾ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶಾಲಾ ಕಟ್ಟಡ ನಿರ್ಮಾಣದಲ್ಲಿ ವಿಳಂಬ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಅಂಗನವಾಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸದಂತೆ ಸಭೆಯಲ್ಲಿ ಸೂಚನೆ ನೀಡಿದರು.

ಅರಣ್ಯ ಇಲಾಖೆಯಿಂದ ಈ ವರ್ಷ ಬೆಳೆಸಿರುವ ಸಸಿಗಳನ್ನು ವರದಾ ನದಿ ಪಾತ್ರದ ರೈತರಿಗೆ ಆದ್ಯತೆ ಮೇರೆಗೆ ವಿತರಿಸಲು ಸೂಚನೆ ನೀಡಲಾಯಿತು. ಜಲಸಂರಕ್ಷಣೆ ಯೋಜನೆಯಡಿ ಉದ್ಯೋಗ ಖಾತ್ರಿ ಅನುದಾನ ಬಳಸಿ ವರದಾ ನದಿ ಪಾತ್ರದಲ್ಲಿ 123 ಕಿ.ಮೀ. ಅರಣ್ಯ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಸಿಗಳನ್ನು ಇಲ್ಲಿ ಬಳಕೆ ಮಾಡಿದರೆ. ಸಸ್ಯ ಸಂರಕ್ಷಣೆ ಹಾಗೂ ಯೋಜನೆ ಸಫಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ ಎನ್.ಕೆ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.