ಹಾವೇರಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಶುರುವಾಗಿದ್ದು, ಗಲ್ಲಿ ಗಲ್ಲಿಯಲ್ಲೂ ಕ್ರಿಕೆಟ್ ಸದ್ದು ಮಾಡುತ್ತಿದೆ. ನಗರ, ಪಟ್ಟಣ, ಗ್ರಾಮಗಳಲ್ಲಿಯೂ ಕ್ರಿಕೆಟ್ ಪಂದ್ಯಗಳ ಸೋಲು– ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಬೆಟ್ಟಿಂಗ್ ಸಹ ಜೋರಾಗುತ್ತಿದ್ದು, ಪೊಲೀಸರ ಕಣ್ತಪ್ಪಿಸಿ ಅಕ್ರಮ ದಂಧೆ ನಿಧಾನವಾಗಿ ವ್ಯಾಪಿಸುತ್ತಿದೆ.
ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಪಟ್ಟಂತೆ ಹಲವು ಆ್ಯಪ್‌ಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ಹಲವರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಆದರೆ, ಜಿಲ್ಲೆಯ ಹಲವರು ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ, ಯುವಕರು ತಮ್ಮದೇ ಅಕ್ರಮ ಕೂಟ ರಚಿಸಿಕೊಂಡು ಬೆಟ್ಟಿಂಗ್ ಆಡಿಸುತ್ತಿರುವ ಮಾಹಿತಿಯೂ ಹರಿದಾಡುತ್ತಿದೆ. ಇಂಥ ಬೆಟ್ಟಿಂಗ್ ದಂಧೆಯನ್ನು ಮಟ್ಟಹಾಕಲು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಜಿಲ್ಲೆ ಮಾತ್ರವಲ್ಲದೇ ರಾಜ್ಯ, ದೇಶ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಬೆಟ್ಟಿಂಗ್ ದಂಧೆ ವ್ಯಾಪಕವಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕರು ಕೃಷಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇಂಥ ಜಿಲ್ಲೆಯಲ್ಲಿ ತೆರೆಮರೆಯಲ್ಲಿಯೇ ಐಪಿಎಲ್ ಪಂದ್ಯಗಳ ಬೆಟ್ಟಿಂಗ್ ನಡೆಯುತ್ತಿದ್ದು, ಯುವಜನತೆಯ ಭವಿಷ್ಯ ದಿಕ್ಕು ತಪ್ಪುತ್ತಿದೆ.
ತಮ್ಮ ಇಷ್ಟದ ತಂಡಗಳ ಪರ ಗ್ರಾಮಗಳಲ್ಲಿ ಮಾತನಾಡುವ ಜನರು, ಅದೇ ತಂಡದ ಗೆಲುವಿಗಾಗಿ ಎದುರಾಳಿಗಳ ಜೊತೆಯಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇದೇ ರೀತಿಯಲ್ಲೇ ಮೊದಲ ಬಾರಿಗೆ ಬೆಟ್ಟಿಂಗ್ ಕಟ್ಟುವ ಜನರು, ಕ್ರಮೇಣ ಅದನ್ನೇ ಮುಂದುವರಿಸುತ್ತಿದ್ದಾರೆ. ಕೆಲವರಂತೂ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡರೂ ಸಾಲ ಮಾಡಿ ಬೆಟ್ಟಿಂಗ್ ಆಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗಿಂತಲೂ ಟಿ–ಟ್ವೆಂಟಿ ಐಪಿಎಲ್ ಟೂರ್ನಿಗಳು ಜನರನ್ನು ಬಹುಬೇಗನೇ ಆವರಿಸಿವೆ. ಐಪಿಎಲ್ ಪಂದ್ಯಗಳು ನಡೆಯುವ ಮೈದಾನದಲ್ಲಿ ರನ್ ಹೊಳೆ ಹರಿಯುತ್ತಿದ್ದರೆ, ಬೌಂಡರಿ ಗೆರೆಯ ಆಚೆಗೆ ‘ಬೆಟ್ಟಿಂಗ್’ ಸದ್ದು ಮಾಡುತ್ತಿದೆ. ಪಂದ್ಯಗಳ ಸೋಲು–ಗೆಲುವು ಲೆಕ್ಕಾಚಾರದಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್, ನಾಣ್ಯ ಚಿಮ್ಮಿಕೆ, ಬೌಂಡರಿ, ಸಿಕ್ಸರ್, ವಿಕೆಟ್ ಪತನ, ವೈಯಕ್ತಿಕ ಸ್ಕೋರ್ ಸೇರಿದಂತೆ ಎಲ್ಲ ವಿಷಯಗಳಿಗೂ ಆವರಿಸಿಕೊಂಡಿದೆ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತೆರೆಮರೆಯಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು. ಇಂಥ ಬೆಟ್ಟಿಂಗ್ ವಿಷಯ ಬಯಲಾಗುತ್ತಿದ್ದಂತೆ, ಬೆಟ್ಟಿಂಗ್‌ಗೆ ಲಗಾಮು ಹಾಕಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಇದೀಗ ಐಪಿಎಲ್ ಬಂದ ಮೇಲಂತೂ ಬೆಟ್ಟಿಂಗ್ ಜಾಲದ ವ್ಯಾಪ್ತಿ ಮಿತಿಮೀರಿದೆ. ಹಳ್ಳಿ– ಹಳ್ಳಿಯಲ್ಲೂ ಬೆಟ್ಟಿಂಗ್ ಸದ್ದು ಮಾಡುತ್ತಿದೆ. ಕೆಲ ಅಂಗಡಿಗಳು, ಬೇಕರಿಗಳು, ಗ್ಯಾರೇಜ್‌ಗಳು ಸೇರಿದಂತೆ ವಿವಿಧೆಡೆ ಬೆಟ್ಟಿಂಗ್ ಮಾತುಗಳು ಕೇಳಿಬರುತ್ತಿವೆ.
ಜಿದ್ದಿಗೆ ಬಿದ್ದು ಬೆಟ್ಟಿಂಗ್: ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲೂ ಬಹುತೇಕರು ಐಪಿಎಲ್ ಟೂರ್ನಿ ಬಗ್ಗೆ ಮಾತನಾಡುತ್ತಿದ್ದಾರೆ. ಪಂದ್ಯಗಳು ನಡೆಯುವ ಮುನ್ನಾ ದಿನವೇ ಸೋಲು–ಗೆಲುವು ಲೆಕ್ಕಾಚಾರದಲ್ಲಿ ತೊಡಗುವ ಕೆಲವರು, ತಮ್ಮದೇ ತಂಡ ಗೆಲುವುದಾಗಿ ವಾದಿಸುತ್ತಿದ್ದಾರೆ. ಇದೇ ವಾದ–ಪ್ರತಿವಾದ, ಬೆಟ್ಟಿಂಗ್ ಹಂತಕ್ಕೆ ತಲುಪುತ್ತಿದೆ. ಜಿದ್ದಿಗೆ ಬಿದ್ದವರಂತೆ ವಾದಿಸುವವರು, ತಮ್ಮ ತಂಡದ ಪರವಾಗಿ ಸಾವಿರದಿಂದ ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿರುವ ಘಟನೆಗಳು ನಡೆಯುತ್ತಿವೆ.
‘ಗ್ರಾಮಗಳಲ್ಲಿರುವ ಬಹುತೇಕ ಯುವಕರು ಹಾಗೂ ಕ್ರಿಕೆಟ್ ಅಭಿಮಾನಿಗಳು, ಇಂದು ಐಪಿಎಲ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಲವರಂತೂ ಹಣ ಬೆಟ್ಟಿಂಗ್ ಕಟ್ಟುತ್ತಾರೆ. ಪಂದ್ಯಗಳ ಸೋಲು– ಗೆಲುವಿನ ಲೆಕ್ಕಾಚಾರದಲ್ಲಿ ಹಣ ವಿನಿಮಯವಾಗುತ್ತಿದೆ. ಕೈ ಕೈ ಹಣ ಬದಲಾವಣೆ ಆಗಿ ಬೆಟ್ಟಿಂಗ್ ನಡೆಯುತ್ತಿದೆ’ ಎಂದು ಹಿರೇಕೆರೂರು ಪಟ್ಟಣದ ನಿವಾಸಿ ಚಂದ್ರಪ್ಪ ಶಾಂತಪ್ಪನವರ ತಿಳಿಸಿದರು.
‘ವಿವಿಧ ದೇಶಗಳ ಕ್ರಿಕೆಟ್ ತಂಡಗಳ ಆಟಗಾರರನ್ನು ಒಟ್ಟುಗೂಡಿಸಿ ನಡೆಸುವ ಐಪಿಎಲ್ ಪಂದ್ಯಗಳು, ಕೇವಲ ಮನೋರಂಜನೆಗೆ ಸೀಮಿತವಾಗಿರಬೇಕು. ಜೊತೆಗೆ, ಆಟಗಾರರ ಆಟವನ್ನು ಸ್ಪೂರ್ತಿ ತೆಗೆದುಕೊಂಡು ಯುವಕರು ಬೆಳೆಯಬೇಕು. ಅದನ್ನು ಬಿಟ್ಟು, ಬೆಟ್ಟಿಂಗ್ ಗೀಳು ಅಂಟಿಸಿಕೊಳ್ಳುವುದು ಒಳ್ಳೆಯದಲ್ಲ. ನಮ್ಮ ಓಣಿಯ ಯುವಕರು, ಬೆಟ್ಟಿಂಗ್ ಆಡುತ್ತಿದ್ದಾರೆ. ಅವರಿಗೆ ಬುದ್ದಿವಾದ ಹೇಳಿ ಹೇಳಿ ಸಾಕಾಗಿದೆ’ ಎಂದರು.
ಬೆಟ್ಟಿಂಗ್‌ಗೆ ಸಿಗದ ಪುರಾವೆ: ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊಬೈಲ್ ಕರೆ–ಆ್ಯಪ್ ಮೂಲಕ ಬುಕ್ಕಿಗಳು ಬೆಟ್ಟಿಂಗ್ ನಡೆಸುತ್ತಾರೆ. ಬುಕ್ಕಿಗಳ ಕೈ ಕೆಳಗಿನವರು, ಹಣದ ವಹಿವಾಟು ನೋಡಿಕೊಳ್ಳುತ್ತಾರೆ. ಇಂಥ ಪ್ರಕರಣಗಳಲ್ಲಿ ಸುಲಭವಾಗಿ ಪುರಾವೆಗಳು ಲಭ್ಯವಾಗುತ್ತವೆ. ಆದರೆ, ಗ್ರಾಮಗಳಲ್ಲಿ ನಡೆಯುವ ಬೆಟ್ಟಿಂಗ್‌ಗೆ ಪುರಾವೆಗಳನ್ನು ಸಿಗುವುದು ಕಷ್ಟವಾಗುತ್ತಿದೆ.
‘ಗ್ರಾಮಗಳಲ್ಲಿ ಬಾಯಿ ಮಾತಿನ ಮೂಲಕ ಬೆಟ್ಟಿಂಗ್ ನಡೆಸುತ್ತಾರೆ. ಇದಕ್ಕೆ ಪುರಾವೆ ಇರುವುದಿಲ್ಲ. ಗೆದ್ದವರಿಗೆ ಸೋತವರು ಹಣ ಕೊಡುತ್ತಾರೆ. ಇದರಲ್ಲಿ ಏನಾದರೂ ವ್ಯತ್ಯಾಸವಾದರೆ, ಮದ್ಯವರ್ತಿಗಳು ಸಮಸ್ಯೆ ಬಗೆಹರಿಸುತ್ತಾರೆ’ ಎಂದು ಶಿಗ್ಗಾವಿ ಪಟ್ಟಣದ ಯುವಕ ವಿವೇಕ ಎಸ್. ಹೇಳಿದರು.
ಬೆಟ್ಟಿಂಗ್ ಮೇಲೆ ಪೊಲೀಸರ ನಿಗಾ: ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಕೆಲವರ ಜೀವನ ಹಾಳಾಗಲು ಕ್ರಿಕೆಟ್ ಬೆಟ್ಟಿಂಗ್ ಕಾರಣವಾಗುತ್ತಿದೆ. ಕೆಲ ರೈತರು, ಕಾರ್ಮಿಕರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಬೀದಿಬದಿ ವ್ಯಾಪಾರಿಗಳು, ಆಟೊ ಚಾಲಕರು ಸೇರಿದಂತೆ ಹಲವರು ಬೆಟ್ಟಿಂಗ್ ಗೀಳು ಬೆಳೆಸಿಕೊಂಡಿದ್ದಾರೆ. ದುಡಿದ ಹಣವನ್ನು ಬೆಟ್ಟಿಂಗ್‌ಗೆ ಕಟ್ಟಿ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭಗಳಿಗೆ ಆಸ್ಪದ ನೀಡದಂತೆ ಪೊಲೀಸ್ ಇಲಾಖೆ, ಕ್ರಿಕೆಟ್ ಬೆಟ್ಟಿಂಗ್ ಮೇಲೆ ನಿಗಾ ವಹಿಸಿದೆ.
ಸಾರ್ವಜನಿಕ ಜೂಜು ಕಾಯ್ದೆ-1867ರ ಪ್ರಕಾರ ಯಾವುದೇ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಅಪರಾಧವಾಗಿದೆ. ಸ್ಥಳೀಯ ಠಾಣೆಗಳ ಜೊತೆಯಲ್ಲಿ ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ (ಸೆನ್) ಠಾಣೆ ಪೊಲೀಸರು ಸಹ ಬೆಟ್ಟಿಂಗ್ ನಿಯಂತ್ರಣಕ್ಕೆ ಕಾರ್ಯಾಚರಣೆ ಆರಂಭಿಸಲಿದ್ದಾರೆ.
‘ಐಪಿಎಲ್ ಟೂರ್ನಿ ಶುರುವಾಗುತ್ತಿದ್ದಂತೆ, ಅಲ್ಲಲ್ಲಿ ಬೆಟ್ಟಿಂಗ್ ಶುರುವಾಗುತ್ತದೆ. ಹೀಗಾಗಿ, ಬೆಟ್ಟಿಂಗ್ ನಡೆಸುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತಿಯೊಂದು ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿಯೂ ಬೆಟ್ಟಿಂಗ್ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರು ಸಿಕ್ಕಬಿದ್ದರೆ, ಕಾನೂನು ಕ್ರಮ ನಿಶ್ಚಿತ. ಐಪಿಎಲ್ ಶುರುವಾದಾಗಿನಿಂದ ಜಿಲ್ಲೆಯಲ್ಲಿ ಪ್ರಕರಣಗಳು ವರದಿಯಾಗಿವೆ. ಈ ವರ್ಷವೂ ವರದಿಯಾಗಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬೆಟ್ಟಿಂಗ್ ನಡೆಸುವುದು ಅಪರಾಧ. ಬೆಟ್ಟಿಂಗ್ ಮೇಲೆ ನಿಗಾ ಇಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.–ಎಲ್.ವೈ. ಶಿರಕೋಳ ಹೆಚ್ಚುವರಿ ಎಸ್ಪಿ
ಆತ್ಮಹತ್ಯೆಗೂ ಪ್ರಚೋದನೆ
‘ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡವರು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವೂ ಇರುತ್ತದೆ. ಕೆಲ ಹಳ್ಳಿಗಳಲ್ಲಿ ಸಾಲ ಮಾಡಿ ಬೆಟ್ಟಿಂಗ್ ಆಡುವ ಜನರಿದ್ದಾರೆ. ಸಾಲ ತೀರಿಸಲಾಗದೇ ಊರು ತೊರೆಯುವುದರ ಜೊತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವೂ ಬರಬಹುದು’ ಎಂದು ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರಿನ ರಮೇಶ ಆತಂಕ ವ್ಯಕ್ತಪಡಿಸಿದರು.
ಊರು ತೊರೆಯುವ ಭೀತಿ
ಕ್ರಿಕೆಟ್ ಬೆಟ್ಟಿಂಗ್ ಗೀಳು ಒಮ್ಮೆ ತಲೆಗೇರಿದರೆ ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ. ಮೊದಲ ಪಂದ್ಯದಲ್ಲಿ ಹಣ ಕಳೆದುಕೊಂಡರೆ ಇನ್ನೊಂದು ಪಂದ್ಯದಲ್ಲಿ ಹಣ ಬರಬಹುದೆಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅದರಲ್ಲೂ ಹಣ ಬಾರದಿದ್ದರೆ ಮತ್ತೆ ಮತ್ತೆ ಬೆಟ್ಟಿಂಗ್ ಹಿಂದೆ ಬೀಳುತ್ತಿದ್ದಾರೆ. ಕೈಯಲ್ಲಿರುವ ಹಣ ಖಾಲಿಯಾಗುತ್ತಿದ್ದಂತೆ ಅವರಿವರ ಬಳಿ ಸಾಲ ಮಾಡಿ ಅದೇ ಹಣವನ್ನು ಕ್ರಿಕೆಟ್ ಬೆಟ್ಟಿಂಗ್ ಕಟ್ಟುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಸಾಲ ಮಾಡಿದ ನಂತರವೂ ಬೆಟ್ಟಿಂಗ್‌ನಲ್ಲಿ ಗೆಲ್ಲದಿದ್ದಾಗ ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದೆ. ಮಾಡಿದ ಸಾಲವನ್ನು ತೀರಿಸಲಾಗದೇ ಹಲವರು ಗ್ರಾಮಗಳನ್ನು ತೊರೆಯುವ ಆತಂಕ ಹೆಚ್ಚಾಗಿದೆ. ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಕುಟುಂಬಕ್ಕೆ ಆಸರೆಯಾದ ಮಕ್ಕಳು ಊರು ತೊರೆದರೆ ಪೋಷಕರು ಕಣ್ಣೀರಿಯಲ್ಲಿ ಕೈ ತೊಳೆಯುವ ಪರಿಸ್ಥಿತಿ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.