ಅಪಘಾತ
–ಪ್ರಾತಿನಿಧಿಕ ಚಿತ್ರ
ಹಾವೇರಿ: ನಗರದಿಂದ ಹಾನಗಲ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಶ್ರೀಕಂಠಪ್ಪ ಬಡಾವಣೆ ಬಳಿ ಅಪಘಾತ ಸಂಭವಿಸಿದ್ದು, ಎತ್ತು ಹಾಗೂ ಏಳು ರೈತರು ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ ಸಂಭವಿಸಿರುವ ಅಪಘಾತದಲ್ಲಿ, ತಾಲ್ಲೂಕಿನ ಆಲದಕಟ್ಟಿಯ ಕರಬಸಪ್ಪ ಶಿವಲಿ, ಸಂಗನಗೌಡ ಗೌಡಪ್ಪನವರ, ಅಕ್ಷಯ್ ಕುಂದೂರ, ಆಕಾಶ ಹಾವಣಗಿ, ಪ್ರವೀಣ ಚಿನ್ನಿಕಟ್ಟಿ, ಅಮಿತ್ ಕುಂದೂರ, ಗಿರೀಶ ಯಡವಣ್ಣನವರ ಅವರು ಗಾಯಗೊಂಡಿದ್ದಾರೆ.
ಕರಬಸಪ್ಪ ಶಿವಲಿ, ಅಕ್ಷಯ್ ಕುಂದೂರು, ಅಮಿತ್ ಕುಂದೂರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕೆಎಂ–ಸಿಆರ್‌ಐ (ಕಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಹಾವೇರಿಯ ಹುಕ್ಕೇರಿಮಠದ ಜಾತ್ರೆಗೆಂದು ಆಲದಕಟ್ಟಿಯ ನಿವಾಸಿಗಳು ಎತ್ತಿನ ಚಕ್ಕಡಿಯಲ್ಲಿ ಹೊರಟಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಲಾರಿಯೊಂದು ಚಕ್ಕಡಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಎತ್ತಿನ ಸಮೇತ ಚಕ್ಕಡಿ ರಸ್ತೆಯಲ್ಲಿ ಉರುಳಿಬಿದ್ದಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
‘ಚಕ್ಕಡಿಯ ಎತ್ತಿಗೂ ತೀವ್ರ ಗಾಯವಾಗಿದೆ. ಹಾವೇರಿಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.
ಹಾಳಾದ ರಸ್ತೆಯಿಂದ ಅಪಘಾತ
‘ಹಾವೇರಿ–ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ರಾಜ್ಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ’ ಎಂದು ಸ್ಥಳೀಯರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.