
ಸವಣೂರು: ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಹಾವೇರಿ, ತಾಲ್ಲೂಕು ಘಟಕ ಸವಣೂರು ಸಹಯೋಗದಲ್ಲಿ ಜ.24 ಮತ್ತು ಜ.25ರಂದು ನಡೆಯುತ್ತಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸವಣೂರು ಪಟ್ಟಣ ಕನ್ನಡ ಭಾವುಟಗಳಿಂದ ಮೈದುಂಬಿಕೊಂಡು ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು ಕನ್ನಡ ಮನಸ್ಸುಗಳನ್ನು ಕಾರ್ಯಕ್ರಮಕ್ಕೆ ಕೈಬೀಸಿ ಕರೆಯುತ್ತಿದೆ.
ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು ನುಡಿಜಾತ್ರೆಗೆ ಸಾಕ್ಷಿಯಾಗಲಿದೆ. ಸಮ್ಮೇಳನದ ಸಾರಥಿ ಸಾಹಿತಿ ಡಾ.ಎಚ್.ಐ.ತಿಮ್ಮಾಪೂರ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ನುಡಿ ಜಾತ್ರೆಯು ಜ.24 ರಂದು ಬೆಳಿಗ್ಗೆ 7.30ಕ್ಕೆ ರಾಷ್ಟ್ರ ಧ್ವಜಾರೋಹಣ, ಪರಿಷತ್ ಧ್ವಜಾರೋಹಣ ಹಾಗೂ ನಾಡ ಧ್ವಜಾರೋಹಣದೊಂದಿಗೆ ಚಾಲನೆಗೊಳ್ಳಲಿದೆ.
ಸಮ್ಮೇಳನಾಧ್ಯಕ್ಷ ಸಾಹಿತಿ ಡಾ.ಎಚ್.ಐ.ತಿಮ್ಮಾಪೂರ ಅವರ ಮೆರವಣಿಗೆ ಬೆಳಿಗ್ಗೆ 8.30ಕ್ಕೆ ಶ್ರೀ ಭರಮಲಿಂಗೇಶ್ವರ ವೃತ್ತದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಹಾಯ್ದು ಸಮ್ಮೇಳನದ ಮುಖ್ಯ ವೇದಿಕೆ ತಲುಪುವುದು.
ಬೆಳಿಗ್ಗೆ 10.30ಕ್ಕೆ ಡಾ.ವಿ.ಕೃ.ಗೋಕಾಕ ವೇದಿಕೆ ಹಾಗೂ ಚಂದ್ರಶೇಖರ ಪಾಟೀಲ ಸಭಾಂಗಣದಲ್ಲಿ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಹಾಗೂ ಶ್ರೀ ಚನ್ನಬಸವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಮ್ಮೇಳನ ಉದ್ಘಾಟನೆಗೊಳ್ಳುವುದು.
ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ರಾಜಕೀಯ ಪ್ರಮುಖರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಗೋಷ್ಠಿ-1: ಮಧ್ಯಾಹ್ನ 1 ರಿಂದ 2.45 ರವರೆಗೆ ‘ಕನ್ನಡ ಕನ್ನಡ ಬರ‍್ರಿ ನಮ್ಮ ಸಂಗಡ’ ಸಾಹಿತಿ ಡಾ. ಎಸ್.ಪಿ.ಗೌಡರ ಅಧ್ಯಕ್ಷತೆ ವಹಿಸುವರು. ಲೇಖಕ ಡಾ.ಕಾಂತೇಶರೆಡ್ಡಿ ಗೋಡಿಹಾಳ ಆಶಯ ನುಡಿ ನುಡಿಯುವರು.
ಗೋಷ್ಠಿ-2: ‘ಸ್ತ್ರೀಪರ ಚಿಂತನೆಗಳು’ ಸಾಹಿತಿ ವಿನುತಾ ಹಂಚಿನಮನಿ ಅಧ್ಯಕ್ಷತೆ ವಹಿಸುವರು, ಸಾಹಿತಿ ದೀಪಾ ಗೋನಾಳ ಆಶಯ ನುಡಿ ನುಡಿಯಲಿದ್ದು, ಪ್ರಾಚಾರ್ಯರಾದ ನಿರ್ಮಲಾ ಶಿವನಗುತ್ತಿ ಅವರು ಬೆಂಕಿಯಲ್ಲಿ ಅರಳಿದ ಹೂವುಗಳು, ಡಾ.ನಾಗರಾಜ ದ್ಯಾಮನಕೊಪ್ಪ ಜನನಿ ಜನ್ಮ ಭೂಮಿಸ್ಚ ಸ್ವರ್ಗಾದಪಿ ಗರಿಯಷೇ ಹಾಗೂ ಅಂಕಣಕಾರರಾದ ಭಾರತಿ ಕೊಪ್ಪ ಅವರು ಮಹಿಳೆ ಮತ್ತು ಉದ್ಯೋಗ, ಸಾಧನೆ, ಸವಾಲುಗಳು ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಗೋಷ್ಟಿ-3: ಸಂಜೆ 5 ರಿಂದ 6.45 ರವರೆಗೆ ಜರುಗುವ ವೈವಿಧ್ಯತೆ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೋ ಕೆ.ಆರ್.ಕೋಣ್ತಿ ವಹಿಸಲಿದ್ದು, ಆಶಯ ನುಡಿಯನ್ನು ಉಪನ್ಯಾಸಕ ಬಸವರಾಜ ತೋಟದ ನುಡಿಯಲ್ಲಿದ್ದಾರೆ.
ವಾಗ್ಮಿ ಕಿರಣಕುಮಾರ ವಿವೇಕವಂಶಿ ರಾಷ್ಟ್ರ ಪ್ರಗತಿಗೆ ಯುವ ಶಕ್ತಿ, ಸಾಹಿತಿ ಪ್ರೋ ಸಿದ್ದು ಯಾಪಲ್ ಪರವಿ ಸೈನಿಕ ನಿನಗೊಂದು ಸಲಾಂ, ವರದಿಗಾರ ಆನಂದ ಮತ್ತಿಗಟ್ಟಿ ಇವರು ಸಮೂಹ ಮಾಧ್ಯಮ; ಸಾಮಾಜಿಕ ಹೊಣೆಗಾರಿಕೆ ವಿಷಯವಾಗಿ ವಿಷಯ ಮಂಡನೆಯನ್ನು ಮಾಡಲಿದ್ದಾರೆ.
ನಂತರ, ಸಂಜೆ 7 ಗಂಟೆಯಿಂದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
- ಪುಸ್ತಕ ಬಿಡುಗಡೆ
ಲೇಖಕ ಚಂದ್ರಶೇಖರ ಕುಳೇನೂರ ರಚಿಸಿದ ಚಂಪಾ ನಮ್ಮ ಚಂಪಾ ಪ್ರೋ ಮಾರುತಿ ಶಿಡ್ಲಾಪೂರ ರಚಿಸಿದ ಕುರಿಗಾಯಿ ಮುತ್ತಣ್ಣ ಮಣ್ಣು ಚಿನ್ನ ಮಾಡಿದ ಕಥೆ ಹಾಗೂ ಲೇಖಕ ಮಾಲತೇಶ ಮರಳಿಹಳ್ಳಿ ರಚಿಸಿದ ಅಂತರಂಗದ ಅನಾವರಣ ಪುಸ್ತಕ ಬಿಡುಗಡೆಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.