
ಸವಣೂರು: ರಾಜ್ಯದ 30 ಜಿಲ್ಲೆಗಳಲ್ಲಿ ಕನ್ನಡಕ್ಕೆ ಕೇವಲ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನ ಪುತ್ರ ಡಾ.ವಿ.ಕೃ.ಗೋಕಾಕ ಅವರಿಗೆ 5ನೇ ಪ್ರಶಸ್ತಿ ದೊರೆತಿದೆ. ಅಂತವರು ಜನಿಸಿದ ನಾಡಿನಲ್ಲಿ ಕನ್ನಡದ ತೇರನ್ನು ಅದ್ದೂರಿಯಾಗಿ ಎಳೆಯುತ್ತಿರುವುದು ಹೆಣ್ಣು ಮಗಳಿಗೆ ತವರಿನ ಉಡುಗೊರೆ ಸಿಕ್ಕಷ್ಟು ಸಂತೋಷವಾಗಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಎಚ್.ಐ.ತಿಮ್ಮಾಪೂರ ಹೇಳಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜರುಗುತ್ತಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಹಾವೇರಿ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಗೆ ಪರಿಚಯಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಹಾವೇರಿ ಜಿಲ್ಲೆಯ ನೆಲಕ್ಕೊಂದು ಇತಿಹಾಸ, ಪರಂಪರೆ ಇದೆ. ಸಂತರು, ಶರಣರು, ದಾರ್ಶನಿಕರು, ಕವಿಗಳು, ಕಲಾವಿದರು, ಪ್ರಸಿದ್ಧ ದೊಡ್ಡ ಹುಣಸೇ ಕಲ್ಮಠ, ಸತ್ಯಬೋಧ ಶ್ರೀಗಳ ಮೂಲ ವೃಂದಾವನ, ಸಂತ ಶಿಶುವಿನಹಾಳ ಶರೀಫರು, ಸರ್ವಜ್ಞ, ಅಂಬಿಗರ ಚೌಡಯ್ಯ ಸೇರಿದಂತೆ ಹಲವಾರು ಮಹನೀಯರು ಜನಿಸಿದ ನಾಡಾಗಿದೆ’ ಎಂದರು.
ಸಾಹಿತಿ ವೀರಣ್ಣ ರಾಜೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸವಣೂರು ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಕವಿ ಡಾ.ವಿ.ಕೃ.ಗೋಕಾಕ ಅವರ ಜನ್ಮಸ್ಥಳದಲ್ಲಿ 2ನೇ ಬಾರಿಗೆ ಜಿಲ್ಲಾ ಸಮ್ಮೇಳನ ಜರಗುತ್ತಿರುವುದು ಹೆಮ್ಮೆಯ ವಿಷಯ. ಇಂದು ಕನ್ನಡ ಓದು ಮತ್ತು ಬರವಣಿಗೆ ಇಂದಿನ ಸಾಮಾಜಿಕ ಜಾಲತಾಣಗಳಿಂದ ನಶಿಸಿ ಹೋಗುತ್ತಿದೆ. ಇಂದಿನ ಶಿಕ್ಷಣ ನೀತಿಯಿಂದ ಪಾಲಕರು ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಇಂಗ್ಲಿಷ್ ಮಾಧ್ಯಮದ ಬೆನ್ನು ಹತ್ತಿ ಕನ್ನಡವನ್ನು ಮರೆಯುತ್ತಿರಿವುದು ವಿಷಾದದ ಸಂಗತಿ ಎಂದರು.
ಕಾರ್ಯಕ್ರಮಲ್ಲಿ ಲೇಕಕರಾದ ಚಂದ್ರಶೇಖರ ಕುಳೇನೂರ ಅವರ ಚಂಪಾ ನಮ್ಮ ಚಂಪಾ, ಮಾರುತಿ ಶಿಡ್ಲಾಪೂರ ಅವರ ಕುರಿಗಾಹಿ ಮುತ್ತಣ್ಣ ಮಣ್ಣು ಚಿನ್ನ ಮಾಡಿದ ಕಥೆ, ರಾಜಶೇಖರ ಡಂಬರಮತ್ತೂರ ಅವರ ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ, ಸಾಂಸ್ಕೃತಿಕ ಅಧ್ಯಯನ ಕೃತಿಗಳನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದರು.
ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಡಿಡಿಪಿಐ ದಂಡಿನ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ನೆಹರು ಓಲೇಕಾರ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಸುಭಾಸ ಮಜ್ಜಗಿ, ಅಲಕಾ ಸಿಂಧೂರ, ಗೋಕಾಕ ಟ್ರಸ್ಟ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ, ಗಂಗಾಧರ ಬಾಣದ, ಶೋಭಾ ನಿಸ್ಸಿಮಗೌಡ್ರ, ಮಾಲತೇಶ ಮೆಣಸಿನಕಾಯಿ ಇದ್ದರು.
ಹಾವೇರಿ ಜಿಲ್ಲೆಯ ಸಾಹಿತಿ-ಕಲಾವಿದರ ವಿಳಾಸ ಕೋಶ ಪ್ರಕಟಿಸಿ
‘ನವಾಬರ ಆಳ್ವಿಕೆಯ ಬೀಡು ನಮ್ಮ ಸವಣೂರು. ಈ ನಮ್ಮ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಪ್ರತಿಯೊಂದು ತಾಲ್ಲೂಕಿನಲ್ಲೂ ಕಲಾ ರಂಗಮಂದಿರ ನಿರ್ಮಾಣವಾಗಬೇಕು. ಹಾವೇರಿ ಜಿಲ್ಲೆಯ ಚರಿತ್ರೆಯಲ್ಲಿ ನಿರ್ಲಕ್ಷಿತ ಸಾಧಕರನ್ನು ಗುರುತಿಸುವ ಸಂಶೋಧನೆ ನಡೆಯಬೇಕು. ಹಾವೇರಿ ಜಿಲ್ಲೆಯ ಸಾಹಿತಿ-ಕಲಾವಿದರ ವಿಳಾಸ ಕೋಶವನ್ನು ಸಿದ್ಧಪಡಿಸಿ ಪ್ರಕಟಿಸಬೇಕು’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಎಚ್.ಐ.ತಿಮ್ಮಾಪೂರ ಹೇಳಿದರು. ‘ಕನ್ನಡ ಕಲಿತವರು ಕಡಿಮೆ ದರ್ಜೆಯವರು ಇಂಗ್ಲಿಷ್ ಭಾಷೆ ಕಲಿತವರು ಉನ್ನತ ದರ್ಜೆಯವರು ಎಂಬ ಭಾವನೆಯನ್ನು ಹೋಗಲಾಡಿಸಬೇಕು. ಎಲ್ಲ ರಂಗದಲ್ಲಿಯೂ ಜ್ಞಾನಿಗಳು ಮತ್ತು ಗಣ್ಯ ವ್ಯಕ್ತಿಗಳು ತಮ್ಮ ಮಾತೃ ಭಾಷೆಯಲ್ಲಿಯೆ ಓದಿರುತ್ತಾರೆ. ಕನ್ನಡವನ್ನು ಬಳಕೆ ಮಾಡಿಕೊಳ್ಳಲು ಹೆಚ್ಚು ಸಾಧ್ಯತೆಗಳಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಕನ್ನಡದಲ್ಲಿಯೆ ಬೋಧನೆ ಮಾಡುವ ಮತ್ತು ಕಲಿಯುವ ವ್ಯವಸ್ಥೆ ಆಗಬೇಕು. ಪ್ರತಿನಿತ್ಯ ಕನ್ನಡ ದಿನ ಪತ್ರಿಕೆಗಳ ಓದುವ ಹವ್ಯಾಸವನ್ನು ರೂಢಿಸಿಕೊಂಡು ಪತ್ರಿಕೆಗಳನ್ನು ಉಳಿಸಿ ಪ್ರತಿಯೊಬ್ಬರಲ್ಲಿಯೂ ಶಬ್ಧ ಭಂಡಾರ ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.