ADVERTISEMENT

ನೂರರ ಗಡಿ ದಾಟದ ಸೌರಶಕ್ತಿ ಕುಸುಮ್

ನೋಂದಣಿಗೆ ಜಿಲ್ಲೆಯ ರೈತರ ನಿರಾಸಕ್ತಿ। ರಾಜ್ಯದಲ್ಲಿ 18 ಸಾವಿರ ಅರ್ಜಿ ಸಲ್ಲಿಕೆ

ಸಂತೋಷ ಜಿಗಳಿಕೊಪ್ಪ
Published 12 ಜುಲೈ 2024, 7:12 IST
Last Updated 12 ಜುಲೈ 2024, 7:12 IST
   

ಹಾವೇರಿ: ಸೌರಶಕ್ತಿ ಆಧರಿತ ಕೃಷಿ ಪಂಪ್‌ಸೆಟ್‌ ಅಳವಡಿಸಿ ರೈತರನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ‘ಕುಸುಮ್-ಬಿ’ ಯೋಜನೆ ಜಾರಿಗೆ ತರಲಾಗಿದ್ದು, ಜಿಲ್ಲೆಯ ಎಂಟು ತಾಲ್ಲೂಕುಗಳ ಪೈಕಿ ಒಂದು ತಾಲ್ಲೂಕಿನಲ್ಲೂ ಅರ್ಜಿಗಳ ಸಂಖ್ಯೆ ನೂರರ ಗಡಿ ದಾಟಿಲ್ಲ.

ಜಿಲ್ಲೆಯ ಬಹುತೇಕ ರೈತರು, ತಮ್ಮ ನೀರಾವರಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅವಲಂಬಿಸಿದ್ದಾರೆ. ಈ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಕುಸುಮ್–ಬಿ (ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್) ಯೋಜನೆ ಜಾರಿಗೆ ತರಲಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಕುಸುಮ್ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡಿದ್ದು, ರಾಜ್ಯದ ಎಲ್ಲ ವಿದ್ಯುತ್ ಪ್ರಸರಣ ಕಂಪನಿಗಳು ಸಹಕಾರ ನೀಡುತ್ತಿವೆ.

ಮಲೆನಾಡಿನ ಸೆರಗಿನಲ್ಲಿರುವ ಹಾವೇರಿ ಜಿಲ್ಲೆಯು ಮೈದಾನ ಪ್ರದೇಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇಲ್ಲಿಯ ಬಹುತೇಕ ರೈತರು ಇತ್ತೀಚಿನ ದಿನಗಳಲ್ಲಿ ನೀರಾವರಿ ಕೃಷಿ ಮಾಡುತ್ತಿದ್ದು, ಇದಕ್ಕಾಗಿ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಜೊತೆಯಲ್ಲಿ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಅವಲಂಬಿಸಿದ್ದಾರೆ. ಇಂಥ ಜಿಲ್ಲೆಯಲ್ಲಿ ಕುಸುಮ್ ಯೋಜನೆಗೆ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇತ್ತು. ಆದರೆ, ಬಹುತೇಕ ರೈತರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದಕ್ಕೆ ಕಾರಣವೇನು ? ಎಂಬ ಬಗ್ಗೆ ನಿಗಮದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

‘ಹಾವೇರಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿವೆ. ಕುಸುಮ್ ಯೋಜನೆ ಜಾರಿಯಾಗುತ್ತಿದ್ದಂತೆ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ಮಾಡಲಾಗಿತ್ತು. ಆದರೆ, ಸದ್ಯದ ಅಂಕಿ–ಅಂಶ ಪ್ರಕಾರ ಇಡೀ ಜಿಲ್ಲೆಯಲ್ಲಿ ಕೇವಲ 515 ರೈತರು ಮಾತ್ರ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ತಾಲ್ಲೂಕಿನಲ್ಲೂ ಅರ್ಜಿಗಳ ಸಂಖ್ಯೆ ನೂರರ ಗಡಿ ದಾಟಿಲ್ಲ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.

‘ಹಾನಗಲ್‌ ತಾಲ್ಲೂಕಿನಲ್ಲಿ 76 ಅರ್ಜಿ ಸಲ್ಲಿಕೆಯಾಗಿದ್ದು, ಜಿಲ್ಲೆಯಲ್ಲಿ ಹೆಚ್ಚು ಅರ್ಜಿ ಸಲ್ಲಿಕೆಯಾದ ತಾಲ್ಲೂಕು ಪೈಕಿ ಹಾನಗಲ್ ಮೊದಲ ಸ್ಥಾನದಲ್ಲಿದೆ. ರಟ್ಟೀಹಳ್ಳಿಯಲ್ಲಿ 33 ಹಾಗೂ ಹಿರೇಕೆರೂರಿನಲ್ಲಿ 38 ಅರ್ಜಿಗಳು ಸಲ್ಲಿಕೆಯಾಗಿದ್ದು, ಕೊನೆ ಸ್ಥಾನದಲ್ಲಿವೆ’ ಎಂದರು.

ಸಬ್ಸಿಡಿ ಶೇ 30ರಿಂದ ಶೇ 50ಕ್ಕೆ ಹೆಚ್ಚಳ: ‘ಕುಸುಮ್‌ –ಬಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ ಅಳವಡಿಕೆಗೆ ರಾಜ್ಯ ಸರ್ಕಾರದ ಪಾಲಿನಲ್ಲಿ ಶೇ 30ರಷ್ಟು ಮಾತ್ರ ಸಬ್ಸಿಡಿ ಇತ್ತು. ಈ ಪ್ರಮಾಣವನ್ನು ಇದೀಗ ಶೇ 50ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೇ 30ರಷ್ಟು ಸಬ್ಸಿಡಿ ಇದೆ. ರೈತರು ಶೇ 20ರಷ್ಟು ಹಣ ಪಾವತಿಸಿದರೆ ಸೌರಶಕ್ತಿ ಕೃಷಿ ಪಂಪ್‌ಸೆಟ್ ಸೌಲಭ್ಯ ದೊರೆಯಲಿದೆ. ಐದು ವರ್ಷ ನಿರ್ವಹಣೆ ಸಹ ಉಚಿತವಿರಲಿದೆ. ಯೋಜನೆ ಹೆಚ್ಚು ಅನುಕೂಲವಿದ್ದರೂ ಜಿಲ್ಲೆಯಲ್ಲಿ ರೈತರಿಂದ ಹೆಚ್ಚಿನ ಅರ್ಜಿಗಳು ಬರುತ್ತಿಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಸೌರಶಕ್ತಿ ಕೃಷಿ ಪಂಪ್‌ಸೆಟ್‌ ನಿರ್ವಹಣೆಗೆ ಅಗತ್ಯವಿರುವ ಸೌರ ಫಲಕಗಳು, ಸಬ್‌ಮರ್ಸಿಬಲ್, ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್‌ ಸ್ಟ್ರಕ್ಚರ್‌, ಪ್ಯಾನಲ್ ಬೋರ್ಡ್, ಪೈಪ್‌, ಕೇಬಲ್ ಹಾಗೂ ಇತರೆ ಎಲ್ಲ ಉಪಕರಣಗಳನ್ನು ಯೋಜನೆಯಡಿ ರೈತರಿಗೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ರಾಜಸ್ಥಾನ, ಹರಿಯಾಣದಲ್ಲಿ ಯಶಸ್ಸು: ‘ಕುಸುಮ್ ಯೋಜನೆಯನ್ನು ರಾಜಸ್ಥಾನ್ ಹಾಗೂ ಹರಿಯಾಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲಿ ಯೋಜನೆ ಯಶಸ್ವಿಯಾಗಿ, ರೈತರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಇದುವರೆಗೂ 18 ಸಾವಿರ ರೈತರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ’ ಎಂದು ಅಧಿಕಾರಿ ವಿವರಿಸಿದರು.

‘ಬೆಳಗಾವಿ ಜಿಲ್ಲೆಯ 2,284 ರೈತರು ಅರ್ಜಿ ಸಲ್ಲಿಸಿದ್ದು, ಇದುವೇ ರಾಜ್ಯದ ಅತ್ಯಧಿಕ ಅರ್ಜಿ ಸಲ್ಲಿಸಿದ ಜಿಲ್ಲೆಯಾಗಿದೆ. ಉಡುಪಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಅಲ್ಲಿಯ 111 ರೈತರು ಮಾತ್ರ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಯೋಜನೆ ಅನುಷ್ಠಾನದ ಹಂತದಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುತ್ತಿದೆ. ರೈತರಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಯಲ್ಲಿ ಮಾರ್ಪಾಡು ತರಲು ಚಿಂತನೆ ನಡೆದಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.