ADVERTISEMENT

ಹಾವೇರಿ | ಫಲಾನುಭವಿಗಳಿಗೆ ಪಾಸ್; ಜಿಲ್ಲಾವಾರು ಆಸನ: ವಿಜಯ ಮಹಾಂತೇಶ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:48 IST
Last Updated 6 ಫೆಬ್ರುವರಿ 2026, 6:48 IST
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ  
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ     

ಹಾವೇರಿ: ‘ಹಾವೇರಿಯಲ್ಲಿ ಫೆ. 13ರಂದು ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶ ಜರುಗಲಿವೆ. 1.20 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಲಿದ್ದಾರೆ. ಸಮಾವೇಶದ ತಯಾರಿ ಕೆಲಸಗಳ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಗಳು, ತಮ್ಮ ಜವಾಬ್ದಾರಿ ಅರಿತು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ರಾಜ್ಯ ಮಟ್ಟದ ಕಂದಾಯ ಇಲಾಖೆಯ ಹಕ್ಕುಪತ್ರ ವಿತರಣಾ ಸಮಾವೇಶ’ದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದ ಸಿದ್ಧತೆಗೆ ಸಮಯ ಬಹಳ ಉಳಿದಿಲ್ಲ. ಹಾಗಾಗಿ, ಆಯಾ ಸಮಿತಿಗಳಿಗೆ ವಹಿಸಲಾದ ಕೆಲಸಗಳಿಗೆ ವೇಗ ನೀಡಬೇಕು. ಸಣ್ಣ-ಪುಟ್ಟ ಸಮಸ್ಯೆಗಳನ್ನು ತಮ್ಮ ಹಂತದಲ್ಲೇ ಬಗೆಹರಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಬಾರದು’ ಎಂದರು.

‘ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ನಿರ್ಮಾಣ, ವಾಹನಗಳ ನಿಲುಗಡೆ ಪ್ರದೇಶಗಳ ಸಿದ್ಧತೆ ಆರಂಭಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳ, ಗಣ್ಯ ವ್ಯಕ್ತಿಗಳಿಗೆ ಸುಗಮ ಸಂಚಾರ, ವಾಹನ ವ್ಯವಸ್ಥೆ, ಆಸನ, ಊಟ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ತುರ್ತು ಆರೋಗ್ಯ ಚಿಕಿತ್ಸೆ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿ ಮಾಡಬೇಕು’ ಎಂದರು.

ADVERTISEMENT

‘ಹುಬ್ಬಳ್ಳಿ ಕಡೆಯಿಂದ ಬರುವವರ ವಾಹನಗಳಿಗೆ ಪ್ರತ್ಯೇಕ ಹಾಗೂ ದಾವಣಗೆರೆ ಕಡೆಯಿಂದ ಬರುವವವರಿಗೆ ಪ್ರತ್ಯೇಕವಾಗಿ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ನಿಲುಗಡೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು’ ಎಂದರು.

ಫಲಾನುಭವಿಗಳಿಗೆ ಪ್ರತ್ಯೇಕ ಪಾಸ್: ‘ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ಹಕ್ಕು ಪತ್ರಗಳನ್ನು ವಿತರಣೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು. ಫಲಾನುಭವಿಗಳ ಪಟ್ಟಿಯನ್ನು ಎಕ್ಸಲ್ ಶೀಟ್‌ನಲ್ಲಿ ಪಡೆದುಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳಿಗೆ ಪ್ರತ್ಯೇಕ ಪಾಸ್ ಹಾಗೂ ಜಿಲ್ಲಾವಾರು ಆಸನ ವ್ಯವಸ್ಥೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಕಾರ್ಯಕ್ರಮ ವ್ಯವಸ್ಥೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಹಾವೇರಿ ನಗರದ ಖಾಸಗಿ ಹೋಟೆಲ್, ಕಲ್ಯಾಣ ಮಂಟಪ, ವಿವಿಧ ಭವನಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕು. ಈ ಜವಾಬ್ದಾರಿಯನ್ನು ವಸತಿ ಸಮಿತಿ ನಿರ್ವಹಿಸಬೇಕು’ ಎಂದರು.

‘ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ನೂಕುನುಗ್ಗಲು ಆಗದಂತೆ ಯೋಜನೆ ರೂಪಿಸಬೇಕು. ಸಮಾವೇಶದ ಕುರಿತು ಬ್ಯಾನರ್, ಪೋಲ್ಸ್, ಪೋಸ್ಟರ್‌ಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ, ವೃತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬ್ಯಾನರ್ ಪ್ರದರ್ಶಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದಶಿ ಪುನಿತ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿಗಳಾದ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ ಇದ್ದರು.

ಫೆ. 13ರಂದು ಸಾಧನಾ ಸಮಾವೇಶ ತಯಾರಿಗೆ ಸಮಿತಿಗಳ ರಚನೆ ಜಿಲ್ಲಾಧಿಕಾರಿಗಳಿಂದ ಸಿದ್ಧತಾ ಸಭೆ

ತುರ್ತು ಪರಿಸ್ಥಿತಿ ನಿರ್ವಹಣೆ

‘ವೇದಿಕೆಯ ಪಕ್ಕದಲ್ಲಿ ಅಗ್ನಿಶಾಮಕ ವಾಹನ ಆಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಅಧಿಕಾರಿಗಳಿಗೆ ವಾಹನಗಳಿಗೆ ಮಾಧ್ಯಮದವರಿಗೆ ವಿ.ಐ.ಪಿ.ಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ಅಧಿಕಾರಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.