ADVERTISEMENT

ಹಾವೇರಿ: ಬದುಕಿದ್ದವರಿಗೆ ಮರಣಪತ್ರ ಕೊಟ್ಟ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:12 IST
Last Updated 29 ಜನವರಿ 2026, 7:12 IST
ಆತ್ಮಹತ್ಯೆಗೆ ಮುಂಚೆ ಕುಮಾರ್ ಕೆ. ಅವರ ಬರೆದಿರುವ ಮರಣಪತ್ರ
ಆತ್ಮಹತ್ಯೆಗೆ ಮುಂಚೆ ಕುಮಾರ್ ಕೆ. ಅವರ ಬರೆದಿರುವ ಮರಣಪತ್ರ   

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಶಿರಗಂಬಿ ಗ್ರಾಮದ ಟೋಪನಗೌಡ ಗುಬ್ಬಿ ಎಂಬುವರಿಗೆ ಬದುಕಿದ್ದಾಗಲೇ ಸತ್ತಿದ್ದಾರೆ ಎಂಬುದಾಗಿ ಮರಣಪತ್ರ ನೀಡಿದ್ದು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಟೋಪನಗೌಡ ಅವರ ಪತ್ನಿ ತೀರಿಕೊಂಡಿದ್ದರು. ಅವರ ಮರಣಪತ್ರ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗೆ 2021ರಲ್ಲಿ ಟೋಪನಗೌಡ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿ, ಪತ್ನಿಯ ಮರಣದ ಬದಲು ‘ಟೋಪನಗೌಡ ಅವರು ಮರಣ ಹೊಂದಿದ್ದಾರೆ’ ಎಂದು ಅನುಮೋದಿಸಿ 2021ರ ಡಿಸೆಂಬರ್ 9ರಂದೇ ಮರಣಪತ್ರ ನೀಡಿದ್ದಾರೆ. 

ಇದೇ ಮರಣಪತ್ರ ಆಧರಿಸಿ ಟೋಪನಗೌಡ ಅವರ ಎಫ್‌ಐಡಿ ರದ್ದಾಗಿದೆ. ಪಡಿತರ ಚೀಟಿಯಲ್ಲೂ ಹೆಸರು ಹೋಗಿದೆ. ಇದರಿಂದ ಬೇಸತ್ತ ಟೋಪನಗೌಡ, ಮರಣಪತ್ರದ ಮಾಹಿತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಟ್ಟೀಹಳ್ಳಿ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ಅಷ್ಟಾದರೂ ಅವರ ಮರಣಪತ್ರವನ್ನು ಹಿಂಪಡೆದಿಲ್ಲವೆಂಬ ಆರೋಪವಿದೆ.

ADVERTISEMENT

ಟೋಪನಗೌಡ ಅವರ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡಿರುವ ಮಾಜಿ ಶಾಸಕ ಬಿ.ಸಿ. ಪಾಟೀಲ, ‘ಬದುಕಿರುವ ವ್ಯಕ್ತಿ, ಸತ್ತಿದ್ದಾನೆಂದು ಮರಣಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಕಾಂಗ್ರೆಸ್ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಇದುವೇ ಜೀವಂತ ಉದಾಹರಣೆ. ಟೋಪನಗೌಡ ಅವರಿಗೆ ಬದುಕಿರುವಾಗಲೇ, ಸತ್ತಿರುವ ಪ್ರಮಾಣ ಪತ್ರ ನೀಡಲಾಗಿದೆ. ಇದು ದುರ್ದೈವ. ನಾಚಿಕೆಗೇಡಿನ ಕೃತ್ಯ. ಅಧಿಕಾರಿಗಳು, ಬದುಕಿದ್ದವರನ್ನೇ ಸಾಯಿಸಿರುವುದು ರಾಜ್ಯ ಸರ್ಕಾರವೇ ತಲೆತಗ್ಗಿಸುವ ಸಂಗತಿ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.