ADVERTISEMENT

ಹಾವೇರಿ ಜಿಲ್ಲೆಯೊಳಗೆ ಬಸ್ ಸಂಚಾರ ಆರಂಭ

ಶೇ 50ರಷ್ಟು ಆಸನಗಳಲ್ಲಿ ಅವಕಾಶ: ಪ್ರಯಾಣಿಕರಿಗೆ ಮಾಸ್ಕ್‌ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2020, 16:09 IST
Last Updated 3 ಮೇ 2020, 16:09 IST
   

ಹಾವೇರಿ: ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವ ಕಾರ್ಮಿಕರನ್ನು ಜಿಲ್ಲೆಯ ನಾಲ್ಕು ತಾಣಗಳಲ್ಲಿ ಇಳಿಸಿ ಕ್ವಾರೆಂಟೈನ್ ವಾಚ್ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಅವರವರ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಅವರು ತಿಳಿಸಿದ್ದಾರೆ.

ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ 35 ಬಸ್‍ಗಳು ಹೊರಟಿವೆ. ಭಾನುವಾರ ಹಾವೇರಿಗೆ ಎರಡು ಬಸ್‍ಗಳು ಬಂದಿವೆ. ಸೋಮವಾರ ಎಂಟು ಬಸ್‍ಗಳು ಬರಲಿವೆ ಎಂದು ಈವರೆಗೆ ಮಾಹಿತಿ ರವಾನೆಯಾಗಿದೆ.

ಹೋಂ ಕ್ವಾರಂಟೈನ್‌ ಮುದ್ರೆ:

ADVERTISEMENT

ಹಾವೇರಿ ಜಿಲ್ಲೆಗೆ ಬರುವ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ಪ್ರಯಾಣಿಕರನ್ನು ಜಿಲ್ಲೆಯ ಮಾಕನೂರು ಚೆಕ್‍ಪೋಸ್ಟ್, ರಾಣೇಬೆನ್ನೂರು, ಹಾವೇರಿ ಹಾಗೂ ಶಿಗ್ಗಾವಿಗಳಲ್ಲಿ ಇಳಿಸಿಕೊಂಡು ಅಲ್ಲಿಂದ ‘ಕ್ವಾರೆಂಟೈನ್ ವಾಚ್ ಆ್ಯಪ್’ ನಲ್ಲಿ ನೋಂದಾಯಿಸಿಕೊಂಡು ಅವರವರ ಮನೆಗೆ ಕಳುಹಿಸಿಕೊಡಲು ಬಸ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಪ್ರಯಾಣಿಕರು ಹೋಂ ಕ್ವಾರೆಂಟೈನ್ ಸೀಲ್‍ಹಾಕಿ 14 ದಿನ ಗೃಹ ಪ್ರತ್ಯೇಕತೆಯಲ್ಲಿ ಇರಿಸಿ ನಿಗಾ ವಹಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದರು.

10ರಿಂದ 15 ಬಸ್‌

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲೆಯೊಳಗೆ ನಾಳೆಯಿಂದ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸುತ್ತೇವೆ. ಪ್ರತಿ ತಾಲ್ಲೂಕು ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಹಾಗೂ ತಾಲ್ಲೂಕು ಕೇಂದ್ರದಿಂದ ಹೋಬಳಿ ಕೇಂದ್ರಗಳಿಗೆ, ಹೋಬಳಿ ಕೇಂದ್ರಗಳಿಂದ ದೊಡ್ಡ ದೊಡ್ಡ ಗ್ರಾಮಗಳಿಗೆ ಆರಂಭಿಕವಾಗಿ ಬಸ್ ಸಂಚಾರ ಮೇ 4ರಿಂದ ಆರಂಭಗೊಳಿಸುತ್ತಿದ್ದೇವೆ. ಪ್ರತಿ ತಾಲ್ಲೂಕಿನ ಡಿಪೋದಿಂದ 10ರಿಂದ 15 ಬಸ್‍ಗಳ ಸಂಚಾರ ಆರಂಭಿಸಲಾಗುವುದು. ಜನರ ಬೇಡಿಕೆಗೆ ಅನುಸಾರವಾಗಿ ಬಸ್ ಸಂಖ್ಯೆಗಳನ್ನು ಹೆಚ್ಚಳ ಮಾಡುವುದಾಗಿ ಕೆ.ಎಸ್.ಆರ್.ಟಿ.ಸಿ. ಡಿ.ಸಿ.ಜಗದೀಶ್ ತಿಳಿಸಿದ್ದಾರೆ.

ಶೇ 50ರಷ್ಟು ಪ್ರಯಾಣಿಕರಿಗೆ ಅವಕಾಶ

ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಿದ್ದೇವೆ. ಪ್ರಯಾಣಿಕರು ಮಾಸ್ಕ್ ಧರಿಸಿದರೆ ಮಾತ್ರ ಬಸ್‍ನಲ್ಲಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗುವುದು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೈತೊಳಯಲು ಸೋಪು ಹಾಗೂ ನೀರಿನ ವ್ಯವಸ್ಥೆ ಸಾರಿಗೆ ಇಲಾಖೆ ಮಾಡಲಿದೆ. ಬಸ್ಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಯಮಾನುಸಾರ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಬೇಕಾಗುತ್ತದೆ. ಬಸ್ಸಿನ ಆಸನದ ಸಾಮರ್ಥ್ಯದಶೇ 50ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.