ADVERTISEMENT

ಹಾವೇರಿ | ಲೋಕ ಅದಾಲತ್: 1.09 ಲಕ್ಷ ಪ್ರಕರಣ ಇತ್ಯರ್ಥ

₹ 50.43 ಕೋಟಿ ಮೊತ್ತದ ರಾಜಿ: ವ್ಯಾಜ್ಯ ಕೈಬಿಟ್ಟು ಒಂದಾದ 16 ದಂಪತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:24 IST
Last Updated 16 ಡಿಸೆಂಬರ್ 2025, 2:24 IST
ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ಹಾಜರಿದ್ದರು
ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ಹಾಜರಿದ್ದರು   

ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1.09 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಕಕ್ಷಿದಾರರು ಪರಸ್ಪರ ಒಪ್ಪಿ ₹ 5.43 ಕೋಟಿ ಮೊತ್ತದಷ್ಟು ರಾಜಿ ಮಾಡಿಕೊಂಡಿದ್ದಾರೆ.

‘ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಶನಿವಾರ (ಡಿ. 13) ರಾಷ್ಟ್ರೀಯ ಲೋಕ ಅದಾಲತ್ ಏರ್ಪಡಿಸಲಾಗಿತ್ತು. ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಳ್ಳಲು ಅವಕಾಶವಿತ್ತು. ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದಾಲತ್ ಯಶಸ್ವಿಗೊಳಿಸಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ತಿಳಿಸಿದರು.

‘ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವದ 1,53,910 ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ 1,09,092 ಪ್ರಕರಣಗಳು ಇತ್ಯರ್ಥಗೊಂಡಿವೆ. ₹50.43 ಕೋಟಿ ಮೊತ್ತದಷ್ಟು ಮೊತ್ತದ ರಾಜಿಯಾಗಿದೆ’ ಎಂದರು.

ADVERTISEMENT

‘ಅದಾಲತ್‌ನಲ್ಲಿ ಈ ಬಾರಿ ಕೌಟುಂಬಿಕ ಪ್ರಕರಣಗಳಲ್ಲಿ 16 ದಂಪತಿ ರಾಜಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ ವಿವಿಧ ಕಾರಣಕ್ಕೆ ಕೌಟುಂಬಿಕ ವ್ಯಾಜ್ಯ ಹೂಡಿದ್ದರು. ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಪತಿ–ಪತ್ನಿ, ಪರಸ್ಪರ ಒಪ್ಪಿಗೆ ಸೂಚಿಸಿ ರಾಜಿ ಮಾಡಿಕೊಂಡರು. ಸ್ಥಳದಲ್ಲಿಯೇ ಹಾರ ಬದಲಾಯಿಸಿಕೊಂಡು ಒಂದಾದರು’ ಎಂದರು.

‘ನ್ಯಾಯಾಲಯಗಳಲ್ಲಿ ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾಗಿದ್ದ 6,162 ಪ್ರಕರಣಗಳ ಪೈಕಿ 5,362 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹ 27.96 ಕೋಟಿ ಮೊತ್ತದಷ್ಟು ರಾಜಿಯಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾಗಿದ್ದ 1,47,748 ಪ್ರಕರಣಗಳಲ್ಲಿ 1,03,730 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹ 22.46 ಕೋಟಿ ಮೊತ್ತದಷ್ಟು ರಾಜಿಯಾಗಿದೆ’ ಎಂದು ಹೇಳಿದರು.

‘ಹಾನಗಲ್‌ನಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಐದು ವರ್ಷಕ್ಕೂ ಮೇಲ್ಪಟ್ಟ ಅವಧಿಯ ದಾವೆಯಯು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿದೆ. ಹಾವೇರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಎರಡು, ರಾಣೆಬೆನ್ನೂರಲ್ಲಿ ಆರು, ಶಿಗ್ಗಾವಿಯಲ್ಲಿ ಐದು, ಸವಣೂರಿನಲ್ಲಿ ಎರಡು ಹಾಗೂ ಬ್ಯಾಡಗಿಯಲ್ಲಿ ಒಂದು ಸೇರಿ 16 ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಮಾಡಿಕೊಂಡಿದ್ದಾರೆ’ ಎಂದರು.

‘ಜಿಲ್ಲಾ ವಕೀಲರ ಸಂಘ, ಎಲ್ಲ ತಾಲ್ಲೂಕು ವಕೀಲರ ಸಂಘ, ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಪೊಲೀಸರು, ಹಾಗೂ ಕಕ್ಷಿಗಾದಾರರ ಸಹಕಾರದೊಂದಿಗೆ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿದೆ’ ಎಂದು ತಿಳಿಸಿದರು

ಲೋಕ ಅದಾಲತ್‌ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶರಾದ ಶ್ರೀಶೈಲಜಾ ಹಾಜರಿದ್ದರು.

ಇತ್ಯರ್ಥಕ್ಕೆ ನಿಗದಿಪಡಿಸಿದ್ದ ಪ್ರಕರಣಗಳು

‘ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು ಮೋಟಾರು ವಾಹನಗಳ ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು ಚೆಕ್ ಅಮಾನ್ಯ ಪ್ರಕರಣಗಳು ವಾಣಿಜ್ಯ ಪ್ರಕರಣಗಳು ವ್ಯಾಜ್ಯಪೂರ್ವ ಪ್ರಕರಣಗಳು ಸೇವಾ ಪ್ರಕರಣಗಳು ರಾಜಿ ಆಗಬಲ್ಲ ಅಪರಾಧಿಕ ಪ್ರಕರಣಗಳು ಗ್ರಾಹಕ ವ್ಯಾಜ್ಯ ಪ್ರಕರಣಗಳು ಪಾಲುದಾರಿಕಾ ಪ್ರಕರಣಗಳು ಭೂ ಸ್ವಾಧೀನ ಪ್ರಕರಣಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು’ ಎಂದು ನ್ಯಾಯಾಧೀಶರಾದ ಬಿರಾದಾರ ದೇವಿಂದ್ರಪ್ಪಾ ಎನ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.