ಹಾವೇರಿ: ‘ಹಾಲು ಉತ್ಪಾದಕರು ಹೆಚ್ಚಿನ ಫಲಾಪೇಕ್ಷೆ ಬಯಸದೇ ಗುಣಮಟ್ಟದ ಹಾಲನ್ನು ನೀಡಿದರೆ ಮಾತ್ರ ಒಕ್ಕೂಟ ಬೆಳೆಯುತ್ತದೆ. ಹಾಲಿನಲ್ಲಿ ನೀರು ಬೆರೆಸಿ ಮಾರಿದರೆ, ಒಕ್ಕೂಟವೂ ಹಾಳಾಗುತ್ತದೆ. ಇದರಿಂದ ಹಾಲು ಉತ್ಪಾದಕರ ಬದುಕಿನ ಮೇಲೆ ಪೆಟ್ಟು ಬೀಳುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಗುತ್ತಲ ರಸ್ತೆಯಲ್ಲಿ ನಿರ್ಮಿಸಿರುವ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾವೆಮುಲ್) ನೂತನ ಆಡಳಿತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಜಯಪುರ ಹಾಗೂ ಹಾವೇರಿ ಎರಡೂ ಒಕ್ಕೂಟಗಳು ನಷ್ಟದಲ್ಲಿದ್ದವು. ಈಗ ವಿಜಯಪುರ ಒಕ್ಕೂಟ ಲಾಭದಲ್ಲಿ ಬಂದಿದೆ. ಆದರೆ, ಹಾವೇರಿ ಮಾತ್ರ ನಷ್ಟದಲ್ಲೇ ಉಳಿದುಕೊಂಡಿದೆ. ಹಾಲಿನಲ್ಲಿ ನೀರು ಬೆರೆಸುವುದು ಇದಕ್ಕೊಂದು ಕಾರಣ. ರೈತರು ಮನಸ್ಸು ಮಾಡಿದರೆ, ಒಕ್ಕೂಟ ಲಾಭದಲ್ಲಿ ಬರುತ್ತದೆ. ಖಾಸಗಿ ಕಂಪನಿಗಳ ಆಮಿಷಕ್ಕೆ ಒಳಗಾಗದೇ, ₹ 1 ಕಡಿಮೆ ಬಂದರೂ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಕೊಡುತ್ತೇವೆಂದು ರೈತರು ಶಪಥ ಮಾಡಬೇಕು’ ಎಂದು ಹೇಳಿದರು.
‘ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದಲ್ಲಿ ಜನರಿಗೆ ಸರಿಯಾಗಿ ಕುಡಿರುವ ನೀರಿಲ್ಲ. ಆದರೆ, ಅಲ್ಲಿ ಪ್ರತಿನಿತ್ಯ 2 ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತದೆ. ಹಾಲಿನಲ್ಲಿ ಹನಿ ನೀರನ್ನು ಸಹ ಅವರು ಬೆರೆಸುವುದಿಲ್ಲ. ಮನೆಗೊಂದು ಎಮ್ಮೆಯಿದೆ. ಇದರಿಂದಲೇ ಇಂದು ಟಕ್ಕಳಗಿ ಹೈನುಗಾರಿಕೆಗೆ ಮಾದರಿಯಾಗಿದೆ. ಇದೇ ರೀತಿಯಲ್ಲಿ ಹಾವೇರಿ ರೈತರೂ ಸುಧಾರಣೆಯಾಗಬೇಕು’ ಎಂದು ತಿಳಿಸಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ರೈತರು ಕೃಷಿ ಜೊತೆಯಲ್ಲಿ ಉಪ ಕಸುಬು ಮಾಡಬೇಕು. ಅದಕ್ಕೆ ಸರ್ಕಾರಗಳು ಶಕ್ತಿ ತುಂಬಬೇಕು. ನನ್ನ ಅಧಿಕಾರ ಅವಧಿಯಲ್ಲಿ ₹ 100 ಕೋಟಿ ಬಂಡವಾಳದೊಂದಿಗೆ ಹಾಲು ಉತ್ಪಾದಕರ ಬ್ಯಾಂಕ್ ಮಾಡಲು ಹೊರಟಿದ್ದೆ. ಆರ್‌ಬಿಐ ಅನುಮತಿ ಸಿಗಲಿಲ್ಲ. ಅದರ ಬದಲು, ಹಾಲು ಉತ್ಪಾದಕರ ಕೋ–ಆಪರೇಟಿವ್ ಬ್ಯಾಂಕ್ ಮಾಡಲು ಅವಕಾಶವಿದೆ. ಇಂದಿನ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.
ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ಶಾಸಕರಾದ ಶ್ರೀನಿವಾಸ್ ಮಾನೆ, ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ಯಾಸೀರ್ ಅಹ್ಮದ್ ಖಾನ್ ಪಠಾಣ ಇದ್ದರು.
‘ಹಾಲು ಕಷ್ಟ ಮದ್ಯ ಸುಲಭ’
ಇಂದಿನ ದಿನಮಾನಗಳಲ್ಲಿ ಹಾಲು ಮಾರುವುದು ಕಷ್ಟ. ಮದ್ಯ ಮಾರುವುದು ಸುಲಭ. ಹಾಲು ಮಾರುವವರು ಮನೆಗೆ ಹೋಗುತ್ತಾರೆ. ಹಾಲಿನಲ್ಲಿ ನೀರು ಹಾಕಿದ್ದಿಯಾ ಎಂದು ಜನರು ಪ್ರಶ್ನಿಸುತ್ತಾರೆ. ಅದೇ ಜನರು ಮದ್ಯ ಕುಡಿಯಲು ಅದು ಇರುವ ಜಾಗಕ್ಕೆ ಹೋಗುತ್ತಾರೆ. ಅದಕ್ಕೆ ನೀರು ಬೆರೆಸಿ ಕುಡಿಯುತ್ತಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು. ‘ಹಾಲು ಮಾರುವವರಿಗೆ ಪುಣ್ಯ ಸಿಗುತ್ತದೆ. ಆದರೆ ಮದ್ಯ ಮಾರುವವರಿಗೆ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ನಾನು ಹೇಳುವುದಿಲ್ಲ’ ಎಂದರು.
‘ರೈತರ ಬೆಳೆಗೆ ತಕ್ಕ ಬೆಲೆ ಇಲ್ಲ’
ಯಾವುದೇ ಪ್ರಧಾನಿ ಬರಲಿ ಮುಖ್ಯಮಂತ್ರಿ ಬರಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಕಟ್ಟುವ ಸ್ಥಿತಿ ಇನ್ನೂ ಬರದಿರುವುದು ದುರ್ದೈವದ ಸಂಗತಿ’ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ‘ರೈತ ಬೆಳೆಗೆ ಸೂಕ್ತ ಬೆಲೆ ನೀಡುವ ಬಗ್ಗೆ ಚಿಂತನೆ ಆಗಬೇಕು. ರೈತರು ಈ ವಿಚಾರದಲ್ಲಿ ಒಗ್ಗಟ್ಟಾಗಿರಬೇಕು. ವೈಜ್ಞಾನಿಕ ಕೃಷಿಯತ್ತ ಗಮನ ನೀಡಬೇಕು. ಪಕ್ಕದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದನೆಂದು ನಾವು ಅದನ್ನೇ ಬೆಳೆಯುವುದನ್ನು ನಿಲ್ಲಿಸಬೇಕು. ಮಿಶ್ರ ಬೆಳೆ ಮೂಲಕ ಲಾಭದ ಕೃಷಿ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.