ADVERTISEMENT

ಹಾನಗಲ್ ಬಂದ್: ರಾಜಕೀಯ ಬೇಡ- ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:34 IST
Last Updated 16 ಆಗಸ್ಟ್ 2025, 2:34 IST
<div class="paragraphs"><p>ಸಚಿವ ಶಿವಾನಂದ ಪಾಟೀಲ</p></div>

ಸಚಿವ ಶಿವಾನಂದ ಪಾಟೀಲ

   

ಹಾವೇರಿ: ‘ಜಿಲ್ಲೆಯಲ್ಲಿ ಯಾರೇ ಅಪರಾಧ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮವಾಗುತ್ತಿದೆ. ಆದರೆ, ಹಾನಗಲ್‌ ಪಟ್ಟಣದಲ್ಲಿ ಒಂದು ನಿರ್ದಿಷ್ಟ ಸಂಘಟನೆ ಬಂದ್ ಆಚರಿಸಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಯಾರಿಗಾದರೂ ತೊಂದರೆಯಾದರೆ ಧೈರ್ಯವಾಗಿ ಪೊಲೀಸರಿಗೆ ದೂರು ನೀಡಬೇಕು’ ಎಂದರು.

ADVERTISEMENT

‘ಹಾನಗಲ್ ಬಂದ್ ವಿಚಾರ ಗಮನಕ್ಕೆ ಬರುತ್ತಿದ್ದಂತೆ, ಎಸ್‌ಪಿ ಅವರನ್ನು ಸ್ಥಳಕ್ಕೆ ಕಳುಹಿಸಿದ್ದೆ. ಅವರು ಪ್ರತ್ಯೇಕ ಸಭೆ ಮಾಡಿ ಸಮಸ್ಯೆ ಆಲಿಸಿದ್ದಾರೆ. ಕಾನೂನು ಉಲ್ಲಂಘಿಸುತ್ತಿರುವವರು ಯಾರು? ಯಾರಿಂದ ತೊಂದರೆ ಆಗುತ್ತಿದೆ ಎಂಬುದನ್ನು ನಿಖರವಾಗಿ ತಿಳಿಸಲು ಹೇಳಿದ್ದಾರೆ. ಅದನ್ನು ತಿಳಿಸಿದರೆ, ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ’ ಎಂದು ಹೇಳಿದರು.

‘ಹಾವೇರಿಯಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆದಾಗ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಿದೆ. ಆದರೆ, ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯೇ ಹಿಂದೆ ಸರಿದಿದ್ದಾರೆ. ‘ನನ್ನ ಮೇಲೆ ಏನೂ ಆಗಿಲ್ಲ. ಆರೋಪಿಗಳನ್ನೇ ನಾನು ನೋಡಿಲ್ಲ’ ಎಂದು ಹೇಳಿದ್ದಾರೆ. ಘಟನೆ ನಡೆದಾಗ ಅಷ್ಟೆಲ್ಲ ತನಿಖೆ ಮಾಡಿದೆವು. ಈಗ ನಮ್ಮ ಹಣೆಬರಹವೇ ಸರಿ ಇಲ್ಲದಂತಾಗಿದೆ’ ಎಂದರು.

ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ ಮಾತನಾಡಿ, ‘ಹಾನಗಲ್‌ನಲ್ಲಿ ಸಭೆ ಮಾಡಲಾಗಿದೆ. ಮಹಿಳೆಯರು ಹೊರಗೆ ಬರದ ಸ್ಥಿತಿ ಇರುವುದಾಗಿ ಕೆಲವರು ಹೇಳಿದರು. ಯಾರಿಗೆ ತೊಂದರೆ ಆಗುತ್ತದೆ ಎಂಬುದನ್ನು ನಿಖರವಾಗಿ ತಿಳಿಸಿ ಎಂದರೆ, ಇದುವರೆಗೂ ತಿಳಿಸಿಲ್ಲ. ಕೆಲವರು ಸಾಮಾಜಿಕ‌ ಮಾಧ್ಯಮಗಳ ಮೂಲಕ ಪ್ರಚೋದನಾ ಪೋಸ್ಟ್ ಹಾಕುತ್ತಿದ್ದಾರೆ. ಅವರ ಮೇಲೆ ಈಗಾಗಲೇ ಕ್ರಮವಾಗಿದೆ’ ಎಂದರು.

300 ಬೆಡ್ ಆಸ್ಪತ್ರೆ: ‘ಹಾವೇರಿ ಜಿಲ್ಲಾ ಆಸ್ಪತ್ರೆಯನ್ನು 500 ಬೆಡ್‌ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಹಿಮ್ಸ್) ಹೊಸದಾಗಿ 300 ಬೆಡ್‌ಗಳ ಆಸ್ಪತ್ರೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು.

‘ಬೇಡ್ತಿ– ವರದಾ ನದಿ ಜೋಡಣೆ ಬಗ್ಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (ಎನ್‌ಡಬ್ಲ್ಯುಡಿಎ) ಸಲಹೆ ನೀಡಿದೆ. ಅದನ್ನು ಆಧರಿಸಿ ಡಿಪಿಆರ್ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಕ್ರೀಡಾಂಗಣಕ್ಕೆ ₹10 ಕೋಟಿ: ‘ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಗೂ ಇತರ ಕೆಲಸಗಳನ್ನು ಮಾಡಿಸಲು ₹ 10 ಕೋಟಿ ಮಂಜೂರಾಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

‘ಮುಖ್ಯರಸ್ತೆಯಲ್ಲಿರುವ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.