ADVERTISEMENT

ರೈತರ ಜಮೀನಿನ ಸ್ವಾಧೀನ ಅಸಾಧ್ಯ: ಶಾಸಕ ಬಸವರಾಜ ಶಿವಣ್ಣ

​ಪ್ರಜಾವಾಣಿ ವಾರ್ತೆ
Published 30 ಮೇ 2023, 13:20 IST
Last Updated 30 ಮೇ 2023, 13:20 IST
ಬ್ಯಾಡಗಿ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. ತಹಶೀಲ್ದಾರ್ ಎಸ್‌.ಎ.ಪ್ರಸಾದ, ಇಒ ಮಲ್ಲಿಕಾರ್ಜುನ ಕೆ.ಎಂ ಇದ್ದಾರೆ
ಬ್ಯಾಡಗಿ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. ತಹಶೀಲ್ದಾರ್ ಎಸ್‌.ಎ.ಪ್ರಸಾದ, ಇಒ ಮಲ್ಲಿಕಾರ್ಜುನ ಕೆ.ಎಂ ಇದ್ದಾರೆ   

ಬ್ಯಾಡಗಿ: ‘ಪಟ್ಟಣದ ಮುಖ್ಯ ರಸ್ತೆಯನ್ನು ಕಾನೂನು ರೀತಿಯಲ್ಲಿಯೇ ವಿಸ್ತರಣೆ ಮಾಡಬೇಕಾಗಿದ್ದು ಇದಕ್ಕೆ ಪೂರಕವಾದ ಕೆಲಸಗಳನ್ನು ಕಂದಾಯ, ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಮಾಡಬೇಕಾಗಿದೆ’ ಎಂದು ಶಾಸಕ ಬಸವರಾಜ ಶಿವಣ್ಣನವರ ಸೂಚನೆ ನೀಡಿದರು.

ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿರುವ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಷ್ಟೊಂದು ಅಭಿವೃದ್ಧಿ ಕಂಡಿಲ್ಲ. 2013ರಲ್ಲಿ ಶಾಸಕರಾಗಿದ್ದ ಅವಧಿಯಲ್ಲಿ ಮುಖ್ಯರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗಿದ್ದು, ಅದಕ್ಕಾಗಿ ₹9.80 ಕೋಟಿ ಅನುದಾನ ತೆಗೆದಿರಿಸಲಾಗಿತ್ತು. ಆದರೆ ಆಸ್ತಿ ಮಾಲೀಕರು ಹೈಕೋರ್ಟ್‌ಗೆ ಹೋಗಿದ್ದರಿಂದ ವಿಸ್ತರಣೆ ಸಾಧ್ಯವಾಗಿರಲಿಲ್ಲ. ಕಳೆದ ಒಂದೂವರೆ ದಶಕಗಳ ಕಾಲದ ಹೋರಾಟಕ್ಕೆ ಕೊನೆಯಾಗಬೇಕಾಗಿದ್ದು, ಹೈಕೋರ್ಟ್‌ ಸಹ ಈಗ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ. ಇನ್ಮುಂದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಪೂರಕವಾದ ಕೆಲಸಗಳನ್ನು ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಉಪವಿಭಾಗಾಧಿಕಾರಿಗಳ ಸಭೆಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿರುವುದು ಗಮನಕ್ಕೆ ಬಂದಿದೆ. ಬ್ಯಾಡಗಿ ಸುತ್ತಲಿನ ಹೊಲಗಳಿಗೆ ಕೋಟಿಗೂ ಹೆಚ್ಚು ಬೆಲೆ ಇದೆ ಹೀಗಾಗಿ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳುವುದು ಅಸಾಧ್ಯವಾದುದು ಎಂದು ಹೇಳಿದರು.

ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವಿಳಂಬದಿಂದಾಗಿ 24X7 ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಕಾಮಗಾರಿಗಳು ಶೇ90 ರಷ್ಟು ಪೂರ್ಣಗೊಂಡಿದ್ದರೂ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಹೀಗಾಗಿ ಅಗಲೀಕರಣಕ್ಕೆ ಚಾಲನೆ ದೊರೆಯಬೇಕಾಗಿದೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಪಿಡಿಒ ಹಾಗೂ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹೆಚ್ಚು ಜನಸಂಪರ್ಕ ಹೊಂದಿರುವ ತಹಶಿಲ್ದಾರ್ ಕಚೇರಿ, ತಾಲ್ಲೂಕು ಪಂಚಾಯ್ತಿ, ಕೃಷಿ, ಮೋಜಣಿ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕೆಂದು ಹೇಳಿದರು.

ಮುಂಗಾರು ಆರಂಭವಾಗಿದ್ದು ಬಿತ್ತನೆ ಬೀಜ, ಗೊಬ್ಬರ ಹಾಗೂ ಇನ್ನಿತರ ವಸ್ತುಗಳ ಪೂರೈಕೆಗೆ ಕೃಷಿ ಇಲಾಖೆ ಕ್ರಮ ಕೈಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಾಟವಾಗುವಂತೆ ನಿಗಾ ವಹಿಸಬೇಕು ಎಂದು ಕೃಷಿ ಅಧಿಕಾರಿಗೆ ಸೂಚಿಸಿದರು.

ಜಲಜೀವನ ಮಿಶನ್‌ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ದೋಷಪೂರಿತವಾಗಿವೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರ ಹಣ ಮಾತ್ರ ಪಾವತಿಸಬೇಕೆಂದು ತಾಕೀತು ಮಾಡಿದರು.

ತಹಶೀಲ್ದಾರ್ ಎಸ್.ಎ.ಪ್ರಸಾದ್, ಇಒ ಕೆ.ಎಂ.ಮಲ್ಲಿಕಾರ್ಜುನ, ಸಿಪಿಐ ಪಿ.ಎಸ್‌.ಬಸವರಾಜ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.