
ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಈ ಸಂಬಂಧ ಮನೆ ವಾರಸುದಾರರು ಸಲ್ಲಿಸಿದ್ದ 349 ಅರ್ಜಿಗಳ ಪೈಕಿ 161 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 188 ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಿರುವ ತಹಶೀಲ್ದಾರ್‌ಗಳು, ಈಗಾಗಲೇ ಹಲವರಿಗೆ ಪರಿಹಾರ ಮಂಜೂರು ಮಾಡಿದ್ದಾರೆ.
2025–26ನೇ ಸಾಲಿನ ಮುಂಗಾರು ಮಳೆಯ ಸಂದರ್ಭದಲ್ಲಿ ಆಗಿರುವ ಮನೆ ಹಾನಿ ಬಗ್ಗೆ ಪರಿಶೀಲನೆ ನಡೆಸಲು ತಹಶೀಲ್ದಾರ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಮನೆ ಹಾನಿ ಬಗ್ಗೆ ಸಲ್ಲಿಕೆಯಾಗಿದ್ದ 349 ಅರ್ಜಿಗಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್‌ಗಳು, ಸ್ಥಳಕ್ಕೆ ತೆರಳಿ ವಾಸ್ತವ ಸ್ಥಿತಿ ದಾಖಲಿಸಿಕೊಂಡಿದ್ದರು.
ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಹಾಗೂ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ನಿಧಿ) ನಿಯಮಾವಳಿ ಪ್ರಕಾರ ಮನೆ ಹಾನಿ ನಿರ್ಧರಿಸಲಾಗುತ್ತದೆ. ಆದರೆ, ಅನರ್ಹರು ಸಹ ಪರಿಹಾರದ ಆಸೆಗಾಗಿ ಅರ್ಜಿ ಸಲ್ಲಿಸಿದ್ದ ಸಂಗತಿ ತಹಶೀಲ್ದಾರ್ ಅವರ ಪರಿಶೀಲನೆಯಿಂದ ಗೊತ್ತಾಗಿದೆ.
ಅನರ್ಹರ ಅರ್ಜಿಯನ್ನು ತಿರಸ್ಕರಿಸಿರುವ ತಹಶೀಲ್ದಾರ್‌ಗಳು, ನೈಜ ಫಲಾನುಭವಿಗಳ ಅರ್ಜಿಗಳನ್ನು ಮಾತ್ರ ಅಂಗೀಕರಿಸಿದ್ದಾರೆ. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವರು, ‘ನಿಯಮಾವಳಿ ಪ್ರಕಾರ ಮನೆಗೆ ಹಾನಿಯಾದರೂ ಪರಿಶೀಲನೆ ಸಮರ್ಪಕವಾಗಿ ಮಾಡಿ ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಆರೋಪಿಸುತ್ತಿದ್ದಾರೆ. ಇಂಥವರಿಗೆ ದೂರು ನೀಡಲು ಸಹ ಅವಕಾಶ ಕಲ್ಪಿಸಲಾಗಿದೆ.
‘ಜಿಲ್ಲೆಯಲ್ಲಿ 2025–26ನೇ ಸಾಲಿನ ಮುಂಗಾರು ಮಳೆ ಸಂದರ್ಭದಲ್ಲಿ ಜೋರು ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ. ಹಾನಿ ಬಗ್ಗೆ 349 ಅರ್ಜಿಗಳು ಬಂದಿದ್ದವು. ಎಲ್ಲ ಕಡೆಯೂ ಪರಿಶೀಲನೆ ನಡೆಸಿ, ಫೋಟೊ ಸಮೇತ ಮಾಹಿತಿ ದಾಖಲಿಸಿಕೊಳ್ಳಲಾಗಿದೆ. 188 ಅರ್ಜಿಗಳನ್ನು ಅಂಗೀಕರಿಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. 161 ಅರ್ಜಿಗಳು ಅನರ್ಹವೆಂದು ಗೊತ್ತಾಗಿದ್ದರಿಂದ, ಅವುಗಳನ್ನು ತಿರಸ್ಕರಿಸಲಾಗಿದೆ’ ಎಂದು ತಹಶೀಲ್ದಾರ್‌ರೊಬ್ಬರು ಮಾಹಿತಿ ನೀಡಿದರು.
ಪೂರ್ವ ಮುಂಗಾರಿನಲ್ಲೂ 77 ಅರ್ಜಿ ತಿರಸ್ಕೃತ: ‘2025–26ನೇ ಸಾಲಿನ ಪೂರ್ವ ಮುಂಗಾರು ಸಂದರ್ಭದಲ್ಲಿಯೂ ಮನೆ ಹಾನಿ ಬಗ್ಗೆ 89 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಕೇವಲ 12 ಅರ್ಜಿಗಳನ್ನು ಮಾತ್ರ ಅಂಗೀಕರಿಸಿ, ₹ 7.54 ಲಕ್ಷ ಪರಿಹಾರ ಪಾವತಿಸಲಾಗಿದೆ. ಉಳಿದ, 77 ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ತಹಶೀಲ್ದಾರ್‌ರೊಬ್ಬರು ಹೇಳಿದರು.
‘ಸವಣೂರು ತಾಲ್ಲೂಕಿನಲ್ಲಿ 46 ಅರ್ಜಿಗಳು ಸಲ್ಲಿಕೆಯಾಗಿದ್ದವು. ನಿಯಮಾವಳಿ ಪ್ರಕಾರ ಹಾನಿಯಾಗದಿದ್ದರಿಂದ, ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದರು.
‘ಹಿಂಗಾರು ಮಳೆ ಸಂದರ್ಭದಲ್ಲಿಯೂ ಮನೆ ಹಾನಿ ಬಗ್ಗೆ 30 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 17 ಅರ್ಜಿಗಳು ಅಂಗೀಕೃತಗೊಂಡಿವೆ. ಉಳಿದ 13 ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದರು.
‘ಮನೆಯಲ್ಲದ ತಗಡಿನ ರೀತಿಯ ಶೆಡ್ ಹಾನಿಗೂ ಕೆಲವರು ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಈಗಾಗಲೇ ಪರಿಹಾರ ಪಡೆದವರು ಸಹ ಅರ್ಜಿ ಹಾಕಿದ್ದರು. ಇಂಥ ಹಲವು ಕಾರಣದಿಂದಾಗಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ಹೇಳಿದರು.
40,544 ರೈತರಿಗೆ ಬೆಳೆ ನಷ್ಟ: ‘ಮುಂಗಾರು ಮಳೆಯಿಂದಾಗಿ ಬೆಳೆ ಹಾನಿಯಾದ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. 18,821 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, 40,554 ರೈತರು ಆರ್ಥಿಕವಾಗಿ ಕುಗ್ಗಿದ್ದಾರೆ. ಇವರೆಲ್ಲರಿಗೂ ಸರ್ಕಾರದಿಂದ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.
‘ಮಳೆಯ ಸಂದರ್ಭದಲ್ಲಿ ಶಾಲೆಗಳ ಕೊಠಡಿಗಳು, ವಿದ್ಯುತ್ ಕಂಬಗಳು, ಅಂಗನವಾಡಿ ಕೇಂದ್ರಗಳು, ಕೆರೆಗಳು, ರಸ್ತೆ ಸೇರಿದಂತೆ ₹17.79 ಕೋಟಿ ಮೊತ್ತದಷ್ಟು ಮೂಲ ಸೌಕರ್ಯಕ್ಕೆ ಹಾನಿಯಾಗಿದೆ’ ಎಂದರು.
11 ಮಂದಿ ಸಾವು: ‘ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ಸಂದರ್ಭದಲ್ಲಿ ಸಿಡಿಲು ಬಡಿದು, ಕಟ್ಟಡ/ಮರ ಕುಸಿದು 11 ಮಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ಸರ್ಕಾರದಿಂದ ₹ 55 ಲಕ್ಷ ಪರಿಹಾರ ವಿತರಿಸಲಾಗಿದೆ. ಜಾನುವಾರುಗಳೂ ಮೃತಪಟ್ಟಿದ್ದು, ವಾರಸುದಾರರಿಗೆ ಪರಿಹಾರ ನೀಡಲಾಗಿದೆ’ ಎಂದು ತಿಳಿಸಿದರು.
ಬೆಳೆ ಹಾನಿ ಸಂಬಂಧ ಜಿಲ್ಲೆಯ 33726 ರೈತರಿಗೆ ₹ 14.66 ಕೋಟಿ ಪರಿಹಾರ ವಿತರಿಸಲಾಗಿದೆ. ಈಗ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದ್ದು ಅರ್ಹ ರೈತರಿಗೆ ಹೆಚ್ಚುವರಿಯಾಗಿ ₹ 14.18 ಕೋಟಿ ಪರಿಹಾರ ಸಿಗಲಿದೆವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.