ಹಾವೇರಿ: ತಾಲ್ಲೂಕಿನ ವರದಾಹಳ್ಳಿ ಸಮೀಪದಲ್ಲಿ ವರದಾ ನದಿಗೆ ಹಾರಿ ತಾಯಿ ಸವಿತಾ ನಾಗರಾಜ ಉಳ್ಳಾಗಡ್ಡಿ (38) ಹಾಗೂ ಮಗಳು ಕಾವ್ಯಾ (12) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳ ಮೃತದೇಹ ಸೋಮವಾರ ಪತ್ತೆಯಾಗಿದೆ. ತಾಯಿ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
‘ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪದ ಸವಿತಾ ಅವರನ್ನು ವರದಾಹಳ್ಳಿಯ ನಾಗರಾಜ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಕಾವ್ಯಾ ಹಾಗೂ ಇಬ್ಬರು ಗಂಡು ಮಕ್ಕಳಿದ್ದರು. ಕೌಟುಂಬಿಕ ಕಲಹದಿಂದಾಗಿ ಸವಿತಾ ಹಾಗೂ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಪೋಷಕರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಹೇಳಿದರು.
‘ವರದಾಹಳ್ಳಿ ಬಳಿಯೇ ವರದಾ ನದಿ ತುಂಬಿ ಹರಿಯುತ್ತಿದೆ. ಭಾನುವಾರ ಮಧ್ಯಾಹ್ನ ಮನೆಯಿಂದ ಹೋಗಿದ್ದ ತಾಯಿ–ಮಗಳು, ವರದಾ ನದಿಗೆ ಹಾರಿದ್ದರು. ನೀರು ಹೆಚ್ಚಿದ್ದರಿಂದ, ಬಹುಬೇಗನೇ ಮುಳುಗಿ ನೀರಿನೊಂದಿಗೆ ಹೋಗಿದ್ದರು. ಅದನ್ನು ನೋಡಿದ್ದ ಕೆಲವರು, ಠಾಣೆಗೆ ಮಾಹಿತಿ ನೀಡಿದ್ದರು.’
‘ನದಿಯಲ್ಲಿ ಹುಡುಕಾಟ ನಡೆಸಿದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆವು. ಮಗಳು ಕಾವ್ಯಾ ಮೃತದೇಹ ಮಾತ್ರ ಸಿಕ್ಕಿದೆ. ತಾಯಿ ಮೃತದೇಹ ನೀರಿನೊಂದಿಗೆ ಹರಿದುಕೊಂಡು ಹೋಗಿರುವ ಸಾಧ್ಯತೆ ಇದ್ದು, ಹುಡುಕಾಟ ಮುಂದುವರಿಸಿದ್ದೇವೆ’ ಎಂದು ಹೇಳಿದರು.
‘ಬಾಲಕಿ ಕಾವ್ಯಾ, ನವೋದಯ ಶಾಲೆಯ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣ ಆಗಿದ್ದಳೆಂದು ಹೇಳಲಾಗುತ್ತಿದೆ. ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಪತಿ ಹಾಗೂ ಆತನ ಮನೆಯವರನ್ನೂ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.